ಗಂಡು ಮೆಟ್ಟಿದ ನಾಡಿನಲ್ಲಿ ಆನ್‌ಲೈನ್ ವಂಚಕರ ಹಾವಳಿ: ಹಲವರಿಗೆ ನಂಬಿಸಿ ಲಕ್ಷಾಂತರ ರೂ. ವಂಚನೆ, ಆಗಿದ್ದೇನು?
ಹುಬ್ಬಳ್ಳಿ, ಮೇ 23: ವಾಣಿಜ್ಯ ನಗರಿ, ಛೋಟಾ ಬಾಂಬೆ ಎಂದೆಲ್ಲ ಹೆಸರುಗಳಿಂದ ಕರೆಯಿಸಿಕೊಳ್ಳುವ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಸೈಬರ್ ವಂಚಕರ ಹಾವಳಿ ಹೆಚ್ಚಾಗಿದೆ. ಹಣ ಕಳೆದುಕೊಂಡವರ ಪೈಕಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ನಂಬಿಸಿ ಮೋಸ ಮಾಡಿ ಈ ಮೂರು ಪ್ರಕರಣಗಳಲ್ಲಿ ಬರೋಬ್ಬರಿ ಸುಮಾರು 18 ಲಕ್ಷ ರೂಪಾಯಿ ಲಪಟಾಯಿಸಿದ್ದಾರೆ. ಸಂತ್ರಸ್ತರು ಆಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಾಗಾದರೆ ಆಗಿದ್ದೇನು? ಘಟನೆಗಳು ಫುಲ್ ಡಿಟೇಲ್ಸ್ ಇಲ್ಲಿದೆ.

ಉದ್ಯೋಗ ಹೆಸರಿನಲ್ಲಿ 14 ಲಕ್ಷ ರೂ.ವಂಚನೆ
ಆನ್‌ಲೈನ್' ಪಾರ್ಟ್‌ಟೈಂ ಜಾಬ್ ಆಮಿಷಕ್ಕೆ ಮರುಳಾಗಿ ವ್ಯಕ್ತಿಯೊಬ್ಬರು ₹14.72ಲಕ್ಷ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಿ ಮೋಸ ಹೋಗಿದ್ದಾರೆ. ಈ ಕುರಿತು ನಗರದ ಸೆನ್ ಠಾಣೆಯಲ್ಲಿ (ಸೈಬರ್, ಆರ್ಥಿಕ ಮತ್ತು ಕ್ರೈಂ) ಪ್ರಕರಣ ದಾಖಲಾಗಿದೆ.
ಕುಂದಗೋಳದ ಬಾಗವಾಡದ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ. 'ಪಾರ್ಟ್ ಟೈಂ ಆನ್‌ಲೈನ್ ಅಸಿಸ್ಟೆಂಟ್ ಕೆಲಸ ಇದೆ ಎಂದು ಟೆಲಿಗ್ರಾಂನಲ್ಲಿ ಸಂದೇಶ (ಪೋಸ್ಟ್) ಇತ್ತು. ರಶ್ಮಿ ಭಟ್ ಮತ್ತು ಭಾವನಾ ಕೆ. ಎಂಬ ಐಡಿಗಳಿಂದ ಚಾಟ್ ಮಾಡಿ ನನನ್ನು ನಂಬಿಸಿ ಹಂತ ಹಂತವಾಗಿ ಆನ್‌ಲೈನ್‌ನಲ್ಲಿ ₹14.72 ಲಕ್ಷ ಹಣವನ್ನು ಯಪಿಐ ಐಡಿ, ಬ್ಯಾಂಕ್ ಖಾತೆಗಳಿಗೆ ಪಾವತಿಸಿಕೊಂಡು ವಂಚನೆ ಮಾಡಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರದಾರನಿಗೆ ವಂಚಕರು ಹೋಟೆಲ್‌ವೊಂದರ ಪೋಸ್ಟ್ ಹಾಕಿ ಲೈಕ್ ಮಾಡಿ ಸ್ಟ್ರೀನ್ ಶಾಟ್ ತೆಗೆದು ಪೋಸ್ಟ್ ಮಾಡುವಂತೆ ಹಾಗೂ ₹10 ಸಾವಿರ ಹಣ ಪಾವತಿಸುವಂತೆ ತಿಳಿಸಿದ್ದಾರೆ. ದೂರುದಾರ ಅವರು ಹೇಳಿದ್ದನ್ನು ಮಾಡಿದಾಗ ಪ್ರತಿಯಾಗಿ ₹17 ಸಾವಿರ ರಿವಾರ್ಡ್ ಎಂದು ಆತನ ಖಾತೆಗೆ ಪಾವತಿಸಿದ್ದಾರೆ.

ನಂತರ ಹಂತ ಹಂತವಾಗಿ ದೂರುದಾರನಿಂದ ₹14.72 ಲಕ್ಷ ಹಾಕಿಸಿಕೊಂಡು ವಂಚಿಸಿದ್ದಾರೆ. ವಂಚಕರ ಜಾಡು ಪತ್ತೆ ನಿಟ್ಟಿನಲ್ಲಿ ಶೋಧ ಆರಂಭಿಸಿದ್ದೇವೆ' ಎಂದು ಸೈಬರ್ ಕ್ರೈಂ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ನಕಲಿ ದಾಖಲೆಯಿಂದ ₹3.89 ಲಕ್ಷ ಗುಳುಂ
ಹಳೇ ಹುಬ್ಬಳ್ಳಿಯಲ್ಲಿರುವ ಕೆ.ಎಲ್.ಎಂ. ಆಕ್ಸಿವಾ ಫಿನ್ ವಿಷ್ಟಲಿ ಎಂಬ ಕಂಪನಿಯ ಇಬ್ಬರು ಸಿಬ್ಬಂದಿ ಗ್ರಾಹಕರೊಂದಿಗೆ ಸೇರಿ ನಕಲಿ ದಾಖಲೆ ಸೃಷ್ಟಿಸಿ, ಆ ಕಂಪನಿಯಿಂದಲೇ ₹3,89,800 ಸಾಲ ಪಡೆದು ವಂಚಿಸಿದ್ದಾರೆ.
ಕಂಪನಿ ಸಿಬ್ಬಂದಿ ಸಮೀರ್ ಅಹ್ಮದ್ ಹಗಲದೇವಟಗಿ, ಶಿಲ್ಪಾ ವಿಜಯ ಬಾಕಳೆ ಹಾಗೂ ಗ್ರಾಹಕಿ ಫರೀದಾ ಎಂಬುವರ ವಿರುದ್ಧ ವಿನೋದ ಶಾಪುರಕರ ದೂರು ನೀಡಿದ್ದಾರೆ. ಕಂಪನಿ ಸಿಬ್ಬಂದಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಫರೀದಾ ನಕಲಿ ಬಂಗಾರ ಬಳೆಗಳನ್ನು ತೋರಿಸಿ, ಸಾಲ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಧಿಕಾರಿಗಳ ಸೋಗಿನಲ್ಲಿ ಮಹಿಳೆಗೆ ₹30,000 ನಾಮಾ
ಸಿಐಡಿ ಅಧಿಕಾರಿಗಳ ಹೆಸರು ಹೇಳಿಕೊಂಡು ಮಹಿಳೆಯೊಬ್ಬರನ್ನು ಹೆದರಿಸಿದ ದುಷ್ಕರ್ಮಿಗಳು ಆ ಮಹಿಳೆಯಿಂದ ₹30,000 ರೂ. ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿ ಪರಾರಿಯಾಗಿದ್ದಾರೆ.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಮನೆಯೊಂದಕ್ಕೆ ಬಂದ ಅಪರಿಚಿತರಿಬ್ಬರು, ಸಿಐಡಿ ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ. ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಆರೋಪಿಸಿ, ವಿಡಿಯೋ ಮಾಡಿದ್ದಾರೆ. ₹50,000 ನೀಡದಿದ್ದರೆ ವಿಡಿಯೊವನ್ನು ಮಾಧ್ಯಮದವರಿಗೆ ನೀಡುವುದಾಗಿ ಹೆದರಿಸಿದ್ದಾರೆ. ಕೊನೆಗೆ ₹30,000 ಫೋನ್ ಪೇ ಮಾಡಿಸಿಕೊಂಡು ಕಾಲ್ಕಿತ್ತಿದ್ದಾರೆ.












Click it and Unblock the Notifications