94 ಅಭ್ಯರ್ಥಿಗಳಲ್ಲಿ ಠೇವಣಿ ಉಳಿಸಿಕೊಂಡವರು 17 ಮಂದಿ ಮಾತ್ರ!
ಹುಬ್ಬಳ್ಳಿ, ಏಪ್ರಿಲ್ 24 : ಸದ್ಯ ಎಲ್ಲೆಡೆ ಚುನಾವಣೆಯದೇ ಸದ್ದು ಗದ್ದಲ. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚುನಾವಣೆ ಮತಷ್ಟು ಕಾವು ಪಡೆದುಕೊಂಡಿದೆ. 2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಧಾರವಾಡ ಜಿಲ್ಲೆ ಒಂದರಲ್ಲಿಯೇ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 94 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅದರಲ್ಲಿ, 17 ಮಂದಿ ಮಾತ್ರ ಠೇವಣಿ ಉಳಿಸಿಕೊಂಡಿದ್ದು ಅಚ್ಚರಿಯ ಸಂಗತಿ.
ಹೌದು, ಮಾಜಿ ಶಾಸಕರು, ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮಾತ್ರವಲ್ಲ, ಪಕ್ಷೇತರರೂ ಸಹ ಈ ಪಟ್ಟಿಯಲ್ಲಿದ್ದರು. ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ 19 ಮಂದಿ ಸ್ಪರ್ಧಿಸಿದ್ದರು. ಏಳು ಮಂದಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಿದರೆ, 12 ಮಂದಿ ಪಕ್ಷೇತರರು ಕಣದಲ್ಲಿದ್ದರು. ಬಿಜೆಪಿಯ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಮಹೇಶ ನಾಲವಾಡ ಮಾತ್ರ ಠೇವಣಿ ಉಳಿಸಿಕೊಂಡಿದ್ದು, ಉಳಿದವರ ಠೇವಣಿ ನಷ್ಟವಾಗಿತ್ತು.
ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ 9 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಏಳು ಮಂದಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದರೆ, ಇಬ್ಬರು ಪಕ್ಷೇತರರು ಕಣದಲ್ಲಿದ್ದರು. ಕಾಂಗ್ರೆಸ್ ನ ಪ್ರಸಾದ ಅಬ್ಬಯ್ಯ, ಬಿಜೆಪಿಯ ವೀರಭದ್ರಪ್ಪ ಹಾಲಹರವಿ, ಕೆಜೆಪಿಯಿಂದ ಸ್ಪರ್ಧಿಸಿದ್ದ ಶಂಕರಪ್ಪ ಬಿಜವಾಡ ಠೇವಣಿ ಉಳಿಸಿಕೊಂಡರೆ, ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಹನುಮಂತಪ್ಪ ಆಲ್ಕೋಡ ಸೇರಿದಂತೆ ಉಳಿದವರೆಲ್ಲರೂ ಠೇವಣಿ ಕಳೆದುಕೊಂಡಿದ್ದರು.

ಹುಬ್ಬಳ್ಳಿ-ಧಾರವಾಡ ವೆಸ್ಟ್ ಕ್ಷೇತ್ರದಲ್ಲಿ 18 ಮಂದಿ ಸ್ಪರ್ಧಿಸಿದ್ದರು. ಹತ್ತು ಮಂದಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದರು. ಅದರಲ್ಲಿ ಎಂಟು ಮಂದಿ ಪಕ್ಷೇತರರಾಗಿದ್ದು, ಬಿಜೆಪಿಯ ಅರವಿಂದ ಬೆಲ್ಲದ, ಕಾಂಗ್ರೆಸ್ ನ ಎಸ್.ಆರ್. ಮೋರೆ, ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮೊಹಮ್ಮದ್ ಇಸ್ಮಾಯಿಲ್ ತಮಟಗಾರ ಠೇವಣಿ ಉಳಿಸಿಕೊಂಡರೆ, ಕೆಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಮೋಹನ ಲಿಂಬಿಕಾಯಿ ಸೇರಿದಂತೆ 15 ಮಂದಿ ಠೇವಣಿ ಕಳೆದುಕೊಂಡಿದ್ದರು.
ಕಲಘಟಗಿ ಕ್ಷೇತ್ರದಿಂದ 8 ಮಂದಿ ಸ್ಪರ್ಧಿಸಿದ್ದರು. ಐವರು ವಿವಿಧ ಪಕ್ಷಗಳಿಂದ, ಮೂವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ನ ಸಂತೋಷ ಲಾಡ್, ಕೆಜೆಪಿಯ ಸಿ.ಎಂ. ನಿಂಬಣ್ಣವರ ಠೇವಣಿ ಉಳಿಸಿಕೊಂಡರೆ, ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಪಿ.ಸಿ. ಸಿದ್ಧನಗೌಡರ, ಬಿಜೆಪಿಯಿಂದ ಸ್ಪರ್ಧಿಸಿದ್ದ ಈರಪ್ಪ ಸಾಲಗಾರ ಸೇರಿದಂತೆ ಉಳಿದವರ ಠೇವಣಿ ನಷ್ಟವಾಗಿತ್ತು.
ಧಾರವಾಡ ಕ್ಷೇತ್ರದಿಂದ 13 ಮಂದಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ನ ವಿನಯ ಕುಲಕರ್ಣಿ, ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಅಮೃತ ದೇಸಾಯಿ ಠೇವಣಿ ಉಳಿಸಿಕೊಂಡಿದ್ದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಸೀಮಾ ಮಸೂತಿ ಸೇರಿದಂತೆ ಉಳಿದವರೆಲ್ಲ ಠೇವಣಿ ಕಳೆದುಕೊಂಡಿದ್ದರು.
ಕುಂದಗೋಳ ಕ್ಷೇತ್ರದಿಂದ 11 ಮಂದಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ನ ಸಿ.ಎಸ್. ಶಿವಳ್ಳಿ, ಬಿಜೆಪಿಯ ಎಂ.ಆರ್. ಪಾಟೀಲ, ಕೆಜೆಪಿ ಎಸ್.ಐ. ಚಿಕ್ಕನಗೌಡ್ರ ಠೇವಣಿ ಉಳಿಸಿಕೊಂಡರೆ, ಉಳಿದವರು ಠೇವಣಿ ಉಳಿಸಿಕೊಳ್ಳುವಲ್ಲಿ ಸೋತಿದ್ದರು.
ನವಲಗುಂದ ಕ್ಷೇತ್ರದಿಂದ 16 ಮಂದಿ ಸ್ಪರ್ಧಿಸಿದ್ದರು. ಜೆಡಿಎಸ್ ನ ಎನ್.ಎಚ್. ಕೋನರಡ್ಡಿ, ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ, ಕಾಂಗ್ರೆಸ್ ನ ಕೆ.ಎನ್. ಗಡ್ಡಿ ಠೇವಣಿ ಉಳಿಸಿಕೊಂಡಿದ್ದರೆ, ಕೆಜಿಪಿಯಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಆರ್. ಶಿರಿಯಣ್ಣವರ ಸೇರಿದಂತೆ ಉಳಿದವರೆಲ್ಲ ಠೇವಣಿ ಕಳೆದುಕೊಂಡಿದ್ದರು.
ಈ ಬಾರಿ ಚುನಾವಣೆಯಲ್ಲಿ ಎಷ್ಟು ಜನ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ? ಎಷ್ಟು ಜನ ಠೇವಣಿ ಕಳೆದುಕೊಳ್ಳಲಿದ್ದಾರೆ ಕಾದು ನೋಡಬೇಕು.












Click it and Unblock the Notifications