BREAKING: ಹುಬ್ಬಳ್ಳಿಗೆ ಇಂದು ಗೃಹ ಸಚಿವರು: ಮಹತ್ವದ ಸಭೆ
ಬೆಂಗಳೂರು, ಮೇ 20: ಹುಬ್ಬಳ್ಳಿಯಲ್ಲಿ ಒಂದೇ ತಿಂಗಳ ಅಂತದಲ್ಲಿ ಇಬ್ಬರು ಯುವತಿ ಕೊಲೆ ಆಗಿದೆ. ಇದು ರಾಜ್ಯ ಸರ್ಕಾರಕ್ಕೆ ಮುಜುಗರ ತಂದಿರುವುದಲ್ಲದೇ, ಜನರಿಗೆ ಕಾನೂನು-ಸುವ್ಯವಸ್ಥೆ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಈ ಬಗ್ಗೆ ವಿಪಕ್ಷಗಳು ಕಟುವಾಗಿ ಆರೋಪಿಸಿದ ಬೆನ್ನಲ್ಲೆ ಇಂದು ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಅವರು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ.
ಈ ಕುರಿತು ಗೃಹ ಸಚಿವರ ಕಾರ್ಯಾಲವು ಮಾಹಿತಿ ನೀಡಿದ್ದು, ಇಂದು ಮಧ್ಯಾಹ್ನ 03 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಜಿ.ಪರಮೇಶ್ವರ ಅವರು ಆಗಮಿಸಲಿದ್ದಾರೆ. ಅಲ್ಲಿಂದ ಅವರು ನೇರವಾಗಿ ಖಾಸಗಿ ಹೊಟೇಲ್ ಗೆ ತೆರಳಲಿದ್ದಾರೆ.

ಏಪ್ರಿಲ್ 18ರಂದು ನಡೆದ ನೇಹಾ ಹಿರೇಮಠ ಹಾಗೂ ಮೇ 15ರಂದು ಹತ್ಯೆಗೀಡಾದ ಅಂಜಲಿ ಅಂಬಿಗೇರ ನಿವಾಸಕ್ಕೆ ಗೃಹ ಸಚಿವರ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ. ಬಳಿಕ ನವನಗರದ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಂಬಂಧಿಸಿದವರ ಜೊತೆಗೆ ಮಹತ್ವದ ಸಭೆ ನಡೆಸಲಿದ್ದಾರೆ.
ಇಂದು ರಾತ್ರಿ ಹುಬ್ಬಳ್ಳಿಯಲ್ಲಿಯೇ ವಾಸ್ತವ್ಯ ಹೂಡಲಿರುವ ಗೃಹ ಸಚಿವರು, ನಾಳೆ ಮಂಗಳವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಆರೋಪಗಳ ಬೆನ್ನಲ್ಲೆ ಎಚ್ಚೆತ್ತ ಗೃಹ ಸಚಿವರು
ಕೆಲವೇ ವಾರಗಳ ಅಂತರದಲ್ಲಿ ಯುವತಿಯ ಕೊಲೆ ಆಗಿದೆ. ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಪೊಲೀಸರು ದೂರು ನೀಡಿದರೆ ಎಚ್ಚರಿಕೆ ವಹಿಸಿಲ್ಲ. ಸರ್ಕಾರ ಸಂಪೂರ್ಣ ವೈಫಲ್ಯವಾಗಿದೆ. ಗೃಹ ಇಲಾಖೆ ಹೈಜಾಕ್ ಆಗಿದೆ. ಒಂದು ಸಮುದಾಯದ ಪರ ಸರ್ಕಾರ ನಿಂತಿದೆ ಹೀಗೆ ಸಾಲು ಸಾಲು ಆರೋಪಗಳನ್ನು ಸರ್ಕಾರ ಎದುರಿಸಿದೆ.
ನೇಹಾ, ಅಂಜಲಿ ಕೊಲೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ತೀವ್ರ ಪ್ರತಿಭಟನೆ ನಡೆದಿವೆ. ನಗರದಲ್ಲಿ ಕಾನೂನಿನ ಭಯ ಇಲ್ಲದಾಗಿದೆ ಎಂದು ಅನೇಕ ಸಂಘಟನೆಗಳು, ರಾಜಕೀಯ ನಾಯಕರು ದೂರಿದ್ದರು. ಇದರ ಬೆನ್ನಲ್ಲೆ ಗೃಹ ಸಚಿವರು ಇಂದು ಖುದ್ದು ಹುಬ್ಬಳ್ಳಿ ತೆರಳಿ ಪರಿಸ್ಥಿತಿ ಅವಲೋಕಿಸಲಿದ್ದಾರೆ. ಕೊಲೆ ಘಟನೆಗಳು, ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.












Click it and Unblock the Notifications