Pralhad Joshi: ನಾವು ಸಚಿವರನ್ನಾಗಿ ಮಾಡಿದ್ದೇವೆ: ನೀವು ಮತ್ತೆ ಸಂಸತ್‌ಗೆ ಕಳಿಸಿ: ಅಮಿತ್ ಶಾ
ಹುಬ್ಬಳ್ಳಿ, ಮೇ 02: ನೋಡಲು ಸೀದಾ-ಸಾದಾ ರೀತಿ ಕಾಣುವ ಕೇಂದ್ರ ಸಚಿವ ಮತ್ತು ಬಿಜೆಪಿ ಧಾರವಾಡ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರನ್ನು ಮತದಾರರು ಮತ್ತೆ ದೆಹಲಿಗೆ ಕಳುಹಿಸಬೇಕು. ಅವರನ್ನು ಮತ್ತಷ್ಟು ದೊಡ್ಡವರನ್ನಾಗಿ ನಾವು ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಹುಬ್ಬಳ್ಳಿಯಯಲ್ಲಿ ಪ್ರಹ್ಲಾದ್ ಜೋಶಿಯವರ ಪರ ಮತಯಾಚಿಸಿದ ಅಮಿತ್ ಶಾ ಅವರು, ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದರು. ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದರೆ ಪ್ರಹ್ಲಾದ್ ಜೋಶಿ ರಾಜಿ ಮಾಡಿಕೊಳ್ಳುವುದಿಲ್ಲ. ನಮ್ಮ ಬಳಿ ಜಗಳ ಮಾಡಿಯಾದರೂ ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.

ನಾವು ಸಚಿವರನ್ನಾಗಿ ಮಾಡಿದ್ದೇವೆ: ನೀವು ಮತ್ತೆ ಆಯ್ಕೆ ಕಳುಹಿಸಿ
ಇನ್ನು ನಾವು ಹೋದಲ್ಲಿ ಬಂದಲ್ಲಿ ಮತದಾರರು ತಮ್ಮ ಕ್ಷೇತ್ರದಿಂದ ಸಂಸದರನ್ನು ಮಾಡಿದ್ದೇವೆ. ಅವರಿಗೆ ಸಚಿವ ಸ್ಥಾನ ನೀಡುವಿರಾ? ಎಂದೇ ಕೇಳುತ್ತಾರೆ. ಆದರೆ ಕೇಂದ್ರ ಬಿಜೆಪಿಯು ಪ್ರಹ್ಲಾದ್ ಜೋಶಿಯವರನ್ನು ಸಚಿವರನ್ನಾಗಿ ಈಗಾಗಲೇ ಮಾಡಿದೆ. ಈಗ ನೀವು ಅವರನ್ನು ಗೆಲ್ಲಿಸಿ ಮತ್ತೆ ದೆಹಲಿಗೆ ಕಳುಹಿಸಬೇಕು. ಈ ಮೂಲಕ ನೀವು ಬಿಜೆಪಿ ಆಶೀರ್ವದಿಸಬೇಕು ಎಂದು ಅವರು ಪ್ರಹ್ಲಾದ್ ಜೋಶಿಯವರ ಕಾರ್ಯ, ಅಭಿವೃದ್ಧಿ ತುಡಿತದ ಕುರಿತು ಬಣ್ಣಿಸಿದರು.
ನಿಮ್ಮ ಮತದಿಂದ ಭಯೋತ್ಪಾದನೆ ನಿರ್ಮೂಲನೆ
ಧಾರವಾಡ ಕ್ಷೇತ್ರದ ಜನರು ಪ್ರಹ್ಲಾದ್ ಜೋಶಿಯವರಿಗೆ ಹಾಕುವ ಒಂದೊಂದು ಮತವು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುತ್ತದೆ. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಮಾಡುವುದೆಂದರೆ ಭಯೋತ್ಪಾದನೆಯ ಸಂಪೂರ್ಣ ನಿರ್ಮೂಲನ ಮಾಡಿದಂತೆ ಎಂದು ಅವರು ಕರೆ ನೀಡಿದರು.
ಕಾಂಗ್ರೆಸ್‌ನ ತುಷ್ಟೀಕರಣ ಕಿತ್ತು ಹಾಕಿದ ಬಿಜೆಪಿ
ಕಾಂಗ್ರೆಸ್‌ನವರು ವೋಟ್ ಬ್ಯಾಂಕ್ ಗಾಗಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಕೆಲಸ ಮಾಡಿದ್ದಾರೆ. ಬಾಂಬ್ ಬ್ಲಾಸ್ ಆದರೆ ಇವರಿಗೆ ಯಾವುದೇ ಲೆಕ್ಕಕ್ಕಿಲ್ಲ. ಕಾಂಗ್ರೆಸ್ ನವರು ವೋಟ್ ಬ್ಯಾಂಕ್ ಕಾರಣಕ್ಕಾಗಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಬರಲಿಲ್ಲ.

ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷದಲ್ಲಿ ಕಾಂಗ್ರೆಸ್‌ನ ತುಷ್ಟೀಕರಣ ರಾಜಕೀಯ ಕಿತ್ತು ಹಾಕಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಮೇಲೆ ಸುಳ್ಳು ಆರೋಪ: ಶಾ ಕಿಡಿ
ಮುಖ್ಯಮಂತ್ರಿಗಳು ಬರದ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪರಸ್ಪರ ಜಗಳದಲ್ಲಿ ತೊಡಗಿದ್ದಾರೆ. ನೀತಿ ಸಂಹಿತೆ ಜಾರಿಯಾಗಿದ್ದಕ್ಕೆ ಬರ ಪರಿಹಾರ ವಿಳಂಬವಾಗಿದೆ. ಕಾಂಗ್ರೆಸ್‌ನವರು ಸುಳ್ಳು ಹೇಳಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಈಗ ಹಣ ಬಿಡುಗಡೆಯಾಗಿದೆ. ಆದರೆ ಈಗ ಪ್ರಜ್ವಲ್ ರೇವಣ್ಣ ಸಿಡಿ ಬಂದಿದೆ.
ಯಾವುದೇ ಮಹಿಳೆಗೆ ಅನ್ಯಾಯವಾದರೂ ಅಂತವರ ಜೊತೆಗೆ ಬಿಜೆಪಿ ಇರಲ್ಲ. ಇದನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕೇಳಿಸಿಕೊಳ್ಳಬೇಕು ಎಂದು ಕಿಡಿ ಕಾರಿದರು.
ವಿದೇಶಕ್ಕೆ ಹೋಗಲು ನೀವು ಬಿಟ್ಟಿದ್ದ್ಯಾಕೆ?
ಪೆನ್‌ಡ್ರೈವ್ ಪ್ರಕರಣ ಹೊರ ಬರುತ್ತಿದ್ದಂತೆ, ಒಕ್ಕಲಿಗ ಬೆಲ್ಟ್‌ನಲ್ಲಿ ಚುನಾವಣೆ ಮುಗಿಯುವವರೆಗೂ ನೀವು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅದರಲ್ಲೂ ರಾಜಕೀಯ ಮಾಡಿದ್ದೀರಿ, ಆರೋಪಿಯನ್ನು ವಿದೇಶಕ್ಕೆ ಹೋಗಲು ಬಿಟ್ಟಿದ್ದೀರಿ. ಧೈರ್ಯವಿದ್ದರೆ ಸತ್ಯವನ್ನು ಜನರ ಮುಂದೆ ಹೇಳಿ ಎಂದು ಸವಾಲು ಹಾಕಿದರು.
ಇಂತಹ ಕೃತ್ಯ ಮಾಡುವವರಿಗೆ ಕಠೋರವಾದ ಶಿಕ್ಷೆ ಆಗಬೇಕು, ವಿಳಂಬವಾಗಬಾರದು ಅನ್ನೋದು ನಮ್ಮ ನಿಲುವು ಇಂತಹ ಭಯಾನಕ ಅಪರಾಧದ ನಡುವೆಯೂ ಇವರು ರಾಜಕೀಯ ಮಾಡುತ್ತಿದ್ದಾರೆ. ಏಪ್ರಿಲ್ 18ರಂದು ನೇಹಾ ಹಿರೇಮಠ ಹತ್ಯೆಯಾಯಿತು ಇದು ವೈಯಕ್ತಿಕ ಎಂದು ಕಾಂಗ್ರೆಸ್ ನಾಯಕರು ಹೇಳಿದರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications