ಪ್ರಧಾನಿ ನರೇಂದ್ರ ಮೋದಿ 'ಪ್ರಧಾನ ಸುಳ್ಳುಗಾರರು' ಆಗಬಾರದು: ಬಿಕೆ ಹರಿಪ್ರಸಾದ್
ಹುಬ್ಬಳ್ಳಿ, ಮೇ 05: ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಪತ್ರಿಕೆಗಳಲ್ಲಿ ಸಂವಿಧಾನ ಕುರಿತು ನೀಡಿದ ಜಾಹೀರಾತು ಬರೀ ಸುಳ್ಳು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಗಂಭೀರ ಸ್ವರೂಪದ ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುಸ್ಲಿಮ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾತಿ ನೀಡುವುದಿಲ್ಲ ಎಂದು ಇದೇ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಪ್ರಧಾನಮಂತ್ರಿಗಳು ಸರಿಯಾಗಿ ಸಂವಿಧಾನವನ್ನು ಓದಿಲ್ಲ ಎಂದನಿಸುತ್ತದೆ ಎಂದು ಅವರು ಜರಿದರು.

ಪ್ರಧಾನಿ ಮೋದಿ 'ಪ್ರಧಾನ ಸುಳ್ಳುಗಾರರು' ಆಗಬೇಡಿ
ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳು ಅವರು 'ಪ್ರಧಾನ ಸುಳ್ಳುಗಾರರು' ಆಗಬಾರದು. ಸುಳ್ಳಿನ ಸರದಾರರು ಆಗದೇ ದೇಶದ ಜನರಿಗೆ ಸತ್ಯ ಒದಗಿಸುವ ಕೆಲಸ ಮಾಡಬೇಕು. ಗುಜರಾತ್ ರಾಜ್ಯದಲ್ಲಿ 140 ಓಬಿಸಿ ಸಮುದಾಯಗಳಿವೆ. ಗುಜರಾತಿನಲ್ಲಿ 22 ಸಮುದಾಯದ ವಿವಿಧ ಪಂಗಡಗಳಿವೆ ಆ 22 ಮೀಸಲಾತಿಯಲ್ಲಿ ಅವಕಾಶ ನೀಡಲಾಗಿದೆ ಎಂದರು.
ಇನ್ನು ನಾವು ಸಾಮಾಜಿಕ ನ್ಯಾಯ ಕೊಡಲು ಸಿದ್ಧ ನ್ಯಾಯ ಪತ್ರ ಘೋಷಣೆ ಮಾಡಿದ್ದೇವೆ. ಇದರಲ್ಲಿ 25 ಅಂಶಗಳಿವೆ.
ನಾರಿ ನ್ಯಾಯ, ಕಿಸಾನ್ ಯುವ, ಶ್ರಮಿಕ ನ್ಯಾಯ ಪತ್ರ ಇದೆ. ನಾರಿನ್ಯಾಯ ಪತ್ರದಲ್ಲಿ ಮಹಿಳೆಯರಿಗೆ ಒಂದು ಲಕ್ಷ ರೂಪಾಯಿ ಕೊಡುವುದು.
ಸೌಲಭ್ಯ ನೀಡಲು ಕಾಂಗ್ರೆಸ್ ಬದ್ಧ
ಯುವ, ಶ್ರಮಿಕ, ಕಿಸಾನ್ ನ್ಯಾಯ ಪತ್ರದಲ್ಲಿ ಅನೇಕ ಸೌಲಭ್ಯಗಳನ್ನ ನೀಡಲಾಗಿದೆ ಇದಕ್ಕೆ ನಾವು ಬದ್ಧ ಎಂದರು. ಇನ್ನು ಇಂದಿನ ಜಾಹೀರಾತುಗಳಲ್ಲಿ ಸಂವಿಧಾನ ಧರ್ಮ ಗ್ರಂಥ ಎಂದು ಘೋಷಣೆ ಮಾಡಲಾಗಿದ್ದು. ಮೀಸಲಾತಿ ವಿಚಾರವಾಗಿ ಅನೇಕ ಘೋಷಣೆ ಮಾಡಿದ್ದಾರೆ. ಇದು ಬರಿ ಸುಳ್ಳು ಘೋಷಣೆ ಎಂದು ಅವರು ಆಕ್ರೋಶ ಹೊರ ಹಾಕಿದರು.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತು ಯಾವುದೇ ಟೀಕೆ ಟಿಪ್ಪಣಿ ಮಾಡಲ್ಲ. ಎಸ್‌ಐಟಿ ತನಿಖೆ ನಡೆಯುತ್ತಿದೆ, ವರದಿ ಬಂದ ನಂತರ ಮಾತಾಡಿದರೆ ಒಳಿತು. ಇಷ್ಟು ವಿಡಿಯೋಗಳಿರುವ ಪೆನ್‌ಡ್ರೈವ್ ಹೊರಗೆ ಬಂದಿರುವುದು ಕರ್ನಾಟಕದ ದುರುಂತ ಎಂದು ತಿಳಿಸಿದರು.

ಕಾಂಗ್ರೆಸ್ ಧರ್ಮಾಧಾರಿತ ಮೀಸಲಾತಿ ಬಗ್ಗೆ ಹೇಳಿಲ್ಲ
ನಮ್ಮ ಪ್ರಣಾಳಿಕೆಯಲ್ಲಿ ಧರ್ಮಾಧಾರಿತ ಮೀಸಲಾತಿ ಕೊಡುವುದಾಗಿ ಹೇಳಿಲ್ಲ. ಆ ಬಗ್ಗೆ ನಾನು ಹೇಳಿದ್ದರೆ, ನಾನು ಇವರ ಗುಲಾಮನಾಗುತ್ತೇನೆ. ಅನಕ್ಷರಸ್ಥರ ಕೈಯಲ್ಲಿ ಪ್ರಣಾಳಿಕೆ ಹೋದರೆ ಇಂತಹ ಚರ್ಚೆ ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ಧರ್ಮ, ಜಾತಿ ಆಧಾರಿತ ರಾಜಕೀಯ ಮಾಡಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಬಿಜೆಪಿಯವರದ್ದು ಸುಳ್ಳಿನ ಫ್ಯಾಕ್ಟರಿ, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications