ಗೊಂದಲ ಸೃಷ್ಟಿಸಿದ ಜ್ಯೋತಿಷಿ: ವ್ರತ ಯಾವತ್ತು ಮಾಡೋದ್ರಿ?

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, 12- ವಾಣಿಜ್ಯ ನಗರಿ ಎಂದೇ ಪ್ರಸಿದ್ಧಿ ಹೊಂದಿರುವ ನಗರದಲ್ಲಿ ಶುಕ್ರವಾರ ಮುತ್ತೈದೆಯರು ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಕನ್ನಡ ಸುದ್ದಿ ವಾಹಿನಿಯಲ್ಲಿ ನಾನು ಹೇಳೋದೇ ಆಗೋದು ಎನ್ನುವ ನ್ಯೂಮರಾಲಜಿ ಜ್ಯೋತಿಷಿ, ಈ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ ಮಾಡಬೇಡಿ, ಮುಂದಿನ ವಾರ ಮಾಡಿ ಎಂದು ಕೆಲ ದಿನಗಳಿಂದ ಹೇಳಿದ್ದರಿಂದ ಕೆಲವರು ಗೊಂದಲಕ್ಕೆ ಈಡಾಗಿದ್ದರು.

Astrologer confused people about celebration date, Hubballi

ಇವರ ಮಾತನ್ನು ನಂಬಿಕೊಂಡು ಹಲವಾರು ಹೆಂಗಸರು ಹಬ್ಬ ಮಾಡಲು ಹಿಂದೆ ಮುಂದೆ ನೋಡಿದರು. ಆ ಜ್ಯೋತಿಷಿ, ಈ ಶುಕ್ರವಾರ ಹಬ್ಬ ಮಾಡಿದರೆ ಮನೆ ಹಾಳಾಗಿ ಹೋಗುತ್ತದೆ ಎಂದು ಹೇಳಿದ್ದರು. ಇವರ ಮಾತನ್ನು ವೇದವಾಕ್ಯವೆಂದೇ ಅಂದುಕೊಂಡು ಕೆಲ ಮಹಿಳೆಯರು ಹಬ್ಬ ಮಾಡುವುದು ಯಾವಾಗ ಎಂದು ಗೊಂದಲದಲ್ಲಿ ಬಿದ್ದಿದ್ದರು. ಕೆಲವರು ಹಬ್ಬ ಮಾಡದೇ ಮುಂದಿನ ವಾರ ಮಾಡಲು ಸಿದ್ಧತೆ ಕೂಡ ಮಾಡಿಕೊಂಡಿದ್ದಾರೆ.

ಆದರೆ, ವ್ರತವನ್ನು ಮುಹೂರ್ತ ನೋಡಿ ಮಾಡಿಕೊಳ್ಳಬೇಕು ಎಂದು ಜ್ಯೋತಿಷಿ ಹೇಳಿದ್ದು ಅಜ್ಞಾನದ ಪರಮಾವಧಿ ಎಂದು ಜ್ಯೋತಿಷಿ ನಾಗನೂರಮಠ ಎಸ್.ಎಸ್. ಹೇಳಿದ್ದಾರೆ.

ಆದರೆ, ವಾಡಿಕೆ ಪ್ರಕಾರ ಪ್ರತಿ ಶ್ರಾವಣದಲ್ಲಿ ಬರುವ ಹುಣ್ಣಿಮೆಯ ಮುಂಚಿನ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತವನ್ನು ಆಚರಿಸಿಕೊಂಡು ಬರಲಾಗುತ್ತದೆ. ಸುಮಾರು ಜನರು ಗುರುವಾರವೇ ಹಬ್ಬಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದರು. ಕೆಲವರು ಹಬ್ಬದ ಖರೀದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಹೀಗಾಗಿ ಗುರುವಾರ ಮತ್ತು ಶುಕ್ರವಾರ ಮಾರುಕಟ್ಟೆಯು ಜನರಿಂದ ಗಿಜಿಗುಡುತ್ತಿತ್ತು.

Astrologer confused people about celebration date, Hubballi

ವರಮಹಾಲಕ್ಷ್ಮೀಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ, ಸಿಹಿ ತಿನಿಸುಗಳನ್ನು ಮಾಡಿ ನಂತರ ವ್ರತದ ಪುಸ್ತಕ ಓದಲಾಗುತ್ತದೆ. ಈ ಸಂಪ್ರದಾಯ ಮನೆಯಲ್ಲಿ ಮಾಡಿದರೆ, ಲಕ್ಷ್ಮೀ ದೇವಸ್ಥಾನಗಳಲ್ಲಿ ದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಶೃಂಗರಿಸಲಾಗುತ್ತದೆ. ಮುತ್ತೈದೆಯರು ದೇವಿಯ ದೇವಸ್ಥಾನಕ್ಕೆ ಬಂದು, ಉಡಿ ತುಂಬುವ ಕಾರ್ಯ ಮಾಡುತ್ತಾರೆ. ಹೀಗಾಗಿ ನಗರದ ಹಲವಾರು ದೇವಿ ದೇವಸ್ಥಾನಗಳಲ್ಲಿ ಮುತ್ತೈದೆಯರು ನಸುಕಿನಿಂದಲೇ ಉಡಿ ತುಂಬಿದರು.

ಬೆಲೆ ಏರಿಕೆ ಮಧ್ಯೆಯೂ ಹಬ್ಬದ ಸಂಭ್ರಮಕ್ಕೇನೂ ಕೊರತೆ ಇರಲಿಲ್ಲ. ತುಂಬಿದ ಕೊಡಕ್ಕೆ ಕಳಶ ಪ್ರತಿಷ್ಠಾಪಿಸಿ, ಕೆಲವರು ಮಣ್ಣಿನ, ಬೆಳ್ಳಿಯ ಮತ್ತು ಬಂಗಾರದ ದೇವಿಯ ಮುಖವಾಡಗಳನ್ನು ಜೋಡಿಸಿ ಪೂಜಿಸಿದರು.

ಲಕ್ಷ್ಮಿಗೆ ಇಷ್ಟವಾದ ಕೆಂಪು ಹೂಗಳು ಮತ್ತು ಅವುಗಳ ಮಾಲೆಯಿಂದ ಪೂಜೆ ಸಲ್ಲಿಸಿದರು. ಬಾಳೆಯ ತೋರಣಗಳಿಂದ ಅಲಂಕರಿಸಿ ಐವರು ಮುತ್ತೈದೆಯರಿಗೆ ಉಡಿ ತುಂಬಿದರು..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A TV Astrologer suggestion confused some people about Varamahalakshmi pooja in Hubballi. But majority of women celebrate festival and market places jampacked.
Please Wait while comments are loading...