5 ವರ್ಷದ ಬಾಲಕಿ ಅತ್ಯಾಚಾರ ಯತ್ನ, ಕೊಲೆ ಪ್ರಕರಣ: ಬಾಲಕಿಯ ಅಂತ್ಯಸಂಸ್ಕಾರ, ಆರೋಪಿ ಗುರುತು ಪತ್ತೆ ಬಗ್ಗೆ ಕಮಿಷನರ್ ಮಾಹಿತಿ...
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಪ್ರಯತ್ನ ಹಾಗೂ ಕೊಲೆ ಪ್ರಕರಣಕ್ಕೆ ಪಕ್ಷಾತೀತವಾಗಿ ಖಂಡನೆ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಎನ್ಕೌಂಟರ್ ಮಾಡಲಾಗಿದೆ. ಇನ್ನು 5 ವರ್ಷದ ಬಾಲಕಿ ಅತ್ಯಾಚಾರ ಯತ್ನ, ಕೊಲೆ ಪ್ರಕರಣ ಹಾಗೂ ಆರೋಪಿ ಗುರುತು ಪತ್ತೆ ಬಗ್ಗೆ ಕಮಿಷನರ್ ಮಾಹಿತಿ ನೀಡಿದ್ದಾರೆ.
ಐದು ವರ್ಷದ ಬಾಲಕಿಯ ಮರಣೋತ್ತರ ಪರೀಕ್ಷೆಯನ್ನು ನಗರದ ಕೆಎಂಸಿಆರ್‌ಐ (ಕಿಮ್ಸ್) ಆಸ್ಪತ್ರೆಯಲ್ಲಿ ನೆರವೇರಿಸಲಾಯಿತು. ಬಳಿಕ ಮೃತದೇಹವನ್ನು ಕೆಎಂಸಿಆರ್ಐನಿಂದ ನಿಂದ ಮೃತಳ ಮನೆಗೆ ತೆಗೆದುಕೊಂಡು ಹೋಗಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಾಲಕಿ ಮೃತ ದೇಹ ಮನೆಗೆ ತರುತ್ತಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಬಳಿಕ ದೇವಾಂಗಪೇಟೆಯ ರುದ್ರಭೂಮಿಯಲ್ಲಿ ಬಾಲಕಿಯ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ಕುರಿತಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಬಾಲಕಿ ಹಾಗೂ ಆರೋಪಿಯ ಮರಣೋತ್ತರ ಪರೀಕ್ಷೆಯು ನಡೆದಿದೆ ಆರೋಪಿಯ ಹಿನ್ನಲೆ ಪತ್ತೆ ಮಾಡುತ್ತಿದ್ದೇವೆ. ಆರೋಪಿ ವಿಚಾರಣೆ ವೇಳೆ ಬಿಹಾರದ ಪಾಟ್ನಾ ಮೂಲ ಅಂತ ಅಷ್ಟೇ ಹೇಳಿದ್ದಾನೆ. ಹೀಗಾಗಿ ಆತನ ಕುಟುಂಬಸ್ಥರು, ಸ್ನೇಹಿತರು ಈ ಹಿಂದೆ ಕೆಲಸ ಮಾಡಿಸಿಕೊಂಡ ಮಾಲೀಕನ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದಿದ್ದಾರೆ.
ಆರೋಪಿ ಮೃತ ದೇಹ ಹಸ್ತಾಂತರ ಪ್ರತಿಕ್ರಿಯೆ ಬಗ್ಗೆ ಕಾನೂನು ತಜ್ಞರ ಜೊತೆಗೆ ಚರ್ಚೆ ಮಾಡುತ್ತಿದ್ದೇವೆ. ನಮ್ಮ ಪಿಎಸ್ಐ ಅವರ ಆರೋಗ್ಯ ಸುಧಾರಿಸುತ್ತಿದೆ. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ. ಆದರೆ ಅವರ ಕುಟುಂಬಸ್ಥರು ಬಯಸಿದರೆ ಅವರ ಮನೆ ಸಮೀಪದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡುತ್ತೇವೆಂದು ಅವರು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ನಿನ್ನೆ ಎನ್ ಕೌಂಟರ್ ನಡೆದ ಸ್ಥಳವನ್ನು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಪರಿಶೀಲನೆ ನಡೆಸಿದರು. ತಾರಿಹಾಳ ಬಳಿ ಆರೋಪಿ ವಾಸವಾಗಿದ್ದ ಶೆಡ್ ಹಾಗೂ ಆರೋಪಿ ಕಲ್ಲು ಎಸೆದಿರುವದು ಹಾಗೂ ವಾಹನ ಜಖಂ ಸೇರಿದಂತೆ ಸಿಬ್ಬಂದಿಯ ವಸ್ತುಗಳು ಬಿದ್ದಿರುವ ಗುರುತುಗಳನ್ನು ಪರಿಶೀಲನೆ ನಡೆಸಿದರು.
ಘಟನೆಯ ಹಿನ್ನೆಲೆ ಏನು ?
ಸೈಕೋಪಾತ್ ಒಬ್ಬ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಬಿಹಾರ ಮೂಲದ ಸೈಕೋಪಾತ್ ಬಾಲಕಿಯನ್ನು ಶೆಡ್‌ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಬಾಲಕಿ ಚೀರಾಟ ಕೇಳಿ ಅಲ್ಲೇ ಇದ್ದ ಸ್ಥಳೀಯರು ಶೆಡ್‌ನತ್ತ ಬಂದಿದ್ದರು. ಜನ ಬರುತ್ತಿರುವುದನ್ನು ಕಂಡ ಸೈಕೋಪಾತ್ ಭಯದಿಂದ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ, ಎಸ್ಕೇಪ್ ಆಗಿದ್ದ!
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲೆಂದು ಹೋಗಿದ್ದರು. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಿ, ಎಸ್ಕೇಪ್ ಆಗಲು ಯತ್ನಿಸಿದ್ದ. ಒಮ್ಮೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ರೂ ಕೇಳದೇ ಪೊಲೀಸರ ಮೇಲೆ ಕಲ್ಲು ತೂರಿದ್ದ. ಈ ವೇಳೆ ಹುಬ್ಬಳ್ಳಿ ಪೊಲೀಸರು ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿದ್ದರು. ಅಶೋಕನಗರ ಪೊಲೀಸ್ ಠಾಣೆಯ ಮಹಿಳಾ ಪಿಎಸ್‌ಐ ಅನ್ನಪೂರ್ಣ ಅವರು ಹಾರಿಸಿದ ಗುಂಡು ಬೆನ್ನಿಗೆ ತಾಗಿ ಗಾಯಗೊಂಡಿದ್ದ ಆರೋಪಿಯನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದಿದೇ ಆರೋಪಿ ರಿತೇಶ್ ಸಾವನ್ನಪ್ಪಿದ್ದ.
ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ನಡೆಸಿರೋ ಬಗ್ಗೆ ಸಾಕ್ಷ್ಯ ಲಭ್ಯ: ಪೋಕ್ಸೋ ಕೇಸ್ ದಾಖಲು
ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಿತೇಶ್ ಕುಮಾರ್ ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ನಡೆಸಿರುವ ಬಗ್ಗೆ ಸಾಕ್ಷ್ಯ ಲಭ್ಯವಾಗಿದೆ. ಆರೋಪಿ ಒಳ ಉಡುಪಿನಲ್ಲಿ ಬಾಲಕಿಯ ಲೆಗ್ಗಿನ್ಸ್ ಬಟ್ಟೆ ಪತ್ತೆಯಾಗಿದೆ. ಇದೀಗ ಆರೋಪಿಯ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.
ಇಂದು ಕಿಮ್ಸ್ ಆಸ್ಪತ್ರೆಯಲ್ಲಿ ಆರೋಪಿಯ ಮರಣೋತ್ತರ ಪರೀಕ್ಷೆ ನಡೆದಿದ್ದು, ಈ ವೇಳೆ ಅತ್ಯಾಚಾರ ನಡೆಸಿರುವ ಬಗ್ಗೆ ಸಾಕ್ಷ್ಯ ಲಭ್ಯವಾಗಿದೆ. ಪೊಲೀಸರು ಈಗಾಗಲೇ ಆರೋಪಿಯನ್ನು ಎನ್ಕೌಂಟರ್ ಮಾಡಿದ್ದು, ಆರೋಪಿ ವಿರುದ್ಧ ಪೋಕ್ಸೋ, ಅಪಹರಣ ಮತ್ತು ಕೊಲೆ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ವಲಸೆ ನೀತಿ ರೂಪಿಸುವುದಕ್ಕೆ ಆಗ್ರಹ: ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಬಿಹಾರ ಸೇರಿದಂತೆ ಉತ್ತರ ಭಾರತದ ಕೆಲವು ರಾಜ್ಯಗಳಿಂದ ಬರುವ ಕೆಲವರಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲದೇ ಕಾನೂನು ಸುವ್ಯವಸ್ಥೆಗೂ ಧಕ್ಕೆಯಾಗುತ್ತಿದೆ. ಹೀಗಾಗಿ, ಕರ್ನಾಟಕ ಸರ್ಕಾರವು ವಲಸೆ ನೀತಿಯನ್ನು ಜಾರಿ ಮಾಡಬೇಕು ಎನ್ನುವ ಆಗ್ರಹ ಕನ್ನಡಿಗರಿಂದ ಕೇಳಿ ಬಂದಿದೆ. ಮುಂದುವರಿದು ರಾಷ್ಟ್ರೀಯ ಪಕ್ಷಗಳು ವೋಟ್ ಬ್ಯಾಂಕ್‌ಗಾಗಿ ಉತ್ತರ ಭಾರತೀಯರಿಗೆ ಕರ್ನಾಟಕದಲ್ಲಿ ಉತ್ತೇಜನ ನೀಡಬಾರದು.
ಬಿಜೆಪಿಯು ಈಚೆಗೆ ಬಿಹಾರಿ ದಿವಸ್‌ವನ್ನು ಕರ್ನಾಟಕದಲ್ಲಿ ಆಚರಣೆ ಮಾಡಿತ್ತು. ಈ ರೀತಿಯ ಆಚರಣೆಗಳನ್ನು ಮಾಡಿ ಉತ್ತರ ಭಾರತೀಯರನ್ನು ಮೆಚ್ಚಿಸುವ ಅವಶ್ಯಕತೆ ಕರುನಾಡಿಗೆ ಇಲ್ಲ. ಇದರಿಂದ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತಿದೆ. ಸಣ್ಣ ಮಗುವನ್ನು ಕಳೆದುಕೊಳ್ಳುವಂತೆ ಆಗಿದೆ ಎಂದು ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications