ರಾಜಕೀಯ 'ಜಂಗಿಕುಸ್ತಿ'ಗೆ ಕಾರಣವಾದ 'ಹಂದಿ ಕುಸ್ತಿ' ಪದ ಬಳಕೆ: ಬಿಜೆಪಿ ಸಂಸದರು ಗರಂ
ಬೆಂಗಳೂರು, ಸೆಪ್ಟಂಬರ್ 30: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ ಅವರು 'ಹಂದಿ' ಪದ ಬಳಕೆ ಮಾಡಿರುವುದನ್ನು ಬಿಜೆಪಿ ನಾಯಕರು, ಹಾಲಿ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳು ಆದ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ಅವರು ತೀಕ್ಷ್ಣವಾಗಿ ಖಂಡಿಸಿದ್ದಾರೆ. ಮುಡಾ ಹಗರಣ ಮರೆಮಾಚಲು ಹೀಗೆಲ್ಲ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಲೋಕಾಯುಕ್ತ ಎಡಿಜಿಪಿಯನ್ನು ಎಚ್‌ಡಿ ಕುಮಾರಸ್ವಾಮಿ ಅವರು ಭ್ರಷ್ಟ ಎಂದು ಕರೆದಿದ್ದರು. ಅಲ್ಲಿಂದ ಅಧಿಕಾರಿ ಮತ್ತು ಕೇಂದ್ರ ಸಚಿವರ ಮಧ್ಯೆ ವಾಕ್ಸಮರ ನಡೆದಿತ್ತು. ಇದೀಗ ಎಡಿಜಿಪಿ ಚಂದ್ರಶೇಖರ್ ಅವರು ಸಹೋದ್ಯೋಗಿಗಳಿಗೆ ಬರೆದ ಪತ್ರದಲ್ಲಿ, ನೀವು ಕುಸ್ತಿಯಾಡಬೇಡಿ. ಹಂದಿಗೆ ಕುಸ್ತಿ ಇಷ್ಟ. ನಾವು ಅದರೊಂದಿಗೆ ಹಾಗೇ ಮಾಡಿದರೆ ಕೊಳಕಾಗುತ್ತೇವೆ ಎಂದು ತಿರುಗೇಟು ನೀಡಿದ್ದರು.

'ರಾಜಕೀಯ ಜಂಗಿಕುಸ್ತಿ'ಗೆ ಕಾರಣವಾದ 'ಹಂದಿ ಕುಸ್ತಿ' ಪದ ಬಳಕೆ
ಅಧಿಕಾರಿಯ ಈ 'ಹಂದಿ ಕುಸ್ತಿ' ಹೇಳಿಕೆ 'ರಾಜಕೀಯ ಜಂಗಿಕುಸ್ತಿ'ಗೆ ಕಾರಣವಾಗಿದೆ. ಈ ಕುರಿತು ಖಾರತವಾಗಿ ಪ್ರತಿಕ್ರಿಯಿಸಿರುವ ಬಸವರಾಜ ಬೊಮ್ಮಾಯಿ ಅವರು, ವಿರೋಧ ಪಕ್ಷ ಹಣಿಯಲು ಹಿರಿಯ ಅಧಿಕಾರಿಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂದು ಇವತ್ತು ರಾಜಕಾರಣ ಅತ್ಯಂತ ಕೆಳಮಟ್ಟಕ್ಕೆ ಹೋಗಿದೆ. ವಿರೋಧ ಪಕ್ಷದ ಹಣೆಯಲು ಹಲವಾರು ಪ್ರಕರಣಗಳನ್ನು ಹಾಕಿದ್ದಾರೆ ಎಂದು ಅವರು ಆರೋಪಿಸಿದರು.
ಇನ್ನು ಸ್ವಜನಪಕ್ಷಪಾತದ ತನಿಖೆ ಸಹ ನಡೆಯುತ್ತಿದೆ. ಹಿರಿಯ ರಾಜಕೀಯ ಅಧಿಕಾರಿಗಳು ಸಹ ಬಳಕೆ ಮಾಡಿಕೊಳ್ಳುವ ಮಟ್ಟಕ್ಕೆ ಇಂದಿನ ರಾಜಕೀಯ ಇಳಿದಿದೆ. ರಾಜಕೀಯದಲ್ಲಿ ರಕ್ಷಣೆ ಇರುವ ಕಾರಣದಿಂದಲೇ ಅಧಿಕಾರಿಗಳಿಂದ ಈ ರೀತಿ ಮಾತು ಬರುತ್ತಿವೆ. ಇಂತಹ ಕೆಳಮಟ್ಟದ ರಾಜಕೀಯ ಹಿಂದೇನೂ ಆಗಿರಲಿಲ್ಲ. ತಮ್ಮ ಮೇಲೆ ಕಪ್ಪು ಚುಕ್ಕೆ ಬಂದರೆ, ಎಲ್ಲರಿಗೂ ಮಸಿ ಬಳಿಯುವ ಕೆಲಸವಾಗುತ್ತಿದೆ ಎಂದರು.

ಮುಡಾ ಪ್ರಕರಣ ಇಡಿ ಮುಂದೆ
ಅಂತಿಮವಾಗಿ ಕಾನೂನು ತನ್ನ ಕೆಲಸ ಮಾಡುತ್ತದೆ. ಇನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶಾಸಕರ ಖರೀದಿಗೆ 1000 ಕೋಟಿ ರೂಪಾಯಿ ತೆಗೆದು ಇಟ್ಟಿದ್ದಾರೆ ಎಂಬ ಮಾತಿಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ನಾನು ಏನು ಹೇಳುವುದಿಲ್ಲ. ಮುಡಾ ಹಗರಣ ಜಾರಿ ನಿರ್ದೇಶನಾಲಯದ ವರೆಗೆ ಹೋಗಿದೆ. ಕಾದು ನೋಡೋಣ ಎಂದರು.
ರಾಜ್ಯ ಸರ್ಕಾರವು ಕೇಂದ್ರ ಸಚಿವರ ವಿರುದ್ಧ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ ಅವರಿಂದ 'ಹಂದಿ' ಪದ ಬಳಕೆ ಮಾಡಿ ಪತ್ರ ಬರೆಸುವ ಮೂಲಕ ಮುಡಾ ಹಗರಣ ಮರೆಮಾಚುವ ಕೆಲಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಆರೋಪಿಸಿದರು.
ದ್ವೇಷ ರಾಜಕಾರಣ ಆರಂಭ
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಎಚ್‌ಡಿ ಕುಮಾರಸ್ವಾಮಿ ಕೇಂದ್ರ ಸಚಿವರು ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಂಪುಟ ದರ್ಜೆ ಖಾತೆ ಸಚಿವರು. ಮುಡಾ ಹಗರಣ ಸಂಬಂಧ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಸದ್ಯ ರಾಜ್ಯದಲ್ಲಿ ದ್ವೇಷ ರಾಜಕಾರಣ ಆರಂಭವಾಗಿದೆ. ಮುಡಾ ಹಗರಣದಲ್ಲಿ ಸಿಎಂ ಹಾಗೂ ಅವರ ಪತ್ನಿ ಮೇಲೆ ಎಫ್ ಐ ಆರ್ ಆಗಿದ್ದು, ತನಿಖೆ ನಡೆಯುತ್ತಿದೆ ಎಂದರು.
ಸದ್ಯ ಎಲ್ಲೆಡೆ ಸಿಎಂ ಸಿದ್ದರಾಮಯ್ಯ, ಮುಡಾ ಪ್ರಕರಣ ತನಿಖೆ ಮತ್ತು ರಾಜೀನಾಮೆ ವಿಚಾರ ಪ್ರಸ್ತಾಪಿಸಲಾಗುತ್ತಿದೆ. ಇದನ್ನು ಜನರ ಮೈಂಡ್ ಡೈವರ್ಟ್ ಮಾಡಲು ಅಧಿಕಾರಿಗಳಿಂದ ಹೀಗೆ ಮಾತನಾಡಿಸುವ ವ್ಯವಸ್ಥೆ ಆರಂಭವಾಗಿದೆ. ಅಧಿಕಾರಿಯಾದವರು ಹೀಗೆ ಕೆಟ್ಟ ಪದ ಬಳಕೆ ಮಾಡುವುದು ಸರಿಯಲ್ಲ. ಅಧಿಕಾರಗಳ ಕರ್ತವ್ಯ ಏನು ಈ ರೀತಿಯಾಗಿ ವರ್ತನೆ ಮಾಡುವುದು ಪೊಲೀಸ್ ಅಧಿಕಾರಿಗಳಿಗೆ ಶೋಭೆ ತರುವಂತದ್ದಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications