ಸಂಪುಟ ವಿಸ್ತರಣೆ ಆದ ದಿನವೇ ಸರ್ಕಾರ ಪತನ: ಈಶ್ವರಪ್ಪ
ಹುಬ್ಬಳ್ಳಿ, ನವೆಂಬರ್ 30: ರಾಜ್ಯ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಮಾಡಿದ ದಿನವೇ ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಗೆ ಕಾಂಗ್ರೆಸ್‌ನ ಹಲವು ಶಾಸಕರು ಕಾಯುತ್ತಿದ್ದಾರೆ. ಸರ್ಕಾರ ಉರುಳಿಸಲು ಸಂಪುಟ ವಿಸ್ತರಣೆಯ ನೆಪ ಬೇಕಿದೆ. ವಿಸ್ತರಣೆ ಆದ ಕೂಡಲೇ ಸರ್ಕಾರವನ್ನು ಬೀಳಿಸುತ್ತಾರೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸರ್ಕಾರ ಇದೆಯಾ? ಎಂಬ ಅನುಮಾನ ಮೂಡುತ್ತಿದೆ. ಮುಖ್ಯಮಂತ್ರಿ ಪದವಿಯ ಆಸೆಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಸಿದ್ದರಾಮಯ್ಯ ಅವರಿಗೆ ಮಾನ-ಮರ್ಯಾದೆ ಇದ್ದಿದ್ದರೆ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಅಧಿಕಾರಕ್ಕೆ ಆಸೆ ಪಟ್ಟು ಮಾಡಿಕೊಂಡಿರುವ ಮೈತ್ರಿ ಇದು, ಸಿದ್ದರಾಮಯ್ಯ ಅವರು ತಮ್ಮ ಎಲ್ಲಾ ಆದರ್ಶಗಳನ್ನು ಬದಿಗೆ ಸರಿಸಿ ಮೈತ್ರಿಗೆ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್‌ಗೆ ಎಂದೂ ಇಂಥಹಾ ಹೀನಾಯ ಸ್ಥಿತಿ ಬಂದಿರಲಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಇರುವುದು ಜನಪರ ಸರ್ಕಾರವಲ್ಲ, ಅದು ದೇವೇಗೌಡ-ರೇವಣ್ಣ ಸರ್ಕಾರ ಅಷ್ಟೆ ಎಂದು ಲೇವಡಿ ಮಾಡಿದ ಈಶ್ವರಪ್ಪ, ಮುಂದಿನ ಲೋಕಸಭೆಯಲ್ಲಿ ನಾವು 24 ಸೀಟುಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಅವರು ಹೇಳಿದರು.












Click it and Unblock the Notifications