Liquor at discount for voters: ಮತ ಹಾಕಿದವರಿಗೆ ರಿಯಾಯಿತಿ ದರದಲ್ಲಿ ಮದ್ಯ ಮಾರಾಟ!
ಹುಬ್ಬಳ್ಳಿ ಮೇ 7: ಮತ ಚಲಾಯಿಸಿದರೆ ತಿಂಡಿ, ಊಟ ಇನ್ನಿತರ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡುವುದನ್ನು ನಾವು ಕೇಳಿದ್ದೇವೆ. ಆದರೆ ಹುಬ್ಬಳ್ಳಿಯಲ್ಲಿ ಕೊಂಚ ವಿಭಿನ್ನ. ಅದೇನೆಂದರೆ ಮತದಾರರ ಸಂಖ್ಯೆಯನ್ನು ಹೆಚ್ಚಿಸಲು ಬಾರ್ ಮಾಲೀಕರು ವಿನೂತನ ಪ್ಲ್ಯಾನ್ ಮಾಡಿದ್ದಾರೆ. ಮತದಾನ ಮಾಡಿದವರಿಗೆ ರಿಯಾಯಿತಿ ದರದಲ್ಲಿ ಮದ್ಯ ನೀಡಲು ಮುಂದಾಗಿದ್ದಾರೆ.
ಹೌದು... ಮತದಾನ ಮಾಡಿದವರಿಗೆ ಹುಬ್ಬಳ್ಳಿ ಬಾರ್ ಮಾಲೀಕರ ಸಂಘ 3% ಡಿಸ್ಕೌಂಟ್‌ನಲ್ಲಿ ಮದ್ಯ ನೀಡಲು ನಿರ್ಧರಿಸಿದೆ. ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿರುವ ಕರ್ನಾಟಕ ವೈನ್ಸ್ ಅಂಗಡಿ ಮಾಲೀಕರು ಮತದಾನದ ಸಂಖ್ಯೆ ಹೆಚ್ಚಿಸಲು ಈ ಹೊಸ ಪ್ಲ್ಯಾನ್ ಮಾಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಮತದಾನದ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮತದಾರರನ್ನು ಸೆಳೆಯಲು, ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಬಾರ್ ಮಾಲೀಕರ ಸಂಘ ಈ ವಿನೂತನ ಯೋಜನೆ ಮಾಡಿದೆ. ಸದೃಢ ಭಾರತ ಮಾಡಲು, ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಲು ಎಲ್ಲರೂ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಕರೆ ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕರ್ನಾಟಕ ವೈನ್ಸ್‌ನಿಂದ ಮತ ಹಾಕಿದವರಿಗೆ ರಿಯಾಯಿತಿ ದರದಲ್ಲಿ ಮದ್ಯ ನೀಡಲಾಗಿತ್ತು. ಮತದಾನ ಮಾಡಿ ಮದ್ಯ ಖರೀದಿ ಮಾಡುವವರಿಗೆ ಮೇ 8ರಂದು ಡಿಸ್ಕೌಂಟ್ ಕೊಡಲಾಗುತ್ತಿದೆ. ಹೀಗಾಗಿ ಯಾರೂ ಕೂಡ ಮತದಾನದಿಂದ ತಪ್ಪಿಸಿಕೊಳ್ಳಬಾರದು, ಮತದಾನವನ್ನು ನಿರ್ಲಕ್ಷ್ಯ ಮಾಡಬಾರದು. ಮತಚಲಾಯಿಸಿ ಅದು ನಿಮ್ಮ ಹಕ್ಕು ಎಂದು ಬಾರ್ ಮಾಲೀಕ ವಿನಾಯಕ್ ಅಕಳವಾಡಿ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಇಂದು ಎರಡನೇ ಹಂತದ ಮತದಾನ
ಭಾರತದಲ್ಲಿಂದು ಮೂರನೇ ಹಂತದ ಮತದಾನ ನಡೆಯುತ್ತಿದ್ದರೆ ಕರ್ನಾಟಕದಲ್ಲಿ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಕರ್ನಾಟಕದ 14 ಕ್ಷೇತ್ರಗಳಿಗೆ ಇಂದು ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಎರಡನೇ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಕ್ಷೇತ್ರಕ್ಕೆ ಎರಡನೇ ಹಂತದಲ್ಲಿ ಮೇ 7ರಂದು ಚುನಾವಣೆ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ವಿನೋದ್ ಆಸೂಟಿ ಸ್ಪರ್ಧಿಸುತ್ತಿದ್ದರೆ ಬಿಜೆಪಿಯಿಂದ ಪ್ರಹ್ಲಾದ್ ಜೋಶಿ ಕಣದಲ್ಲಿದ್ದಾರೆ. ಇಂದು ಬೆಳಗ್ಗೆಯಿಂದ ಮತದಾನ ಚುರುಕುಗೊಂಡಿದೆ. ಮತದಾರರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಅಮೂಲ್ಯವಾದ ಮತ ಚಲಾಯಿಸುತ್ತಿದ್ದಾರೆ.
ಈ ನಡುವೆ ಬಾರ್ ಮಾಲೀಕರ ಸಂಘ ಮತದಾರರಿಗೆ ಬಿಗ್ ಆಫರ್ ನೀಡಿದ್ದು ಇದರಿಂದ ಮತದಾನ ಹೆಚ್ಚಾಗುತ್ತಾ ಕಾದು ನೊಡಬೇಕಿದೆ.












Click it and Unblock the Notifications