ಹುಬ್ಬಳ್ಳಿ ಈದ್ಗಾ ಮೈದಾನದ ಗಣಪತಿ ವಿಸರ್ಜನಾ ಮೆರವಣಿಗೆ, ವಾಹನ ಸಂಚಾರ ಮಾರ್ಗಗಳ ಬದಲಾವಣೆ, ಮಾಹಿತಿ
ಹುಬ್ಬಳ್ಳಿ, ಸೆಪ್ಟೆಂಬರ್, 21: ನಗರದ ರಾಣಿ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದಲ್ಲಿ ಗಜಾನನ ಉತ್ಸವ ಮಹಾಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯು ಇಂದು (ಸೆಪ್ಟೆಂಬರ್ 21) ಮಧ್ಯಾಹ್ನ 11:45ಕ್ಕೆ ನಡೆಯಲಿದ್ದು, ಸಂಜೆ4ಕ್ಕೆ ವಿಸರ್ಜನೆ ಮಾಡಲಾಗುತ್ತಿದೆ. ಅಲ್ಲದೆ ಮೆರವಣಿಗೆ ಹಿನ್ನೆಲೆ ವಾಹನ ಸಂಚಾರ ಮಾರ್ಗಗಳ ಬದಲಾವಣೆ ಮಾಡಲಾಗಿದೆ. ಹಾಗಾದರೆ ಸಂಚಾರ ಮಾರ್ಗಗಳ ಬದಲಾವಣೆಯ ಸಮಯಗಳ ವಿವರವನ್ನು ಇಲ್ಲಿ ತಿಳಿಯಿರಿ.
ರಾಣೆ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ನೇತೃತ್ವದಲ್ಲಿ ಈಗಾಗಲೇ ಗಣೇಶ ವಿಸರ್ಜನೆ ಮೆರವಣಿಗೆಗೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಬೆಳಗ್ಗೆ 11:45ಕ್ಕೆ ವಿವಿಧ ಪೂಜಾ ಕೈಂಕರ್ಯ ಮೂಲಕ ಮೆರವಣಿಗೆಗೆ ವಿಜಯಪುರ ಶಾಸಕ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ ಅವರು ಚಾಲನೆ ನೀಡಲಿದ್ದಾರೆ.

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ , ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಶಾಸಕ ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿ-ಧಾರವಾಡ ಬಿಜೆಪಿ ನಾಯಕರು, ವಿಶ್ವ ಹಿಂದು ಪರಿಷತ್, ಹಿಂದು ಜಾಗರಣಾ ವೇದಿಕೆ ಹಾಗೂ ಎಲ್ಲ ಪಕ್ಷದವರು, ವಿವಿಧ ಧರ್ಮಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇಂದಿರಾ ಗಾಜಿನ ಮನೆ ಬಳಿಯ ಬಾವಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಯೂ ಸಹ ಯಾವುದೇ ರೀತಿಯ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಠರಾವು ಪಾಸು ಮಾಡಲಾಗಿತ್ತು. ಆದರೆ, ಪಾಲಿಕೆ ಆಯುಕ್ತರು ಅನುಮತಿ ನೀಡುವಲ್ಲಿ ವಿಳಂಬ ತೋರಿದರು. ಇದರಿಂದ ನಾವು ಪಾಲಿಕೆ ಕಚೇರಿ ಬಳಿ ಭಾರತೀಯ ಜನತಾ ಪಕ್ಷದ ನಾಯಕರು ಹಾಗೂ ಹಿಂದು ಪರ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸಿ ಆಯುಕ್ತರು ಅನುಮತಿ ಪಡೆದಿದ್ದರು.
ಸಂಚಾರ ಮಾರ್ಗಗಳ ಬದಲಾವಣೆ
ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಹತ್ತಿರದ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಯನ್ನು ಮೂರನೇ ದಿನದ ಹಿನ್ನೆಲೆಯಲ್ಲಿ ವಿಸರ್ಜನೆ ಮಾಡಲಾಗುತ್ತಿದ್ದು, ಈ ಹಿನ್ನೆಲೆ ಇಂದು ಬೆಳಗ್ಗೆ 11 ರಿಂದ ಸಂಜೆ 5 ರವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ತಾತ್ಕಾಲಿಕವಾಗಿ ಗಣೇಶಮೂರ್ತಿ ಸಾಗುವ ಮಾರ್ಗದಲ್ಲಿ ಬಂದ್ ಮಾಡಲಾಗಿದ್ದು, ಗದಗ ಕಡೆಯಿಂದ ಬರುವ ಬಸ್‌ಗಳು ಪಿಂಟೋ ಸರ್ಕಲ್‌ನಲ್ಲಿ ನಿಲ್ಲಿಸಬೇಕು. ನವಲಗುಂದ ಕಡೆಯಿಂದ ಬರುವ ಬಸ್‌ಗಳು ಸರ್ವೋದಯ ಸರ್ಕಲ್‌ನಲ್ಲಿ ನಿಲ್ಲಿಸಬೇಕು.
ಕಾರವಾರ ಕಡೆಯಿಂದ ಬರುವ ಬಸ್‌ಗಳು ತಾರಿಹಾಳ ಮಾರ್ಗವಾಗಿ ಸಾಗಬೇಕು. ಬೆಂಗಳೂರು ಹಾಗೂ ಗಬ್ಬೂರ ಕಡೆಯಿಂದ ಬರುವ ಬಸ್‌ಗಳು ಕಮರಿಪೇಟೆ ಪೊಲೀಸ್ ಠಾಣೆಯಿಂದ ತಿರುಗಿಸಿಕೊಂಡು ಹೊಸೂರ ಸರ್ಕಲ್‌ನಿಂದ ಸಾಗಬೇಕು. ಗದಗ ಕಡೆ ಹೋಗುವ ಬಸ್‌ಗಳು ರಿಂಗ್ ರೋಡ್ ಬಳಸಬೇಕು. ನವಲಗುಂದ ಕಡೆ ಹೋಗುವ ಬಸ್‌ಗಳು ಕುಸುಗಲ್ ಸಮೀಪದ ರಿಂಗ್ ರೋಡ್ ಬಳಸಬೇಕು.












Click it and Unblock the Notifications