ಹುಬ್ಬಳ್ಳಿಯಲ್ಲಿ ಸಿಎಂ ಭೇಟಿ ಮಾಡಿದ ಬಾಲಕ ಈಗ ಫೇಮಸ್!
ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶ್ರಾಂತಿಗೆಂದು ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್‍ನಲ್ಲಿ ತಂಗಿದ್ದಾಗ ಬಾಲಕನೊಬ್ಬನನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಿದರು.
ಹುಬ್ಬಳ್ಳಿ, ಜೂನ್ 12: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಹುಬ್ಬಳ್ಳಿ ಪ್ರವಾಸದ ವೇಳೆ ಸರ್ಕ್ಯೂಟ್ ಹೌಸಿನಲ್ಲಿ ತಂಗಿದ್ದಾಗ ಬಾಲಕನೊಬ್ಬನನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಿದರು.
ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಾಲಕ ಈಗ ಶಾಲೆಯಲ್ಲಿ ಜನಪ್ರಿಯ ವಿದ್ಯಾರ್ಥಿ. ಮುಖ್ಯಮಂತ್ರಿಗಳು ಸರ್ಕ್ಯೂಟ್ ಹೌಸ್‍ನಲ್ಲಿ ತಂಗಿರುವುದನ್ನು ತಿಳಿದುಕೊಂಡು ಅಲ್ಲಿಗೆ ಬಂದ ಬಾಲಕನ ಹೆಸರು ಆರ್ಯನ್ ಗಿರಿ.
ಎಂ. ಆರ್ ಸಾಕರೆ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿ. ಬೆಳ್ಳಿಗೆ ಸುಮಾರು 9 ಗಂಟೆಯ ಸಮಯದಲ್ಲಿ ಸಕ್ರ್ಯೂಟ್ ಹೌಸ್‍ಗೆ ಬಂದ ಬಾಲಕ ಆರ್ಯನ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತನ್ನ ಊರಿನ ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುತ್ತಾನೆ.

ಬಿಡುವಿಲ್ಲದ ಕಾರ್ಯಕ್ರಮಗಳಿಂದ ದಣಿದಿದ್ದ ಮುಖ್ಯಮಂತ್ರಿಗಳು ತಮಗೆ ವಿಶ್ರಾಂತಿಯ ಅಗತ್ಯವಿರುವುದನ್ನು ಮರೆತು ಭೇಟಿಗಾಗಿ ಕಾಯುತ್ತಿದ್ದ ಬಾಲಕನಿಗಾಗಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಡುವುದರ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಕನ್ನಡ ಮಾಧ್ಯಮದ ಬಗ್ಗೆ ಒಲವು: ಬಾಲಕ ಆರ್ಯನ್ ನೊಂದಿಗೆ ತಮ್ಮ ವಿಶ್ರಾಂತಿ ಸಮಯದ ಸುಮಾರು 20 ನಿಮಿಷಗಳಷ್ಟು ಕಾಲ ಕಳೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಲಕನ ಮನವಿಯನ್ನು ಆಲಿಸಿ, ಆತನ ಬಗೆಗೆ ವಿವರಗಳನ್ನು ಪಡೆದು ಕೊಂಡರು.
ಬಾಲಕನ ಶಾಲೆ ವಿವರಗಳನ್ನು ಕೇಳಿ ತಿಳಿದ ಮುಖ್ಯಮಂತ್ರಿಗಳು ಆರ್ಯನ್ ಗಿರಿಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಬೇಕು ಮತ್ತು ಕನ್ನಡ ಓದಲು ಬರೆಯಲು ಅಭ್ಯಾಸಿಸಬೇಕು ಎಂದು ಹೇಳಿದರು. ಈ ಮೂಲಕ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಬಾಲಕನನ್ನು ಪ್ರೋತ್ಸಾಹಿಸುತ್ತಾ, ಕನ್ನಡ ಭಾಷಾ ಪ್ರೇಮವನ್ನ ಮುಖ್ಯಮಂತ್ರಿಗಳು ಮೆರೆಯುವುದರ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಬದ್ದ ಎಂಬ ಸಂದೇಶ ನೀಡಿದರು.
ಉತ್ತರ ಕರ್ನಾಟಕದಲ್ಲಿ ಉತ್ತಮ ರಸ್ತೆ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಬಾಲಕ ಆರ್ಯನ್ ಗಿರಿ ಮಾಡಿದ ಮನವಿಗೆ ಸ್ಪಂದಿಸಿದ ಅವರು, ಬಾಲಕನಿಗೆ ಸರ್ಕಾರ ಹಂತಹಂತವಾಗಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಮುಖ್ಯಮಂತ್ರಿಗಳ ಭರವಸೆಯ ನಂತರ ಬಾಲಕ ಆರ್ಯನ್ ಗಿರಿ ಸಂತಸದಿಂದ ಅಲ್ಲಿಂದ ತೆರಳಿದ. (ಮಾಹಿತಿ ಕೃಪೆ: ವಾರ್ತಾ ಇಲಾಖೆ)












Click it and Unblock the Notifications