Gold Theft: ಅಂತಾರಾಷ್ಟ್ರೀಯ ಕಳ್ಳರ ಖತರ್ನಾಕ್ ಕೈಚಳಕ, ಪರಾರಿ ವೇಳೆ ಫೈರಿಂಗ್
ಹುಬ್ಬಳ್ಳಿ, ಜುಲೈ 26: ನಗರ ವ್ಯಾಪ್ತಿಯಲ್ಲಿ ಇದೇ ಜುಲೈ 17 ರಂದು ಭುವನೇಶ್ವರಿ ಜುವೆಲ್ಲರಿ ಮಳಿಗೆಯಲ್ಲಿ ಕಳ್ಳತನ ಪ್ರಕರಣ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಂಧಿಸಿರುವ ಪೊಲೀಸರು, ಕರೆದೊಯ್ಯುವಾಗ ಪೈರಿಂಗ್ ನಡೆದಿದೆ. ಫೈರಿಂಗ್ ಆಗಿದ್ದೇಕೆ, ಈ ಅಂತಾರಾಜ್ಯ ಕಳ್ಳತನ ಸಹಚರು, ಹಿಸ್ಟರಿಯನ್ನು ಹುಬ್ಬಳ್ಳಿ- ಧಾರವಾಡ ಪೋಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಬಿಚ್ಚಿಟ್ಟಿದ್ದಾರೆ.
ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಸಿಬ್ಬಂದಿ ಆರೋಗ್ಯ ಸ್ಥಿರವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ನಗರದ ಗೋಲ್ಡ್ ಶಾಪ್ ನಲ್ಲಿ ದೊಡ್ಡ ದೊಡ್ಡ ಪ್ರಮಾಣದಲ್ಲಿ ಬಂಗಾರ, ಬೆಳ್ಳಿ ಆಭರಣಗಳು, ವಸ್ತುಗಳು ಕಳ್ಳತನವಾಗಿದ್ದವು.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಇಳಿದಿದ್ದರು. ಹತ್ತು ದಿನ ನಿರಂತರ ಪ್ರಯತ್ನದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ಓರ್ವ ಆರೋಪಿಯನ್ನು ಬಂಧಿಸಲಾಯಿತು. ಈ ವ್ಯಕ್ತಿ ಗಾಮನಗಟ್ಟಿ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಗಿತ್ತು.
ಸಹಚರನ್ನು ತೋರಿಸಲು ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಆರೋಪಿ ಫರಾನ್ ಶೇಖ್ ತಪ್ಪಿಸಿಕೊಳ್ಳಲು ಯತ್ನ ಮಾಡಿದ್ದಾನೆ. ಸಾಲದೆಂಬಂತೆ ಪೊಲೀಸ್ ಮೇಲೆ ಹಲ್ಲೆ ಮಾಡಿಲು ಮುಂದಾಗಿದ್ದ. ಈ ವೇಳೆ ಆತನ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸಲಾಯಿತು ಎಂದು ಅವರು ವಿವರಿಸಿದರು.
2 ಸಾವಿರ ರೂ. ಕೊಟ್ಟು ಇಬ್ಬರ ಪರಿಚಯ
ಬಂಧಿತ ಫರಾನ್ ಶೇಖ ಗಾಮನಗಟ್ಟಿ ಪ್ರದೇಶದ ಇಬ್ಬರನ್ನು 2 ಸಾವಿರ ರೂ. ಕೊಟ್ಟು ಪರಿಚಯ ಮಾಡಿಕೊಂಡಿದ್ದ. ಅವನು ಅಂತಾರಾಜ್ಯ ಕಳ್ಳತನ ಆರೋಪಿ ಕೊಲೆ, ಕಳ್ಳತನ, ಸೇರಿ ಅನೇಕ ಕೇಸ್ ಇವನ ಮೇಲಿವೆ. ಗಾಮನಗಟ್ಟಿಗೆ ಕರೆದುಕೊಂಡು ಹೋದಾಗ ಆರೋಪಿಗಳನ್ನು ತೋರಿಸುತ್ತೇನೆಂದು ಪೊಲೀಸರಿಗೆ ತಿಳಿಸಿದ್ದ.
ಹೀಗಾಗಿ ಸ್ಥಳಕ್ಕೆ ಹೋದ ಸಮಯದಲ್ಲಿ ಪೊಲೀಸರನ್ನು ತಳ್ಳಿ ಕಲ್ಲಿನಿಂದ ನಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದ. ಪೊಲೀಸ್ ಸಿಬ್ಬಂದಿ ಸುಜಾತ, ಮಹೇಶ್ ಮೇಲೆ ಹಲ್ಲೆ ಮಾಡಿದ.
ಪೊಲೀಸ್ ಸಿಬ್ಬಂದಿಗೆ ಗಾಯ
ತಪ್ಪಿಸಿಕೊಂಡು ಓಡುವಾಗ ಗೋಕುಲ ರಸ್ತೆ ಪೊಲೀಸ್ ಠಾಣೆಯ ಪಿಎಸ್ ಐ ಕವಿತಾ ಆತನ ಮೇಲೆ ಗುಂಡಿನ ದಾಳಿ ನಡೆಸಿದರು. ಸಿಬ್ಬಂದಿಗಳಿಗೆ ಸಣ್ಣ ಪುಟ್ಟ ಗಾಯವಾಗಿದೆ. ಫರಾನ್ ಶೇಖ್ ಸಹ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಉಳಿದ ಆರೋಪಿಗಳನ್ನ ಆದಷ್ಟು ಬೇಗ ಬಂಧಿಸಲಾಗುವುದು ಎಂದು ತಿಳಿಸಿದರು.
ಈ ಖದೀಮರು ಮಹಾರಾಷ್ಟ್ರದಿಂದ ಹುಬ್ಬಳ್ಳಿಗೆ ಬಂದಿದ್ದರು. ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ ಕಳ್ಳತನ ಮಾಡಲು ಪ್ಲ್ಯಾನ್ ಮಾಡಿಕೊಂಡೆ ಆಗಮಿಸಿದ್ದರು. ಮೂರು ಜನ ಕಳ್ಳತನ ಪ್ಲ್ಯಾನ್ ಮಾಡಲು ಹಾಕಿದ್ದರು. ಇವರು ಬಂದ ತಕ್ಷಣ ಸ್ಥಳೀಯರನ್ನು ಹಣ ಕೊಟ್ಟು ಪರಿಚಯ ಮಾಡಿಕೊಂಡಿದ್ದ ಎಂದು ಅವರು ವಿವರಿಸಿದರು.
ಇತರ ಆರೋಪಿಗಳು ಸಹ ಅಂತಾರಾಜ್ಯ ಕಳ್ಳರಾಗಿದ್ದು, ಬಂಧಿಸಲು ಹೋದ ಮೂರು ಪೊಲೀಸ್ ತಂಡ ಮಹಾರಾಷ್ಟ್ರದಲ್ಲಿ ಬೀಡು ಬಿಟ್ಟಿದ್ದಾರೆ. ತನಿಖೆ, ಶೋಧ ಕಾರ್ಯ ಮುಂದುವರಿದಿದೆ ಎಂದರು.












Click it and Unblock the Notifications