ಧಾರವಾಡ ಪೊಲೀಸರಿಂದ ಮಾದಕ ವಸ್ತು ವಿರುದ್ಧ ಜಾಗೃತಿ ಅಭಿಯಾನ: ಪೊಲೀಸ್ ಕಮಿಷನರ್ ಸಖತ್ ಡಾನ್ಸ್
ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ ಸಮಾಜವನ್ನು ವ್ಯಸನ ಮುಕ್ತಗೊಳಿಸಲು ಸಹಕರಿಸಿ ಎನ್ನುವ ಘೋಷಣಾ ವ್ಯಾಕ್ಯದಡಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಶನಿವಾರ ಬೆಳಗ್ಗೆ ಬೃಹತ್ ವಾಕ್ ಥಾನ್ ನಡೆಸಲಾಯಿತು.
ಹುಬ್ಬಳ್ಳಿ, ಫೆಬ್ರವರಿ 25: ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ ಸಮಾಜವನ್ನು ವ್ಯಸನ ಮುಕ್ತಗೊಳಿಸಲು ಸಹಕರಿಸಿ ಎನ್ನುವ ಘೋಷಣಾ ವ್ಯಾಕ್ಯದಡಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಶನಿವಾರ ಬೆಳಗ್ಗೆ ಬೃಹತ್ ವಾಕ್ ಥಾನ್ ನಡೆಸಲಾಯಿತು.
ನಗರದ ವಿದ್ಯಾನಗರದ ಬಿವಿಬಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಚಾಲನೆ ನೀಡಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರಮಣಗುಪ್ತ ಅವರು ನಗರದ ಪ್ರಮುಖ ಬೀದಿಗಳಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ವಿವಿಧ ಅಪರಾಧ ಪ್ರಕರಣಗಳಿಂದಾಗುವ ದುಷ್ಪರಿಣಾಮಗಳ ಕುರಿತು ಕಾಲ ನಡಿಗೆ ಮೂಲಕ ಜಾಗೃತಿ ಮೂಡಿಸಿದರು.

ನಂತರ ವಿದ್ಯಾನಗರದ ಕೊನೆಯ ಭಾಗ ತೊಳನಕೆರೆಗೆ ಹೋಗಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷರೇಟ್ ಇಲಾಖೆ, ಹುಬ್ಬಳ್ಳಿ ವೆಸ್ಟ್ ರೋಟರಿ ಸಂಸ್ಥೆ ಹಾಗೂ ಎಂ ಸ್ಕ್ವೇರ್ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆರಂಭಗೊಂಡ ಬೃಹತ್ ವಾಕ್ ಥಾನ್ ದಲ್ಲಿ 500ಕ್ಕೂ ಹೆಚ್ಚು ಶಾಲಾ ಮಕ್ಕಳು, ಪೊಲೀಸರು ಪಾಲ್ಗೊಂಡಿದ್ದರು.
ಜಾಥಾ ಉದ್ದಕ್ಕೂ ಮಾದಕ ವಸ್ತುಗಳ ಕುರಿತು ಮಾಹಿತಿ ನೀಡುವ ಜೊತೆಗೆ ಅದರಿಂದ ಆಗುವ ಪರಿಣಾಮದ ವಿವರ ನೀಡಿದ ಫಲಕಗಳು ಹಾಗೂ ಘೋಷ ವಾಕ್ಯ ಹಿಡಿದಿದ್ದ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಯಲ್ಲಿ ಹೆಜ್ಜೆ ಹಾಕಿ ಜಾಗೃತಿ ಮೂಡಿಸಿದರು.

ಈ ವೇಳೆ ಮಾತನಾಡಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರಮಣಗುಪ್ತ, "ಸಾಕಷ್ಟು ಯುವ ಪೀಳಿಗೆ ದಿನೇ ದಿನೇ ಮಾದಕ ವ್ಯಸನಿಗಳಾಗುತ್ತಿದ್ದು ಹಾಗೂ ಇದನ್ನು ಬಳಸಿಕೊಂಡ ಮಾದಕ ವಸ್ತು ಸಾಗಣೆದಾರರು ಇಂತಹ ವಸ್ತುಗಳನ್ನು ಕಳ್ಳ ಸಾಗಣೆ ಮಾಡಿ ದೇಶದ ಯುವ ಶಕ್ತಿಗೆ ಮಾರಕವಾಗುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆಗೆ ಅರಿವು ಮೂಡಿಸುವುದು ಅವಶ್ಯಕವಾಗಿರುತ್ತದೆ. ಮಾದಕ ದ್ರವ್ಯ ಬಳಕೆ ಹಾಗೂ ಕಳ್ಳ ಸಾಗಣೆ ಅಂತಾರಾಷ್ಟ್ರೀಯ ಸಮಸ್ಯೆಯಾಗಿದೆ. ಯುವಕರು ಇದರ ವಿರುದ್ಧ ಧ್ವನಿ ಎತ್ತಬೇಕು'' ಎಂದು ಸಲಹೆ ನೀಡಿದರು.
''ಮಾದಕ ದ್ರವ್ಯ ಬಳಕೆ ಅಪಾಯಕಾರಿಯಾಗಿದ್ದು, ಇದು ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗೆ ದೂಡುವ ಜೊತೆಗೆ ಮನುಷ್ಯರನ್ನು ಅಧೀರರನ್ನಾಗಿಸುತ್ತದೆ. ಸರ್ಕಾರ, ಸಂಘ ಸಂಸ್ಥೆಗಳು, ಜನರು ಒಂದಾಗಿ ಇದರ ವಿರುದ್ಧ ಸಮರ ಸಾರಬೇಕು. ಭಾರತದಲ್ಲಿ ಮಾದಕವಸ್ತುಗಳ ಬಳಗೆ ನಿಷೇಧ ಇದ್ದರೂ ಕಳ್ಳದಾರಿಯಲ್ಲಿ ನುಸುಳುತ್ತಿದೆ. ಅನಕ್ಷರಸ್ಥರು, ಸ್ಲಂಪ್ರದೇಶಗಳಲ್ಲಿ ಇದರ ಅಪಾಯದ ಅರಿವಿಲ್ಲದೆ ಸೇವನೆ ಮಾಡುತ್ತಿರುವ ಬಗ್ಗೆ ಹೆಚ್ಚು ಕೇಳಿ ಬರುತ್ತಿದೆ. ಇಂತಹ ಪ್ರಕರಣಗಳು ಒಂದು ಪ್ರದೇಶಕ್ಕೆ ಸೀಮಿತವಾಗಿರದೆ ಅನೇಕ ಕಡೆಗಳಲ್ಲಿ ಹರಡಿದೆ. ಆದ್ದರಿಂದ ಸಮಾಜ ಎಚ್ಚರಿಕೆಯಿಂದ ಇದ್ದು ತೊಲಗಿಸಲು ಯತ್ನಿಸಬೇಕು'' ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರಮಣಗುಪ್ತ ಡಿಜೆ ಹಾಡಿಗೆ ಸಖತ್ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದರು. ಈ ಮೂಲಕ ಮಾದಕ ವಸ್ತುಗಳನ್ನು ಬಳಕೆಯಿಂದ ಆಗುವ ಹಾನಿಗೆ ಈ ಉತ್ಸಾಹ ಬಹಳಷ್ಟು ಪೂರಕವಾಗಿತ್ತು.












Click it and Unblock the Notifications