ಹುಬ್ಬಳ್ಳಿ : ಕಾಂಗ್ರೆಸ್ ತೊರೆದ ಪ್ರಭಾವಿ ನಾಯಕ
ಹುಬ್ಬಳ್ಳಿ, ಮಾರ್ಚ್ 17 : ಹುಬ್ಬಳ್ಳಿಯ ಕಾಂಗ್ರೆಸ್ ನಾಯಕ ಡಾ.ಮಹೇಶ್ ನಾಲವಾಡ್ ಅವರು ಕಾಂಗ್ರೆಸ್ ತೊರೆದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಬಯಸಿತ್ತು.
ಕೆಪಿಸಿಸಿ ವೈದ್ಯಕೀಯ ಘಟಕದ ರಾಜ್ಯಾಧ್ಯಕ್ಷರಾಗಿದ್ದ ಡಾ.ಮಹೇಶ್ ನಾಲವಾಡ್ ಅವರು ಶನಿವಾರ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಅವರು ರಾಜೀನಾಮೆ ಪತ್ರವನ್ನು ಕಳಿಸಿದ್ದಾರೆ.
2019ರ ಚುನಾವಣೆಗೆ ಧಾರವಾಡ ಕ್ಷೇತ್ರದಿಂದ ಡಾ.ಮಹೇಶ್ ನಾಲವಾಡ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸುತ್ತಿತ್ತು. ಆದರೆ, ಅವರು ಕಾಂಗ್ರೆಸ್ ತೊರೆದಿರುವುದು ಪಕ್ಷಕ್ಕೆ ಚುನಾವಣೆ ಸಮಯದಲ್ಲಿ ಹಿನ್ನಡೆ ಉಂಟು ಮಾಡಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಡಾ.ಮಹೇಶ್ ನಾಲವಾಡ್ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ನಾಲವಾಡ್ ಅವರ ಮುಂದಿನ ನಡೆ ಏನು? ಎಂಬುದು ಇನ್ನೂ ನಿಗೂಢವಾಗಿದೆ. ಬಿಜೆಪಿ ಸೇರಲಿದ್ದಾರೆಯೇ? ಕಾದು ನೋಡಬೇಕಿದೆ.

ವಿಧಾನಸಭೆ ಚುನಾವಣೆಯಲ್ಲಿ ಸೋಲು
ಡಾ.ಮಹೇಶ್ ನಾಲವಾಡ್ ಅವರು ಎರಡು ಬಾರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. 2018ರ ಚುನಾವಣೆಯಲ್ಲಿ ಅವರು 54,488 ಮತಗಳನ್ನು ಪಡೆದು ಬಿಜೆಪಿಯ ಜಗದೀಶ್ ಶೆಟ್ಟರ್ ಅವರ ವಿರುದ್ಧ ಸೋಲು ಅನುಭವಿಸಿದ್ದರು.

ಪ್ರಸಕ್ತ ರಾಜಕೀಯದಿಂದ ಬೇಸರ
ಡಾ.ಮಹೇಶ್ ನಾಲವಾಡ್ ಅವರು ಕಾಂಗ್ರೆಸ್ ತೊರೆದಿರುವುದು ಏಕೆ? ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಅವರು ಪ್ರಸಕ್ತ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಅಭ್ಯರ್ಥಿ ಮಾಡಲು ಹೊರಟಿತ್ತು
ಡಾ.ಮಹೇಶ್ ನಾಲವಾಡ್ ಅವರು 2018ರ ಚುನಾವಣೆಯಲ್ಲಿ ಅವರು 54,488 ಮತಗಳನ್ನು ಪಡೆದಿದ್ದರು. 2013ರ ಚುನಾವಣೆಯಲ್ಲಿ 40,447 ಮತಗಳನ್ನು ಪಡೆದಿದ್ದರು. ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಪ್ರಭಾವಿಯಾಗಿದ್ದ ಅವರನ್ನು 2019ರ ಚುನಾವಣೆಗೆ ಧಾರವಾಡ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ತಯಾರಿ ನಡೆಸಿತ್ತು.

ಧಾರವಾಡದಲ್ಲಿ ಅಭ್ಯರ್ಥಿ ಯಾರು?
ಧಾರವಾಡ ಕ್ಷೇತ್ರದಿಂದ 2019ರ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಹ್ಲಾದ್ ಜೋಶಿ ಅವರು ಅಭ್ಯರ್ಥಿಯಾಗಲಿದ್ದಾರೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ತೀರ್ಮಾನವಾಗಿಲ್ಲ. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.












Click it and Unblock the Notifications