ಅಜಯ್ ದೇವಗನ್‌ಗೆ ಕಿಚ್ಚ ಸುದೀಪ್ ಸರಿಯಾಗಿಯೇ ಉತ್ತರಿಸಿದ್ದಾರೆ : ಸಿಎಂ ಬೊಮ್ಮಾಯಿ
ಬೆಂಗಳೂರು, ಏಪ್ರಿಲ್ 28 : ರಾಷ್ಟ್ರ ಭಾಷೆ ಕುರಿತಾಗಿ ನಟ ಅಜಯ್ ದೇವಗನ್ ಹಾಗೂ ಕಿಚ್ಚ ಸುದೀಪ್ ನಡುವೆ ನಡೆದಿದ್ದ ವಾಕ್ಸಮರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಯಾ ರಾಜ್ಯಗಳಲ್ಲಿ ಮಾತೃಭಾಷೆಗಳೇ ಸಾರ್ವಭೌಮ, ಎಲ್ಲರೂ ಇದನ್ನು ಮನಗಂಡು ಗೌರವಿಸಬೇಕು. ಅಜಯ್ ದೇವಗನ್ ಅವರ ಟ್ವೀಟ್‌ಗೆ ಸುದೀಪ್ ಅವರು ಪ್ರತಿಯಾಗಿ ಟ್ವೀಟ್ ಮಾಡಿರುವುದು ಸರಿ ಇದೆ ಎಂದು ಹೇಳುವ ಮೂಲಕ ಕಿಚ್ಚ ಸುದೀಪ್‌ಗೆ ಬೆಂಬಲ ಸೂಚಿಸಿದ್ದಾರೆ.
"ನಮ್ಮ ರಾಜ್ಯಗಳು ಭಾಷವಾರು ಪ್ರಾಂತ್ಯಗಳಾದ ಮೇಲೆ ಆ ರಾಜ್ಯಗಳಲ್ಲಿ ಮಾತೃಭಾಷೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಅದೇ ಸಾರ್ವಭೌಮ ಕೂಡ ಹೌದು. ಇದನ್ನು ಎಲ್ಲರು ಮನಗಂಡು ಗೌರವಿಸಬೇಕು. ಸುದೀಪ್ ಅದನ್ನ ಸರಿಯಾಗಿಯೇ ಹೇಳಿದ್ದಾರೆ," ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಬುಧವಾರ ನಟ ಅಜಯ್ ದೇವಗನ್ ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಕಿಚ್ಚು ಸುದೀಪ್ ಕೂಡ ಸರಿಯಾಗಿಯೇ ಉತ್ತರಿಸಿದ್ದರು. ಈ ವಿವಾದ ರಾಷ್ಟ್ರ ಮಟ್ಟದಲ್ಲೂ ಸುದ್ದಿಯಾಗಿ ರಾಜಕೀಯ ಗಣ್ಯರು ಸಿನಿಮಾ ನಟರು ಕೂಡ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.

"ನಟ ಅಜಯ್ ದೇವಗನ್ ಖ್ಯಾತ ನಟ. ಇಲ್ಲಿ ಸುದೀಪ್ ಕೂಡ ಕನ್ನಡದ ಖ್ಯಾತ ನಟ. ಅಜಯ್ ದೇವಗನ್ ಹಿಂದಿ ರಾಷ್ಟ್ರೀಯ ಭಾಷೆ ಅಂದಿದಾರೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ. ದೇಶದ 14 ಭಾಷೆಗಳಲ್ಲಿ ಹಿಂದಿ ಕೂಡ ಒಂದು. ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಭಾಷೆ," ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಇನ್ನು ಹಿಂದಿ ರಾಷ್ಟ್ರೀಯ ಭಾಷೆ ಎಂಬ ವಿಚಾರಕ್ಕೆ ಡಿಕೆ ಶಿವಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದು, "ನಾನು ಯಾರ ಟ್ವೀಟ್‌ಗೂ ರಿಪ್ಲೇ ಮಾಡಕ್ಕೆ ಸಿದ್ದ ಇಲ್ಲ. ನಮ್ಮ ದೇಶದಲ್ಲಿ ಯಾವ ಭಾಷೆ ಬೇಕು ಅಂತ ಸರ್ಕಾರ ತೀರ್ಮಾನ ಮಾಡಿದೆ. ಕನ್ನಡ ಇದೆ, ತೆಲುಗು ಇದೆ, ಎಲ್ಲಾ ಭಾಷೆಗಳು ಇದೆ. ನೋಟಿನ ಮೇಲೆ ಎಲ್ಲಾ ಭಾಷೆಗಳು ಇವೆ. ನಮ್ಮ ನೆಲ, ನಮ್ಮ ಭಾಷೆ, ನಮ್ಮ ಜನ ರಕ್ಷಣೆ ಮಾಡಬೇಕಾದ್ದು ನಮ್ಮ ಕೆಲಸ. ಒಬ್ಬರಿಗೆ ಹಿಂದಿ ಬರುತ್ತೆ ಇಂಗ್ಲಿಷ್ ಬರುತ್ತದೆ. ಆದರೆ ಪಾರ್ಲಿಮೆಂಟ್‌ನಲ್ಲಿ ಕನ್ನಡದಲ್ಲಿ ಭಾಷಣ ಮಾಡುವುದಕ್ಕೆ ಅವಕಾಶ ಮಾಡಿಕೊಡಿ," ಎಂದಿದ್ದಾರೆ.












Click it and Unblock the Notifications