ಕಡಿಯುವುದು ರಾವಣನ ಕೆಲಸ; ಸುಖ, ಸಂತೋಷ ಬೇಕಂದ್ರೆ ರಾಮನನ್ನು ಆರಾಧಿಸಿ: ಪೇಜಾವರ ಶ್ರೀ
ಹುಬ್ಬಳ್ಳಿ, ಅಕ್ಟೋಬರ್, 12: ನಾವೆಲ್ಲರೂ ಸನಾತನ ಧರ್ಮಿಯರು. ರಾಮನೇ ಆದರ್ಶ ಪುರುಷ. ಶತಮಾನಗಳ ಹೋರಾಟದಿಂದ ರಾಮಮಂದಿರ ನಿರ್ಮಾಣವಾಗುತ್ತಿದೆ. ಜಗತ್ತೆಲ್ಲ ಆರಾಮವಾಗಿರಬೇಕೆಂದರೆ ರಾಮನೇ ಕಾರಣ ಎಂದು ಉಡುಪಿಯ ವಿಶ್ವ ಪ್ರಸನ್ ತೀರ್ಥ ಮಹಾಸ್ವಾಮಿಗಳು ಹುಬ್ಬಳ್ಳಿಯಲ್ಲಿ ಹೇಳಿದರು.
ಹುಬ್ಬಳ್ಳಿಯ ಹೆಗ್ಗೇರಿಯ ಭುವನೇಶದವರಿ ನಗರದ ದಲಿತರ ಕಾಲೊನಿಯಲ್ಲಿ ಪೇಜಾವರ ಶ್ರೀ ಪಾದಯಾತ್ರೆ ನಡೆಸಿ ಮಾತನಾಡಿದ ಅವರು, ಸುಖ ಸಂತೋಷ ಬೇಕು ಎಂದರೆ ರಾಮನ ಆರಾಧನೆ ಮಾಡೋಣ. ಭಗವಂತ ಅದರಿಂದ ಸತುಷ್ಟನಾಗುತ್ತಾನೆ. ಸಣ್ಣ ಪೂಜೆಯೂ ಸಹ ದೇವರಿಗೆ ಆಗುತ್ತದೆ. ಇನ್ನೊಬ್ಬರನ್ನು ಬಡಿಯುತ್ತೇವೆ, ಕಡಿಯುತ್ತೇವೆ ಎಂದರೆ ಅದು ರಾವಣನ ಕೆಲಸ, ರಾಮನ ಕೆಲಸವಲ್ಲ ಎಂದರು.

ನಾವೆಲ್ಲರೂ ರಾಮನ ಜಪ ಮಾಡೋಣ ಎಂದು ರಾಮನ ಜಪ ಮಾಡಿದರು. ಮಕರ ಸಂಕ್ರಮಣದ ನಂತರ ರಾಮಮಂದಿರ ಉದ್ಘಾಟನೆ ಆಗಲಿದೆ. 5 ದೀಪಗಳನ್ನು ಬೆಳಗುವ ಮೂಲಕ ಎಲ್ಲರು ರಾಮನ ಆರಾಧನೆ ಮಾಡೋಣ ಎಂದರು.
ದಲಿತರ ಕೇರಿಯಲ್ಲಿ ಪೇಜಾವರ ಶ್ರೀ ಸಂಚಾರ
ಇತ್ತೀಚೆಗಷ್ಟೇ ಪೇಜಾವರ ಶ್ರೀಗಳು ಮೈಸೂರಿನ ದಲಿತರ ಕೇರಿಯಲ್ಲಿ ಮಿಂಚಿನ ಸಂಚಾರ ಕೈಗೊಂಡು ನಿವಾಸಿಗಳಲ್ಲಿ ಅಚ್ಚರಿ ಮೂಡಿಸಿದ್ದರು.
ಹಿಂದೂ ಸಮಾಜದಲ್ಲಿ ಆಂತರಿಕ ಬಾಂಧವ್ಯ ಮತ್ತು ಸಾಮರಸ್ಯವನ್ನು ಸುದೃಢಗೊಳಿಸುವ ಧರ್ಮ ಜಾಗೃತಿಯನ್ನು ಮೂಡಿಸುವ ಸಲುವಾಗಿ ತಮ್ಮ 36ನೇ ಚಾತುರ್ಮಾಸ್ಯದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಹತ್ತಾರು ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳ ಬಡಾವಣೆಗಳಿಗೆ ಸಾಮರಸ್ಯದ ನಡಿಗೆಯನ್ನು ಆದ್ಯತೆಯಲ್ಲಿ ಹಮ್ಮಿಕೊಳ್ಳುವಂತೆ ಚಾತುರ್ಮಾಸ್ಯ ಸಮಿತಿಗೆ ಸೂಚಿಸಿದರು.
ಅದರಂತೆಯೇ ಮೈಸೂರಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧರ್ಮಜಾಗರಣ ವಿಭಾಗ ಮತ್ತು ಸಾಮರಸ್ಯ ವೇದಿಕೆಗಳ ಜಂಟಿ ಸಂಯೋಜನೆಯಲ್ಲಿ ಬಿಬಿ ಕೇರಿ ಬಡಾವಣೆಗೆ ತೆರಳಿದರು. ಇದೆ ವೇಳೆ ಸುಮಾರು ಇನ್ನೂರಕ್ಕೂ ಅಧಿಕ ಮನೆಗಳನ್ನು ಹೊಂದಿರುವ ಬಡಾವಣೆಗೆ ಶ್ರೀಗಳ ಭೇಟಿ ಹಿನ್ನೆಲೆ ಪ್ರತೀ ಮನೆಗಳ ಮುಂಭಾಗ ಓಣಿ ರಸ್ತೆಗಳ ಉದ್ದಕ್ಕೂ ಸಾಲು ಸಾಲು ರಂಗೋಲಿ, ಕೇಸರಿ ಪತಾಕೆ, ಭಗವಾಧ್ವಜ, ತಳಿರು ತೋರಣ ಹೂವಿನ ಮಾಲೆಗಳಿಂದ ಅಲಂಕರಿಸಲಾಗಿತ್ತು.
ಶ್ರೀಗಳು ಆಗಮಿಸುತ್ತಿದ್ದಂತೆ ಜೈಶ್ರೀರಾಮ್, ಅಯೋಧ್ಯಾಪತಿ ಶ್ರೀ ರಾಮಚಂದ್ರ ಭಗವಾನ್ ಕೀ ಜೈ, ಭಾರತ್ ಮಾತೆ, ಸನಾತನ ಧರ್ಮಗಳಿಗೆ ಜೈಕಾರಗಳು, ವಂದೇ ಮಾತರಂ, ನಾವೆಲ್ಲ ಹಿಂದು ನಾವೆಲ್ಲ ಒಂದು ಮೊದಲಾದ ಘೋಷಣೆಗಳು ಮೊಳಗಿದವು.
ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣದವರಗೆ ಪ್ರತೀ ದಿನ ಸಂಜೆ ರಾಮದೀಪ ಬೆಳಗಿ ರಾಮಮಂತ್ರ ಜಪ ಮಾಡಿ ಪ್ರಾರ್ಥಿಸುವಂತೆ ಶ್ರೀಗಳು ಸೂಚಿಸಿದರು. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರಗಳನ್ನು ನೀಡಬೇಕು. ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿರುವ ನಾವೆಲ್ಲ ನಮ್ಮ ನಮ್ಮ ಕೇರಿ, ಬಡಾವಣೆಗಳಲ್ಲೂ ಸಾಮರಸ್ಯ ಐಕಮತ್ಯ ಮತ್ತು ಧರ್ಮ ಪ್ರಜ್ಞೆಯನ್ನು ಉಳಿಸಿ ಒಗ್ಗಟ್ಟಿನಿಂದ ಶಾಂತಿ ನೆಮ್ಮದಿಯಿಂದ ಜೀವಿಸಬೇಕಾಗಿದೆ. ಇದೇ ಹಿಂದೂ ಸಮಾಜದ ಶಕ್ತಿಯಾಗಿದೆ. ಅದನ್ನು ಉಳಿಸುವುದು ನಮ್ಮ ಕರ್ತವ್ಯವೂ ಆಗಿದೆ ಎಂದು ಹೇಳಿದರು.












Click it and Unblock the Notifications