Hubballi: ಉಪಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ: ಗೋವಿಂದ ಕಾರಜೋಳ ಹೊಸ ಬಾಂಬ್
ಹುಬ್ಬಳ್ಳಿ, ಅಕ್ಟೋಬರ್ 25: ಕರ್ನಾಟಕದಲ್ಲಿ ಉಪ ಚುನಾವಣೆ ಹಾಗೂ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಕಾವು ಏರತೊಡಗಿದೆ. ಎರಡು ಕಡೆಗಳಲ್ಲಿ ಪ್ರಬಲ ಪೈಪೋಟಿ ನೀಡಲು ಬಿಜೆಪಿ ಹಾಗೂ ಕಾಂಗ್ರೆಸ್ ಬಣಗಳು ಸಜ್ಜಾಗಿರುವ ಹೊತ್ತಿನಲ್ಲೇ ಮಾಜಿ ಸಚಿವ, ಚಿತ್ರದುರ್ಗ ಶಾಸಕ ಗೋವಿಂದ ಕಾರಜೋಳ ಅವರು ಆಡಳಿತ ಸರ್ಕಾರದ ವಿರುದ್ಧ ವಾಗ್ದಾಲಿ ನಡೆಸಿದ್ದಾರೆ. ಸರ್ಕಾರ ಪತನದ ಬಗ್ಗೆ ಭವಿಷ್ಯ ನುಡಿಯುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ತರಾಟೆಗೆ ತೆಗೆದುಕೊಂಡ ಗೋವಿಂದ ಕಾರಜೋಳ ಅವರು, ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ. ರಾಜ್ಯದ ಉಪ ಚುನಾವಣೆ ನಂತರ ಮಹಾರಾಷ್ಟ್ರ ಚುನಾವಣೆ ನಡೆಯಲಿದೆ. ಈ ಚುನಾವಣೆ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿಗೆ ಹಣವಿಲ್ಲದೆ ಕಾಂಗ್ರೆಸ್ ಶಾಸಕರು ಅಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇನ್ನೂ ಮುಳುಗುವ ಹಡಗಿನಲ್ಲಿ ಕೂಡಲು ಬಯಸುತ್ತಿರುವ ಮಾಜಿ ಸಚಿವ ಎಸ್.ಟಿ.ಸೋಮಶೇಖರ ಅವರು ಅತಂತ್ರವಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೂ ಇಲ್ಲ. ಬಿಜೆಪಿಯಲ್ಲಿ ಇದ್ದು ಇಲ್ಲದಂತಾಗಿದ್ದಾರೆ. ಯಾರಾದರೂ ಮುಳುಗುವ ಹಡಗಿನಲ್ಲಿ ಕೂಡಲು ಬಯಸುತ್ತಾರೆಯೇ ಎಂದು ಕುಟುಕಿದ್ದಾರೆ.
ಎಸ್‌ಟಿ ಸೋಮಶೇಖರ ಅತಂತ್ರರಾಗಿರುವ ಕಾರಣಕ್ಕಾಗಿಯೇ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಇಂತಹವರ ಹೇಳಿಕೆಗಳಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತಹ ಮುಂದಾಳತ್ವದಲ್ಲಿ ದೇಶ ಮುನ್ನಡೆಯುತ್ತಿದೆ. ದೇಶದಲ್ಲಿ ಸುಮಾರು 20 ರಾಜ್ಯಗಳಲ್ಲಿ ಬಿಜೆಪಿ ಪಕ್ಷವಿದೆ ಎಂದು. ಈ ಉಪಚುನಾವಣೆಯಲ್ಲೂ ಬಿಜೆಪಿಗೆ ಬಹುಮತ ಬರಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಶಿಗ್ಗಾವಿ ಟಿಕೆಟ್ ಬಗ್ಗೆ ಮುರುಗೇಶ ನಿರಾಣಿ ಮಾತು
ಇನ್ನೂ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಮಾಜಿ ಸಚಿವ ಮುರಗೇಶ್ ನಿರಾಣಿಯವರು ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ ಕುರಿತು ಮಾತನಾಡಿದ್ದಾರೆ. ಶಿಗ್ಗಾವಿ ಕ್ಷೇತ್ರದಿಂದ ನನ್ನ ಹೆಸರು ಕೇಳಿ ಬಂದಿತ್ತು. ಆದರೆ ನಾನು ಚುನಾವಣೆ ಸ್ಪರ್ಧಿಸಲ್ಲ ಎಂದು ಅವರು ಕೆಲವು ಊಹಾಪೋಹಗಳಿಗೆ ತಡವಾಗಿ ತೆರೆ ಎಳೆದಿದ್ದಾರೆ.
ಇಂದು ನಾಮಪತ್ರ ಸಲ್ಲಿಸಲು ಶಿಗ್ಗಾಂವಿಗೆ ತೆರಳುತ್ತಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಬಗ್ಗೆ ಕಾಂಗ್ರೆಸ್ ಶಾಸಕರೇ ಭ್ರಮನಿರಸರಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಆಗದೇ ಇರುವ ಹಿನ್ನೆಲೆ ಅವರ ಪಕ್ಷದವರೇ ಅಸಮಾಧಾನದಲ್ಲಿದ್ದಾರೆಂದು ಎಂದು ಅವರು ಟಾಂಗ್ ನೀಡಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ: ಭರತ್ ಬೊಮ್ಮಾಯಿ
ಶಿಗ್ಗಾವಿ-ಸವಣೂರ ವಿಧಾನಸಭಾ ಮತ ಕ್ಷೇತ್ರದ ಅಭಿವೃದ್ಧಿ, ಶಿಕ್ಷಣ, ಆರೋಗ್ಯಕ್ಕೆ ಒತ್ತುಕೊಡುವೆ. ನಾರಿಶಕ್ತಿ, ಯುವಕರ ಪರವಾಗಿ ಹಾಗೂ ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ಮಾಡುವೆ. ಕ್ಷೇತ್ರದ ಹಿಂದಿನ ಶಾಸಕರಾದ ನಮ್ಮ ತಂದೆಯವರು ಮಾಡಿದ ಅಭಿವೃದ್ಧಿ ಕೆಲಸಗಳು ಮತ್ತು ಅವರು ಕಂಡ ಕನಸುಗಳನ್ನು ನನಸು ಮಾಡುವೆ. ಜೊತೆಗೆ ನನ್ನದೆಯಾದ ಆಲೋಚನೆಗಳನ್ನು ಹೊಂದಿರುವೆ ಎಂದು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಶುಕ್ರವಾರ ಸುದ್ದಿಗಾರರ ಜತೆ ಶಿಗ್ಗಾವಿಯ ಬಿಜೆಪಿಅಭ್ಯರ್ಥಿ ಭರತ್ ಬೊಮ್ಮಾಯಿ ಹೇಳಿದರು.












Click it and Unblock the Notifications