ಧಾರವಾಡದಲ್ಲಿ ಅಭಿಮಾನಿ ನೀಡಿದ ಪಾದರಕ್ಷೆಯನ್ನು ತಲೆ ಮೇಲಿಟ್ಟುಕೊಂಡು ಅಭಿಮಾನ ಮೆರೆದ ಅರವಿಂದ ಬೆಲ್ಲದ್
ಧಾರವಾಡ, ಮೇ, 08: ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ್ ಅವರಿಗೆ ಸಮಗಾರ ಸಮಾಜದ ಮುಖಂಡರೊಬ್ಬರು ಬೆಲ್ಲದ ಮೇಲಿನ ಅಭಿಮಾನಕ್ಕಾಗಿ ಪಾದರಕ್ಷೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಪಾದರಕ್ಷೆಗಳನ್ನು ಬೆಲ್ಲದ್ ಅವರು ತಮ್ಮ ತಲೆಯ ಮೇಲೆ ಇಕೊಂಡು ಅಭಿಮಾನಿಗೆ ವಿಶೇಷವಾದ ಧನ್ಯವಾದ ಹೇಳಿದ್ದಾರೆ.
12ನೇ ಶತಮಾನದಲ್ಲಿ ಸಮಗಾರ ಹರಳಯ್ಯ ಹಾಗೂ ಅವರ ಪತ್ನಿ ಕಲ್ಯಾಣಮ್ಮ ಅವರು ತಮ್ಮ ತೊಡೆಯ ಚರ್ಮ ತೆಗೆದು ಚಪ್ಪಲಿ ಮಾಡಿ ಬಸವಣ್ಣನವರಿಗೆ ನೀಡಿದ್ದರು. ಆ ಬಸವಣ್ಣನವರನ್ನು ನಾವು ನೋಡಿಲ್ಲ. ನೀವು ನಮ್ಮ ಸಮಾಜದ ಮೇಲೆ ಇಟ್ಟ ಅತೀವ ಕಾಳಜಿಗಾಗಿ ನಮ್ಮ ಈ ಅಳಿಲು ಸೇವೆ ಎಂದು ಸಮಗಾರ ಸಮಾಜದವರು ಹೇಳಿದ್ದಾರೆ.

12ನೇ ಶತಮಾನದಲ್ಲಿ ಹರಳಯ್ಯನವರು ಮಾಡಿಕೊಟ್ಟ ಚಪ್ಪಲಿಯನ್ನು ಬಸವಣ್ಣನವರು ತಮ್ಮ ತಲೆಯ ಮೇಲೆ ಇಟ್ಟುಕೊಂಡಿದ್ದರು ಎನ್ನುತ್ತಲೇ ಬೆಲ್ಲದ್ ಕೂಡ ಆ ಚಪ್ಪಲಿಯನ್ನು ತಮ್ಮ ತಲೆಯ ಮೇಲಿಟ್ಟುಕೊಂಡಿದ್ದಾರೆ. ಈ ಮೂಲಕ ಸಮಗಾರ ಸಮಾಜದ ಮುಖಂಡರಿಗೆ ವಿಶೇಷವಾದ ಕೃತಜ್ಞತೆ ಸಲ್ಲಿಸಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬಿಜೆಪಿ ವಿರುದ್ಧ ಶೆಟ್ಟರ್ ಗುಡುಗು
ಇನ್ನು ಟಿಕೆಟ್ ಕೈ ತಪ್ಪಿದ ಹಿನ್ನಲೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದಾರೆ. ಇತ್ತ ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟು ಹೋಗಿದಕ್ಕೆ ಪಾಠ ಕಲಿಸಬೇಕು ಎಂದು ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದು, ಹಲವು ತಂತ್ರಗಾರಿಕೆಯ ಜೊತೆಗೆ ಯಡಿಯೂರಪ್ಪ ಅವರಿಗೆ ಈ ಜವಾಬ್ದಾರಿಯನ್ನು ನೀಡಿದೆ.
ಇನ್ನೂ ಜಗದೀಶ್ ಶೆಟ್ಟರ್ ಈ ಬಾರಿ ಚುನಾವಣೆಯಲ್ಲಿ ಗೆಲ್ಲಲ್ಲ ಎಂದು ಬಿಜೆಪಿ ನಾಯಕರು ಹೇಳಿತ್ತಿದ್ದು, ಬಿಜೆಪಿ ನಾಯಕರ ವಿರುದ್ದವಾಗಿ ನನ್ನನ್ನು ಸೋಲಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇತ್ತೀಚೆಗಷ್ಟೇ ಗುಡುಗಿದ್ದರು.
ಈ ಕುರಿತು ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಇದು ಗುಜರಾತ್‌ನ ಅಹಮದಾಬಾದ್ ಅಲ್ಲ, ಹುಬ್ಬಳ್ಳಿ. ಅಲ್ಲಿಯಂತೆ ಆಟ ಆಡಿ ನನ್ನನ್ನು ಇಲ್ಲಿ ಸೋಲಿಸುತ್ತೇವೆ ಎಂಬ ಭಾವನೆ ಬಿಜೆಪಿಗಿದ್ದರೆ ಅದನ್ನು ಮನಸಿನಿಂದ ತೆಗೆದುಬಿಡಿ. ನನ್ನನ್ನು ಸೋಲಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರ ವಿರುದ್ದವಾಗಿ ಕಿಡಿಕಾರಿದ್ದಾರೆ.
ಬಿಜೆಪಿಯಲ್ಲಿ ನನ್ನ ಅನ್ಯಾಯವಾಗಿದೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇನೆ. ಅದಕ್ಕಾಗಿ ಇಡೀ ಬಿಜೆಪಿ ನನ್ನನ್ನು ಸೋಲಿಸಲು ಪಣ ತೊಟ್ಟಿದೆ.ಆದರೆ ಬಿಜೆಪಿ ನಾಯಕರ ಉದ್ದೇಶ ಫಲ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷದಲ್ಲಿ ನನಗೆ ಮಾತ್ರ ಅವಮಾನ ಆಗಿಲ್ಲ, ಲಿಂಗಾಯತ ಸಮುದಾಯಕ್ಕೆ ಹಾಗೂ ನನ್ನ ಇಡೀ ಹುಬ್ಬಳ್ಳಿ ಮತದಾರರಿಗೆ ಮಾಡಿದ ಅವಮಾನ ಇದು ಎಂದು ಕಿಡಿಕಾರಿದ ಅವರು, ನನ್ನ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ನನ್ನ ಮೇಲೆ ಇದೆ. ಈ ಅವಮಾನವನ್ನು ಅವರು ಮರೆಯುವುದಿಲ್ಲ. ಮೇ 10ರಂದು ನನ್ನನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ಅಲ್ಲದೇ ಬಿಜೆಪಿಯ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ನನ್ನನ್ನ ಸೋಲಿಸುವಂತೆ ಮತದಾರರ ಬಳಿ ಕೇಳಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಮತ ಕ್ಷೇತ್ರ ಮತದಾರರು ನನ್ನ ಕೈ ಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications