ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಕೂಡಲೇ ದುರಂತ ನಡೆದ ಕಟ್ಟಡ ತೆರವಿಗೆ ಚಿಂತನೆ
ಹುಬ್ಬಳ್ಳಿ, ಡಿಸೆಂಬರ್ 30: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದ್ದ ಅಯ್ಯಪ್ಪ ಮಾಲಾಧಾರಿಗಳ ಸಾವಿನ ಪ್ರಕರಣ ಎಂತವರ ಕಣ್ಣಲ್ಲಿಯೂ ನೀರು ಬರುವಂತೆ ಮಾಡಿದೆ. ಮಕ್ಕಳನ್ನು ಕಳೆದುಕೊಂಡ ತಾಯಂದಿರ ಗೋಳಾಟ ಎಲ್ಲರ ಮನಕಲುಕಿದೆ. ಈ ನಿಟ್ಟಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಆರು ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಸಾವಿಗೆ ಕಾರಣವಾದ ಸಾಯಿ ನಗರದ ಅಚ್ಚವ್ವನ ಕಾಲೊನಿಯ ಈಶ್ವರ ಗುಡಿ ಪಕ್ಕದ ದುರಂತ ನಡೆದ ಕಟ್ಟಡ ತೆರವುಗೊಳಿಸುವ ಚಿಂತನೆ ಜೋರಾಗಿಯೇ ನಡೆದಿದೆ.
ಸಿಲಿಂಡರ್ ಸ್ಫೋಟಗೊಂಡು ಒಂಬತ್ತು ಜನರು ತೀವ್ರವಾಗಿ ಗಾಯಗೊಂಡು ಈಗ ಆರು ಜನರು ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದುರಂತಕ್ಕೆ ಕಾರಣವಾಗಿದ್ದ ಕಟ್ಟಡವನ್ನು ತೆರವು ಮಾಡಲು ಚಿಂತನೆ ನಡೆಸಲಾಗಿದ್ದು, ಪಾಲಿಕೆಯ ಸಾಮಾನ್ಯ ಸಭೆಯ ಬಳಿಕವೇ ನಿರ್ಧಾರ ಹೊರಬೀಳಲಿದೆ.

ಆ ಕಟ್ಟಡಕ್ಕೆ ಪರ್ಯಾಯವಾಗಿ ಅದೇ ಕಾಲೊನಿಯಲ್ಲಿ ಸಮುದಾಯ ಭವನ ನಿರ್ಮಿಸಿ, ಅಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಸನ್ನಿಧಿ ಮಾಡಿಕೊಳ್ಳಲು ಅವಕಾಶ ಕೊಡುವ ಯೋಜನೆ ಸ್ಥಳೀಯರದ್ದಾಗಿದೆ. ಈ ಬಗ್ಗೆ ಅನೇಕರ ಮನವಿ ಕೂಡ ಇದೆ. ಇದಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಸ್ಥಳೀಯ ಸದಸ್ಯ ರಾಜಣ್ಣ ಕೊರವಿ ಅವರು 60 ಲಕ್ಷ ರೂಪಾಯಿ ವೆಚ್ಚದ ಸಮುದಾಯ ಭವನದ ಪ್ರಸ್ತಾವವನ್ನು ಪಾಲಿಕೆಗೆ ಸಲ್ಲಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಈಶ್ವರ ಗುಡಿ ತೆರವು ಮಾಡುವ ವಿಚಾರ ಮಾಡಿಲ್ಲ. ದುರಂತ ನಡೆದ ಸ್ಥಳದ ಪಕ್ಕದಲ್ಲಿಯೇ ಸಭಾಭವನ ನಿರ್ಮಾಣ ಮಾಡಲಾಗುತ್ತದೆ. ಟೆಂಡರ್ ಪಾಸ್ ಆದ ತಕ್ಷಣವೇ ಸಭಾಭವನ ನಿರ್ಮಾಣದ ಭೂಮಿ ಪೂಜೆ ನೆರವೇರಿಸಲಾಗುತ್ತದೆ. ದೇವರ ಮೂರ್ತಿ ಮರುಪ್ರತಿಷ್ಠಾಪನೆಗೆ ಹಾಗೂ ದುರಂತ ನಡೆದ ಕಟ್ಟಡ ತೆರವುಗೊಳಿಸಲು ಸ್ಥಳೀಯರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು.

ಸಾರ್ವಜನಿಕ ರಸ್ತೆ ಪಕ್ಕ ಕಟ್ಟಡ ಇರುವುದರಿಂದ, ಅಕ್ಕಪಕ್ಕದ ನಿವಾಸಿಗಳು ಸಹ ಈ ಹಿಂದೆಯೇ ತೆರವು ಮಾಡಲು ಬೇಡಿಕೆ ಇಟ್ಟಿದ್ದರು. ಸಮುದಾಯದ ಭವನ ನಿರ್ಮಾಣದ ಕುರಿತು ಪ್ರಸ್ತಾವ ಸಲ್ಲಿಸಿದ್ದು, ಟೆಂಡರ್ ಆದ ತಕ್ಷಣ ಕಾಮಗಾರಿ ಆರಂಭಿಸುತ್ತೇವೆ. ಅದೇ ವೇಳೆ ಕಟ್ಟಡ ತೆರವು ಮಾಡಲು ನಿರ್ಧರಿಸುತ್ತೇವೆ' ಎಂದು ಪಾಲಿಕೆ ಸದಸ್ಯ ರಾಜಣ್ಣ ಕೊರವಿ ವಿವರಣೆ ನೀಡಿದ್ದಾರೆ.
ಇನ್ನು ಸಿಲಿಂಡರ್ ಸ್ಫೋಟದಲ್ಲಿ 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ದುರಾದೃಷ್ಟವಶಾತ್ 6 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (20), ರಾಜು ಮೂಗೇರಿ (21), ಲಿಂಗಾರಾಜು ಬೀರನೂರ (24), ಶಂಕರ್ ಚವ್ಹಾಣ್ (29) ಮತ್ತು ಮಂಜು ವಾಗ್ಮೋಡೆ (22) ಮೃತ ದುರ್ದೈವಿಗಳು. ಸದ್ಯ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ.












Click it and Unblock the Notifications