ಅದ್ಧೂರಿ ಮೆರವಣಿಗೆಯೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
ಧಾರವಾಡ, ಏಪ್ರಿಲ್, 20: ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಚಿಂಚೋರೆ ಅವರು ಗುರುವಾರ (ಏಪ್ರಿಲ್ 20) ಅಧಿಕೃತವಾಗಿ ತಮ್ಮ ನಾಮಪತ್ರ ಸಲ್ಲಿಸಿದರು.
ಧಾರವಾಡದ ಕೆಸಿಡಿ ವೃತ್ತದ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಚಿಂಚೋರೆ, ಅಲ್ಲಿಂದ ತೆರೆದ ವಾಹನದ ಮೂಲಕ ಅದ್ಧೂರಿ ಮೆರವಣಿಗೆ ಮೂಲಕ ಪಾಲಿಕೆ ಕಚೇರಿಗೆ ಬಂದು ತಮ್ಮ ನಾಮಪತ್ರವನ್ನು ಸಲ್ಲಿಸಿದರು.

ಗಣಪತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡದವರು ಪಾಲ್ಗೊಂಡಿದರು. ಹೀಗೆ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡು ದೀಪಕ್ ಚಿಂಚೋರೆ ಅವರ ಪರವಾಗಿ ಜಯಘೋಷವನ್ನು ಮೊಳಗಿಸಿದರು. ಈ ಮೂಲಕ ಚಿಂಚೋರೆ ಅವರ ಸ್ಪರ್ಧೆಯಿಂದ ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರ ತೀವ್ರ ರಂಗು ಪಡೆದುಕೊಂಡಿದೆ.
ತೆರೆದ ವಾಹನದ ಮೂಲಕ ನಡೆದ ಮೆರವಣಿಗೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಆರ್.ಕೆ.ಪಾಟೀಲ, ಹೇಮಂತ ಗುರ್ಲಹೊಸೂರ ಅವರು ಚಿಂಚೋರೆ ಅವರಿಗೆ ಸಾಥ್ ನೀಡಿದರು. ಒಟ್ಟಾರೆ ಚಿಂಚೋರೆ ಕೂಡ ಶಕ್ತಿ ಪ್ರದರ್ಶನದೊಂದಿಗೆ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.
ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ ಡಿ.ಕೆ.ಸುರೇಶ್
ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲ ದಿನಗಳು ಬಾಕಿ ಇರುವಾಗಲೇ ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ. ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್‌ನ ಪ್ರಬಲ ನಾಯಕ ಡಿ.ಕೆ.ಶಿವಕುಮಾರ್ ಅವರು ಕನಕಪುರದಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರ ಸಹೋದರ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರು ನಾಮಪತ್ರ ಸಲ್ಲಿಸಿ ಅಚ್ಚರಿ ಹುಟ್ಟಿಸಿದ್ದಾರೆ.ಡಿಕೆ ಸುರೇಶ್ ಅವರು ಪದ್ಮನಾಭನಗರದಿಂದ ಆರ್. ಅಶೋಕ ವಿರುದ್ಧ ಸ್ಪರ್ದೆ ಮಾಡುತ್ತಾರೆ ಎನ್ನಲಾಗಿತ್ತು. ನಾಮಪತ್ರ ಸಲ್ಲಿಕೆಯ ಕಡೆ ಕ್ಷಣದಲ್ಲಿ ಡಿ.ಕೆ.ಸುರೇಶ್ ಅವರು ನಾಮಪತ್ರ ಸಲ್ಲಿಸಿದ್ದು ಭಾರೀ ಕುತೂಹಲವನ್ನು ಕೆರಳಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ನಾಮಪತ್ರ ಅನರ್ಹವಾಗಬುದು ಎಂಬ ಬೀತಿಯಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕನಕಪುರದಿಂದ ಡಿಕೆಶಿ ಪುತ್ರಿ ಐಶ್ವರ್ಯ ಅವರು ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ, ಈಗ ಡಿಕೆ ಸುರೇಶ್ ಕಣಕ್ಕಿಳಿದಿರುವುದು ಅಚ್ಚರಿಗೆ ಕಾರಣವಾಗಿದೆ.
ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವಕುಮಾರ್, ಸುರೇಶ್ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದರು. 'ಅವರು ನಾಮಪತ್ರ ಸಲ್ಲಿಸುತ್ತಾರೆ. ಆದರೆ ಕ್ಷೇತ್ರ ಇನ್ನೂ ನಿರ್ಧಾರವಾಗಿಲ್ಲ' ಎಂದಿದ್ದರು. ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಸುರೇಶ್, ತಮ್ಮ ಅಭ್ಯರ್ಥಿಯಾಗುವ ಬಗ್ಗೆ ಎಐಸಿಸಿಯಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದರು. ನಾಮಪತ್ರ ಸಲ್ಲಿಸಲು ಮತ್ತು ಎಲ್ಲಾ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಅವರು ನನಗೆ ಹೇಳಿದ್ದಾರೆ. ಎಐಸಿಸಿ ನಾಯಕರು ತಮ್ಮ ನಿರ್ಧಾರ ತಿಳಿಸುತ್ತಾರೆ ಎಂದು ಕಾಯುತ್ತಿದ್ದೇನೆ' ಎಂಬುದಾಗಿ ಡಿಕೆ ಸುರೇಶ್ ತಿಳಿಸಿದ್ದರು.
ಪದ್ಮನಾಭನಗರದಲ್ಲಿ ಬಿಜೆಪಿಯ ಆರ್ ಅಶೋಕ್ ವಿರುದ್ಧ ಸುರೇಶ್ ಕಣಕ್ಕಿಳಿಯುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಪದ್ಮನಾಭನಗರದ ಕಾಂಗ್ರೆಸ್ ಅಭ್ಯರ್ಥಿ ರಘುನಾಥ ನಾಯ್ಡು ಅವರ ಬದಲಿಗೆ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದಾರೆ ಎಂದು ಸುರೇಶ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.
ಪ್ರಸ್ತುತ ಕಂದಾಯ ಸಚಿವರಾಗಿರುವ ಅಶೋಕ್, 2008 ರಿಂದ ಪದ್ಮನಾಭನಗರದಲ್ಲಿ ಆರ್ ಅಶೋಕ್ ಅವರು ಮೂರು ಬಾರಿ ಗೆದ್ದಿದ್ದಾರೆ. ಶಿವಕುಮಾರ್ ಪ್ರತಿನಿಧಿಸುವ ಕನಕಪುರದಲ್ಲಿ ಬಿಜೆಪಿಗೆ ಕಾಂಗ್ರೆಸ್ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿ ಆರ್ ಅಶೋಕ್ ಇದ್ದಾರೆ. ಪದ್ಮನಾಭನಗರ ಮತ್ತು ಕನಕಪುರ ಎರಡರಿಂದಲೂ ಅಶೋಕ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.












Click it and Unblock the Notifications