ಬಿಜೆಪಿಯ 10 ಶಾಸಕರು ನಮ್ಮ ಜೊತೆ ಇದ್ದಾರೆ : ಜಮೀರ್
Recommended Video
ಹುಬ್ಬಳ್ಳಿ, ಮೇ 12 : 'ಮೈತ್ರಿ ಸರ್ಕಾರದ 20 ಶಾಸಕರು ನಮ್ಮ ಜೊತೆ ಇರುವುದಾಗಿ ಬಿಜೆಪಿಯವರು ಹೇಳುತ್ತಾರೆ. ನಮ್ಮ ಜೊತೆಯೂ ಬಿಜೆಪಿಯ 10 ಶಾಸಕರು ಸಂಪರ್ಕದಲ್ಲಿದ್ದಾರೆ' ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಭಾನುವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್ ಅಹಮದ್ ಖಾನ್ ಅವರು, 'ಬಿಜೆಪಿಯವರು 20 ಶಾಸಕರ ಹೆಸರು ಬಿಡುಗಡೆ ಮಾಡಿದರೆ, ನಾವು ಸಹ ಬಿಜೆಪಿಯ 10 ಶಾಸಕರ ಹೆಸರು ಹೇಳುತ್ತೇವೆ' ಎಂದು ಸವಾಲು ಹಾಕಿದರು.
'ಬಿಜೆಪಿಯವರು ಸುಮ್ಮನೆ ಬೊಗಳೆ ಬಿಡುತ್ತಾರೆ. ಮೇ 23 ಅಲ್ಲ, ಇನ್ನೂ ಎರಡು ದಿನ ಹೆಚ್ಚುವರಿಯಾಗಿ ತೆಗೆದುಕೊಂಡು 25ಕ್ಕೆ ಸರ್ಕಾರ ರಚನೆ ಮಾಡಲಿ. ಬಿಜೆಪಿ ಸರ್ಕಾರ ರಚನೆ ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ' ಎಂದರು.

'ಮೇ 23ರ ನಂತರ ಬಿಜೆಪಿ ಸರ್ಕಾರ ರಚನೆ ಮಾಡದಿದ್ದರೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯ ನಿವೃತ್ತಿ ಪಡೆಯುತ್ತಾರೆಯೇ?' ಎಂದು ಜಮೀರ್ ಅಹಮದ್ ಖಾನ್ ಪ್ರಶ್ನಿಸಿದರು.
ಕರ್ನಾಟಕದಲ್ಲಿ ಬೇಸ್ ಇಲ್ಲ : 'ಬಿಜೆಪಿಯವರಿಗೆ ಕರ್ನಾಟಕದಲ್ಲಿ ಯಾವುದೇ ಬೇಸ್ ಇಲ್ಲ. 2008ರಲ್ಲಿ ಎಚ್.ಡಿ.ಕುಮಾರಸ್ವಾಮಿ ತಮ್ಮ ವಾಗ್ದಾನದಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿದ್ದರೆ ಈ ವೇಳೆಗೆ ಆ ಪಕ್ಷವೇ ನಿರ್ನಾಮ ಆಗಿರುತ್ತಿತ್ತು. ಅಂದು ಕುಮಾರಸ್ವಾಮಿ ಮಾಡಿದ ತಪ್ಪಿನಿಂದ ಬಿಜೆಪಿ ಪ್ರವರ್ಧಮಾನಕ್ಕೆ ಬಂದಿದೆ' ಎಂದು ಹೇಳಿದರು.
ಸಿದ್ದರಾಮಯ್ಯ ಮತ್ತೆ ಸಿಎಂ : 'ಐದು ವರ್ಷಗಳ ಕಾಲ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇರಲಿದೆ. ಅಲ್ಲಿಯ ತನಕ ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. 2022ರಲ್ಲಿ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಲಿದ್ದಾರೆ' ಎಂದು ಜಮೀರ್ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications