Encounter Law: ಹುಬ್ಬಳ್ಳಿ ಕೊಲೆ ಕರ್ನಾಟಕದಲ್ಲಿ 'ಎನ್‌ಕೌಂಟರ್ ಲಾ' ಜಾರಿಗೆ ತನ್ನಿ: ಶಾಂತಭೀಷ್ಮ ಶ್ರೀಗಳು
ಹುಬ್ಬಳ್ಳಿ, ಮೇ 18: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣ ಖಂಡಿಸಿ ಇಂದು ಶನಿವಾರ ನಗರದಲ್ಲಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಇಬ್ಬರು ಯುವತಿಯ ಕೊಲೆಯಿಂದ ಸಮಾಜ ಮತ್ತು ಕಾನೂನು ತಲೆ ತಗ್ಗಿಸುವಂತಾಗಿದೆ ಎಂದು ಕಿಡಿ ಕಾರಿದ ಪ್ರತಿಭಟನಾಕಾರರು ಸೂಕ್ತ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.
ಪ್ರತಿಭಟನಾ ವೇದಿಕೆಯಲ್ಲಿ ಶ್ರೀ ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಹುಬ್ಬಳ್ಳಿಯಲ್ಲಿ ಎರಡು ಅಮಾನುಶ ಘಟನೆ ನಡೆದಿವೆ. ಕೆಲವರಿಗೆ ಕಾನೂನು ಭಯ ಇಲ್ಲದಿರುವುದರಿಂದ ಹೀಗಾಗಿದೆ. ಇಂತಹ ಘಟನೆಗಳನ್ನು ನಿರ್ಲಕ್ಷ್ಯ ಮಾಡುವುದಾದರೆ ಪೊಲೀಸ್ ಇಲಾಖೆ ಯಾಕೆ ಬೇಕು?.

ಪೊಲೀಸರು ಅನ್ಯಾಯ ಹತ್ತಿಕ್ಕಬೇಕು ಹೋರಾಟ ಅಲ್ಲ
ಹೋರಾಟ ಹತ್ತಿಕ್ಕಲು ಪೊಲೀಸ್ ಇಲಾಖೆ ಇದೆ ಹೊರತು, ಅನ್ಯಾಯ ಹತ್ತಿಕ್ಕಲು ಪೊಲೀಸ್ ಇಲ್ಲ. ರಾಜ್ಯ ಸರ್ಕಾರ ಈ ಕಡೆ ಗಮನ ಹರಿಸುತ್ತಿಲ್ಲ. ಈ ಹಿಂದೆ ನೇಹಾ ಹತ್ಯೆಯಾದಾಗ ರಾಜ್ಯ ಸರ್ಕಾರ ಕಾನೂನು ತರಲಿಲ್ಲ. ಅಂಜಲಿ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ ನೀಡುವ ಜೊತೆಗೆ ಮನೆ ನೀಡಬೇಕು. ಸರ್ಕಾರಿ ನೌಕರಿ ಕೊಡಬೇಕು ಎಂದರು.
ವಿಶೇಷ ನ್ಯಾಯಾಲಯ ರಚಿಸಿ ಎರಡು ಪ್ರಕರಣದ ಆರೋಪಿಗಳಿಗೆ ಮರಣ ದಂಡನೆ ವಿಧಿಸಬೇಕು. ಪರಿಹಾರ ಸಿಗದಿದ್ದರೆ ನಾವೆಲ್ಲರೂ ಸೇರಿ ಮುಖ್ಯಮಂತ್ರಿಗಳ ಬಳಿ ಹೋಗುತ್ತೇವೆ ಎಂದು ಎಚ್ಚರಿಸಿದರು.
ಅಂಜಲಿಗೆ ನೇಹಾಳಂತೆ ಕೊಲೆ ಬೆದರಿಕೆ ಬಂದಿತ್ತು
ನಂತರ ಮಾತನಾಡಿದ ಅಂಬಿಗೇರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಸ್ವಾಮೀಜಿ ಅವರು, ಈ ನಾಡಿನಲ್ಲಿ ಈ ಕೊಲೆಯಂಥಹ ಕೃತ್ಯಗಳು ಮುಂದುವರಿಯದಂತೆ ತಡೆಯಬೇಕು. ಇದೀಗ ಆಗಿರುವ ಘಟನೆಗಳಿಗೆ ಪೊಲೀಸರ ನಿರ್ಲಕ್ಷ್ಯ ಕಾರಣ. ನೇಹಾ ಹತ್ಯೆ ಬಳಿಕ ಇಂಥ ಘಟನೆ ಮತ್ತೆ ನಡೆದಿದೆ.
ಮೃತ ಅಂಜಲಿಗೆ ಯುವಕ ಮೊದಲೇ ಕೊಲೆ ಬೆದರಿಕೆ ಹಾಕಿದ್ದ. ಆಗ ಆತ ನೇಹಾಳಂತೆ ಕೊಲೆ ಮಾಡುವುದಾಗಿ ಹೇಳಿದ್ದ. ಈ ಬಗ್ಗೆ ಆ ಕುಟುಂಬಸ್ಥರು ದೂರು ನೀಡಿದಾಗ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಕ್ಕೆ ಈ ಕೃತ್ಯ ನಡೆದುಹೋಗಿದೆ ಎಂದು ಪೊಲೀಸರ ನಡೆಗೆ ಅಸಮಾಧಾನ ಹೊರ ಹಾಕಿದರು.
ಎನ್‌ಕೌಂಟರ್ ಕಾನೂನು ಜಾರಿ ಮಾಡಿ
ಯಾರೇ ಆಗಲಿ ತೊಂದರೆ ಬಗ್ಗೆ ಹೇಳಿಕೊಂಡು ಬಂದರೆ ಪೊಲೀಸರು ಅವರಿಗೆ ನ್ಯಾಯ ಕೊಡಬೇಕು. ದೇಶದಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಜಾರಿಗೆ ತಂದಿರುವ ಕಾನೂನನ್ನು ಜಾರಿಗೆ ತರಬೇಕು. ಯೋಗಿಯಂತೆ ಎನ್‌ಕೌಂಟರ್ ಕಾನೂನು ಕರ್ನಾಟಕದಲ್ಲಿ ಜಾರಿ ಆಗಬೇಕು. ಆಗಲೇ ಮುಂದೆ ಇಂತಹ ಘಟನೆಗಳು ಆಗಲು ತಪ್ಪಿಸಬಹುದು.

ಸಮಾಜದಲ್ಲಿರುವ ಕೆಲ ಕ್ರೂರ ಮನಸ್ಸುಗಳಿಗೆ ಈ ನೆಲದ ಕಾನೂನಿನ ಭಯ ಇಲ್ಲ. ಹೀಗಾಗಿ ನಿಧಾನಗತಿಯ ಕಾನೂನು ಬೇಡ. ಶೀಘ್ರವೇ ಸರ್ಕಾರ ಎನ್‌ಕೌಂಟರ್ ಕಾನೂನು ಜಾರಿಗೆ ತರಬೇಕು ಎಂದು ಶ್ರೀಗಳು ಆಗ್ರಹಿಸಿದರು.
ಅಂಜಲಿ ಸಾವಿಗೆ ಸರ್ಕಾರವೇ ನೇರ ಕಾರಣ
ಅಂಜಿಲಿ ಪ್ರಕರಣದಲ್ಲಿ ವೇಗವಾಗಿ ತನಿಖೆ ನಡೆಸಬೇಕು. ಬಂಧಿತ ಆರೋಪಿಗೆ ಉಗ್ರ ಶಿಕ್ಷೆ ಕೊಡಬೇಕು. ಅಂಜಲಿಯವರದ್ದು ಬಡ ಕುಟುಂಬವಾಗಿದ್ದು, ಆಕೆ ಕುಟುಂಬದವರಿಗೆ ಮನೆ ಕೊಡಬೇಕು. ಅವರಿಗೆ ರಕ್ಷಣೆ ಕೊಡಬೇಕು. ಮನೆಯ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಸರ್ಕಾರ ತೆಗೆದುಕೊಳ್ಳಬೇಕು.
ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸಹೋದರಿಯರ ಮದುವೆ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಮೂರು ಸಾವಿರ ಮಠದ ಶ್ರೀಗಳು ವಿದ್ಯಾಭ್ಯಾಸದ ಜವಾಬ್ದಾರಿಯ ಹೊಣೆ ಹೊತ್ತಿದ್ದಾರೆ. ಅಂಜಲಿ ಕುಟುಂಬದವರಿಗೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲಲ್ಲ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮಹಿಳಾ ಘಟಕ ಏನು ಮಾಡ್ತಿದೆ: ನಿರಂಜನ್
ಇದೇ ವೇಳೆ ಮಾತನಾಡಿ ಕೊಲೆಗೀಡಾದ ನೇಹಾ ತಂದೆ ನಿರಂಜನ್ ಹಿರೇಮಠ್ ಅವರು, ನನ್ನ ಮಗಳನ್ನು ಹತ್ಯೆ ಮಾಡಲಾಯಿತು, ಈಗ ಅಂಜಲಿ ಕೊಲೆ ಮಾಡಲಾಗಿದೆ. ಗೃಹ ಸಚಿವರು ರಕ್ಷಣೆ ಕೊಡಲು ಆಗದಿದ್ದರೆ ರಾಜಿನಾಮೆ ಕೊಟ್ಟು ಮನೆಗೆ ಹೋಗಲಿ. ಕಾಂಗ್ರೆಸ್ ಮಹಿಳಾ ಘಟಕ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದರು.
ನೇಹಾ, ಅಂಜಲಿ ಹತ್ಯೆ ಖಂಡಿಸಿ ಒಂದು ದೀಪ ಹಚ್ಚಲು ಇವರಿಗೆ ಆಗಲಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದರೂ ಹೋರಾಟದಿಂದ ಹಿಂದೆ ಸರಿಯಲ್ಲ. ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳೇ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಹಲವು ಮುಖಂಡರು ನಮ್ಮ ಮನೆಗೆ ಸಾಂತ್ವನ ಹೇಳಲು ಬರದಂತೆ ತಡೆದಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಡಿಸಿ ಮೂಲಕ ಸರ್ಕಾರಕ್ಕೆ ಮನವಿ
ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಮತ್ತು ಹುಬ್ಬಳ್ಳಿ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರ ಮೂಲಕ ಸ್ವಾಮೀಜಿಗಳು ರಾಜ್ಯ ಸರ್ಕಾರ ಮನವಿ ಪತ್ರ ಸಲ್ಲಿಸಿದರು. ಸೂಕ್ತ ತನಿಖೆ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಮನವಿ ಮಾಡಿದರು.












Click it and Unblock the Notifications