Holi festival 2023: ಬಣ್ಣದೋಕುಳಿಯಲ್ಲಿ ಮಿಂದೆದ್ದ ವಿದ್ಯಾಕಾಶಿ ಧಾರವಾಡ
ಧಾರವಾಡದಲ್ಲಿ ಬಣ್ಣದೋಕುಳಿ ಸಂಭ್ರಮ, ಸಡಗರ ಮನೆ ಮಾಡಿದ್ದು, ರಾಮ್ ಅಂಡ್ ಕೋ ಸರ್ಕಲ್‌ನಲ್ಲಿ ಯುವಕ, ಯುವತಿಯರು, ಮಹಿಳೆಯರ ನೃತ್ಯವಂತೂ ನೋಡುಗರ ಗಮನ ಸೆಳೆಯಿತು.
ಧಾರವಾಡ, ಮಾರ್ಚ್, 08: ವಿದ್ಯಾಕಾಶಿ, ಸಾಂಸ್ಕೃತಿಕ ನಗರಿ ಎಂಬೆಲ್ಲ ಹೆಸರುಗಳಿಂದ ಕರೆಸಿಕೊಳ್ಳುವ ಧಾರವಾಡ ಬುಧವಾರ ಅಕ್ಷರಶಃ ಬಣ್ಣದೋಕುಳಿಯಲ್ಲಿ ಮಿಂದೆದ್ದಿತ್ತು.
ಧಾರವಾಡದ ಕೆಸಿಡಿ ವೃತ್ತದಲ್ಲಿ ಬಣ್ಣದ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ಈ ಉತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಯುವಕ, ಯುವತಿಯರು ಆಗಮಿಸಿ ಸಂಭ್ರಮಿಸಿದರು. ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ ಅವರು, ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿ ಗಮನ ಸೆಳೆದರು.

ಹೆಣ್ಣು, ಗಂಡು ಎಂಬ ಬೇಧವಿಲ್ಲದೇ ಎಲ್ಲರೂ ಬಣ್ಣದೋಕುಳಿ ಆಡಿದರು. ಕೆಸಿಡಿ ವೃತ್ತದಲ್ಲಿ ಗಡಿಗೆ ಒಡೆಯುವ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಅನೇಕ ಯುವಕರ ತಂಡ ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಒಟ್ಟಾರೆ ವಿದ್ಯಾಕಾಶಿ ಧಾರವಾಡ ಬುಧವಾರ ಸಂಭ್ರಮದ ಹೋಳಿ ಹಬ್ಬಕ್ಕೆ ಸಾಕ್ಷಿಯಾಗಿದೆ.
ದಾವಣಗೆರೆಯಲ್ಲಿ ಹೋಳಿ ಹಬ್ಬದ ಸಂಭ್ರಮ
ಜಿಲ್ಲೆಯಾದ್ಯಂತ ಬಣ್ಣದೋಕುಳಿ ಸಂಭ್ರಮ, ಸಡಗರ ಮನೆ ಮಾಡಿತ್ತು. ಇಂದು ಬೆಣ್ಣೆನಗರಿಯ ಜನ ಬಣ್ಣದ ಲೋಕದಲ್ಲಿ ಮಿಂದೆದಿದ್ದರು. ರಾಮ್ ಅಂಡ್ ಕೋ ಸರ್ಕಲ್‌ನಲ್ಲಿ ಯುವಕ, ಯುವತಿಯರು, ಮಹಿಳೆಯರ ನೃತ್ಯವಂತೂ ನೋಡುಗರ ಗಮನ ಸೆಳೆಯಿತು. ಪರಸ್ಪರ ಬಣ್ಣ ಎರಚಿಕೊಳ್ಳುತ್ತಾ ಡಿಜೆ ಸೌಂಡ್‌ಗೆ ಸಖತ್ತಾಗಿಯೇ ಸ್ಟೆಪ್ ಹಾಕಿ ಸಂಭ್ರಮಿಸಿದರು.

ಬಣ್ಣದಲ್ಲಿ ಮಿಂದೆದ್ದ ಯುವಸಮೂಹ
ಕಣ್ಣಿಗೆ ಮುದನೀಡುವ ವಸ್ತ್ರಾಲಂಕಾರವನ್ನು ಹಾಕಿ ಡಿಜೆ ಹಾಡುಗಳಿಗೆ ನೃತ್ಯ ಮಾಡಿ ಗಮನಸೆಳೆದರು. ಬಣ್ಣ ಬಣ್ಣದ ವೇಷ ತೊಟ್ಟವರ ಬಟ್ಟೆಗಳೆಲ್ಲವೂ ಬಣ್ಣಗಳಿಂದ ಕಂಗೊಳಿಸುತ್ತಿದ್ದವು. ಇನ್ನು ಬಣ್ಣದಲ್ಲಿ ಮಿಂದೆದ್ದ ಯುವಸಮೂಹ ಡಿಜೆ ಸೌಂಡ್‌ಗೆ ಸಖತ್ ಸ್ಟೆಪ್ ಹಾಕಿದ್ದು, ಚಿಣ್ಣರ ಸಂಭ್ರಮವೂ ಕೂಡ ಮುಗಿಲು ಮುಟ್ಟಿತ್ತು.
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ರಾಮ್ ಅಂಡ್ ಕೋ ಸರ್ಕಲ್‌ನಲ್ಲಿ ಕಾಲೇಜು ಯುವಕ, ಯುವತಿಯರ ಡ್ಯಾನ್ಸ್ ಮತ್ತಷ್ಟು ಕಳೆಗಟ್ಟುವಂತೆ ಮಾಡಿತ್ತು. ನಗರದಾದ್ಯಂತ ಯುವಕರು ಬಣ್ಣ ಹಚ್ಚಿಕೊಂಡು ಸಂಭ್ರಮಿಸುತ್ತಿದ್ದರೆ, ಬಡಾವಣೆಗಳಲ್ಲಿ ತಾವೇನೂ ಕಡಿಮೆ ಇಲ್ಲ ಎನ್ನುವಂತೆ ಜನರು ಮನೆಯಿಂದ ಹೊರ ಬಂದು ಬಣ್ಣದೋಕುಳಿ ಆಡಿ ಸಂಭ್ರಮಿಸಿದರು.












Click it and Unblock the Notifications