ವಾಲ್ಮೀಕಿ ಹಗರಣದಲ್ಲಿ ಸರ್ಕಾರ ದೊಡ್ಡ ಎಡವಟ್ಟು ಮಾಡಿದೆ: ಶಾಸಕ ಮಹೇಶ ಟೆಂಗಿನಕಾಯಿ
ಹುಬ್ಬಳ್ಳಿ, ಸೆಪ್ಟೆಂಬರ್ 12: ವಾಲ್ಮೀಕಿ ಹಗರಣದಲ್ಲಿ ಸರ್ಕಾರ ದೊಡ್ಡ ಯಡವಟ್ಟು ಮಾಡಿದೆ. ಸಿಎಂ ಸಿದ್ದರಾಮಯ್ಯನವರೇ ನಾಗೇಂದ್ರ ಅವರ ಹಾಗೂ ಇನ್ನಿತರ ಶಾಸಕರನ್ನು ಮರೆಮಾಚುವ ಕಾರ್ಯವನ್ನು ಮಾಡಿದ್ದಾರೆ. ಅಲ್ಲದೇ ಪೊಲೀಸ್ ಇಲಾಖೆಯು ಕೂಡ ಸರ್ಕಾರದ ಅಡಿಯಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುವುದೇ ಅರ್ಥವಾಗದಂತ ಸ್ಥಿತಿಯನ್ನು ತಲುಪಿದೆ ಎಂದು ರಾಜ್ಯ ಸರ್ಕಾರದ ನಡೆಯ ವಿರುದ್ಧ ಶಾಸಕ ಮಹೇಶ ಟೆಂಗಿನಕಾಯಿ ತೀವ್ರ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ಹೇಳಿದ್ದರು ಕ್ಲೀನ್ ಚೀಟ್ ಆಗುತ್ತೇ ಅಂತ. ಆದರೆ ಈಗ ವಾಲ್ಮೀಕಿ ಹಗರಣದ ಚಾರ್ಜ್ ಶೀಟ್‌ನಲ್ಲಿ ಮಾಜಿ ಸಚಿವ ನಾಗೇಂದ್ರ ಅವರು ಹಾಗೂ ನಿಗಮದ ಅಧ್ಯಕ್ಷರು ಸಮಬಾಳು ಸಮಪಾಲು ತೆಗೆದುಕೊಂಡಿದ್ದಾರೆ ಎಂಬುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಾತು ಮುಂದುವರಿಸಿದ ಶಾಸಕರು, ಮುಡಾ ಹಗರಣದಲ್ಲಿ ವಾಲ್ಮೀಕಿ ಹಗರಣದಲ್ಲಿ ಸರ್ಕಾರ ಸಂಪೂರ್ಣ ಭಾಗಿಯಾಗಿದೆ. ಈ ಬಗ್ಗೆ ತನಿಖೆಯಿಂದ ಸತ್ಯಾಸತ್ಯತೆ ಬಯಲಾಗುತ್ತದೆ. ಸಿಎಂ ಸಿದ್ದರಾಮಯ್ಯನವರು, ನಾನು ಯಾವುದೇ ಅವ್ಯವಹಾರ ಮಾಡಿಲ್ಲ. ಕ್ಲೀನ್ ಹ್ಯಾಂಡ್ ಎಂದು ಹೇಳಿಕೊಂಡವರ ಬಂಡವಾಳ ಕೂಡ ಬಯಲಾಗುತ್ತದೆ ಎಂದರು.
ಬಿಜೆಪಿ ಹಗರಣದ ತನಿಖೆಗೆ ಐದು ಜನರ ತಂಡ ರಚನೆಯ ಬಗ್ಗೆ ಮಾತನಾಡಿದ ಅವರು, ಐದು ಜನರಲ್ಲ ಐವತ್ತು ಜನರನ್ನು ಮಾಡಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಒಂದು ವರ್ಷ ಏನು ಮಾಡ್ತಿದ್ದೀರಿ..? ನಿಮ್ಮ ಪಾದದ ಬುಡಕ್ಕೆ ನೀರು ಬಂದಾಗ ಮತ್ತೊಬ್ಬರ ಪಾದದ ಬುಡಕ್ಕೆ ನೀರು ಹಾಕುವ ಕಾರ್ಯಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೊಮ್ಮೆ ದೇಶದ್ರೋಹಿ ಘಟನೆಗಳು ನಡೆಯುತ್ತವೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸದೃಢ ನಾಯಕತ್ವ ಇರುವ ಕಾರಣಕ್ಕೆ ಈಗ ದೇಶ ಭದ್ರವಾಗಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರವನ್ನು ಹೊಗಳಿದರು.
ಹಿಂದುಳಿದ, ದಲಿತರ ಮೀಸಲಾತಿ ರದ್ದು ಮಾಡುವ ಚಿಂತನೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ರಾಹುಲ್ ಗಾಂಧಿ ಅವರು ಮನದಾಳದ ಮಾತನ್ನು ಅಮೇರಿಕಾದಲ್ಲಿ ಹೋಗಿ ಹೇಳಿದ್ದಾರೆ. ಮೀಸಲಾತಿ ವಿಷಯಕ್ಕೆ ಕೈ ಹಾಕಿದರೆ ತಾವು ಅಷ್ಟೇ ಅಲ್ಲಾ ಇಡೀ ಕಾಂಗ್ರೆಸ್ ಸುಟ್ಟು ಹೋಗುತ್ತದೆ. ಇವತ್ತು ಸಂವಿಧಾನದ ಬದ್ಧವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೀಸಲಾತಿ ಕೊಡುತ್ತಿದ್ದಾರೆ. ಇದೊಂದು ದಲಿತ ವಿರೋಧ ನೀತಿ ಆಗಿದೆ. ಇಂದಿನವರೆಗೆ ಕೂಡ ಕಾಂಗ್ರೆಸ್‌ನ ದಲಿತ ನಾಯಕರು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಖಂಡನೆ ಮಾಡುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಆಗಲಿ ಯಾವುದೇ ದಲಿತ ನಾಯಕರು ಈ ಬಗ್ಗೆ ಮಾತನಾಡುತ್ತಿಲ್ಲ ಎಂದರು.












Click it and Unblock the Notifications