ಹುಬ್ಬಳ್ಳಿ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ, ನಾಲ್ವರ ಬಂಧನ
ಹುಬ್ಬಳ್ಳಿ, ಜೂನ್ 05 : ಪ್ರೀತಿಯ ನಾಟಕವಾಡಿ ಸ್ನೇಹಿತರೊಂದಿಗೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಪೊಲೀಸರು ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನಗರದ ವಿವಿಧ ಬಡಾವಣೆ ನಿವಾಸಿಗಳಾದ ಅಣ್ಣಪ್ಪ, ಅಮೀತ್, ಸುನೀಲ್ ಹಾಗೂ ವಿನೋದ್ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಡಾ.ಪಾಂಡುರಂಗ ರಾಣೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಹಳೇ ಹುಬ್ಬಳ್ಳಿಯ ಶರಾವತಿ ನಗರದ ನಿವಾಸಿ ಅಣ್ಣಪ್ಪ ಶೇರಖಾನೆ (23) ಎನ್ನುವಾತ ವಿರೇಂದ್ರ ಎಂದು ಹೆಸರು ಬದಲಿಸಿಕೊಂಡು ಓರ್ವ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ತನ್ನ ಸ್ನೇಹಿತರ ಜತೆ ಸೇರಿಕೊಂಡು ಅತ್ಯಾಚಾರ ಎಸಗಿದ್ದಾರೆ.
ಘಟನೆ ಕುರಿತು ಎಲ್ಲಿಯೂ ಬಾಯಿ ಬಿಡದಂತೆ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಯಾರಿಗಾದರೂ ಹೇಳಿದರೆ ಮೊಬೈಲ್ ನಲ್ಲಿ ಮಾಡಿಕೊಂಡಿರುವ ಚಿತ್ರೀಕರಣವನ್ನು ಬಿಡುಗಡೆ ಮಾಡುವುದಾಗಿ ಬೆದರಿಸಿದ್ದನು.
ಬಳಿಕ ಬಾಲಕಿ ಗರ್ಭಿಣಿಯಾದ ನಂತರ ಮನೆಯವರಿಗೆ ಈ ವಿಷಯ ತಿಳಿದಿದ್ದು, ಬಾಲಕಿ ಡಿಸೆಂಬರ್ 2016ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಕುರಿತು ಬಾಲಕಿಯ ಪೋಷಕರು ಡಿಸೆಂಬರ್ 10, 2016ರಂದು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು.
ಇದೀಗ ಈ ಪ್ರಕರಣವನ್ನು ಹಳೆ ಹುಬ್ಬಳ್ಳಿ ಠಾಣೆಯ ಇನ್ಸ್ ಪೆಕ್ಟರ್ ಶ್ರೀಪಾದ ಜಲ್ದೆ ನೇತೃತ್ವದ ತಂಡ ಬೇಧಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೋಟೆಲ್ ಗಳ ಮೇಲೆ ದಾಳಿ: ಹೋಟೆಲ್ ಪರವಾನಗಿ ಪಡೆದು ಅಕ್ರಮವಾಗಿ ಲಾಡ್ಜಿಂಗ್ ನಡೆಸುತ್ತಿದ್ದ ಆರೋಪದಡಿ ನಗರದ 11 ಪ್ರಮುಖ ಹೋಟೆಲ್ ಗಳ ಮೇಲೆ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ದಾಳಿ ಮಾಡಿದ್ದಾರೆ.
ಸ್ವಾಗತ್, ಆದರ್ಶ, ಮಹಾಲಕ್ಷ್ಮಿ, ಶ್ರೀನಿಧಿ, ನ್ಯೂ ಶೀಲಾ, ದ್ವಾರಕಾ, ಸಾಯಿ, ಯಾತ್ರಿ ನಿವಾಸ, ಮಯೂರ ಎನ್ನುವ ಹೋಟೆಲ್ ಗಳ ಮೇಲೆ ದಾಳಿ ನಡೆಸಿ ಸೀಜ್ ಮಾಡಿದ್ದಾರೆ.
ದಾಳಿ ವೇಳೆ ಹೈಟೆಕ್ ವೇಶಾವಾಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಹೋಟೆಲ್ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವುಗಳ ಪರವಾನಗಿ ರದ್ದು ಮಾಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಡಾ.ಪಾಂಡುರಂಗ ರಾಣೆ ತಿಳಿಸಿದ್ದಾರೆ.












Click it and Unblock the Notifications