• search
 • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮ್ಮದೇ ತಪ್ಪಿನಿಂದ ಹಾನಗಲ್‌ನಲ್ಲಿ ಸೋಲಬೇಕಾಯಿತು; ಶಿವಕುಮಾರ ಉದಾಸಿ

|
Google Oneindia Kannada News

ಹಾವೇರಿ, ನವೆಂಬರ್ 11: "ಹಾನಗಲ್ ಉಪ ಚುನಾವಣೆಯಲ್ಲಿ ನಮ್ಮದೇ ತಪ್ಪಿನಿಂದಲೇ ಸೋಲಬೇಕಾಯಿತು," ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿ ಹೇಳಿದ್ದಾರೆ.

ಹಾನಗಲ್ ಪಟ್ಟಣದ ಉದಾಸಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಶಿವಕುಮಾರ್ ಉದಾಸಿ, "ಹಣದಿಂದ ರಾಜಕಾರಣ ಮಾಡಬೇಡಿ, ಹೋರಾಟದಿಂದ ರಾಜಕಾರಣ ಮಾಡಿ ಎಂದು ನಮ್ಮ ತಂದೆ ಸಿ.ಎಂ. ಉದಾಸಿ ಹೇಳುತ್ತಿದ್ದರು. ಅವರ ಆ ಮಾತು ನೆನಪಿಸಿಕೊಂಡರೆ ದುಃಖವಾಗುತ್ತದೆ," ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದರು.

"ಕೊನೆಯ ದಿನದವರೆಗೂ ನಾವು ಹಾನಗಲ್ ಕ್ಷೇತ್ರದಲ್ಲಿ ಸರ್ವೆ ಮಾಡಿಸಿದ್ದೆವು. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇದ್ದ ಗೆಲುವಿನ ಹಸಿವು ನಮ್ಮಲ್ಲಿರಲಿಲ್ಲ. ನಾನು ಸಮೀಕ್ಷೆ ಮಾಡಿಸಿದ್ದ ಹುಡುಗನೂ ಈ ಮಾತು ಹೇಳಿದ್ದ ಎಂದು ನೆನಪಿಸಿಕೊಂಡರು. 2023ರಲ್ಲಿ ಯಾರನ್ನೇ ಪಕ್ಷವು ಅಭ್ಯರ್ಥಿಯಾಗಿ ನಿಲ್ಲಿಸಿದರೂ ಅವರನ್ನು ಗೆಲ್ಲಿಸಬೇಕು. ಮುಂದಿನ ದಿನಗಳಲ್ಲಿ ಹೆಚ್ಚು ಕಾಲ ನಿಮ್ಮ (ಕಾರ್ಯಕರ್ತರ) ಜೊತೆ ಇರುತ್ತೇನೆ," ಎಂದರು.

"ಸೋತವರ ಬಳಿಗೆ ಜನರು ಹೋಗುವುದಿಲ್ಲ, ಗೆದ್ದವರ ಜೊತೆಗೆ ಗುರುತಿಸಿಕೊಳ್ಳಲು ಹೋಗುತ್ತಾರೆ. ರಾಜಕಾರಣ ನಿಂತ ನೀರಲ್ಲ, ಬಹಳಷ್ಟು ಬದಲಾವಣೆಗಳು ಆಗಿವೆ. ಇನ್ನಷ್ಟು ಬದಲಾವಣೆಗಳು ಆಗುತ್ತವೆ," ಎಂದು ಅಭಿಪ್ರಾಯಪಟ್ಟರು.

"ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ಮತ ಹಾಕಿಸಬೇಕು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳಿಗೆ ಹೆಚ್ಚು ಮತ ಹಾಕಿಸಿ ಗೆಲ್ಲಿಸಬೇಕು. ಯಾರೂ ಧೈರ್ಯ ಕಳೆದುಕೊಳ್ಳುವುದು ಬೇಡ," ಎಂದು ಬಿಜೆಪಿ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

"ಸೂಕ್ಷ್ಮ ಮನಃಸ್ಥಿತಿಯವರು ಇರುವವರು ರಾಜಕಾರಣಕ್ಕೆ ಬರಬಾರದು ಎಂದು ನಮ್ಮ ತಂದೆಯವರು ಹೇಳುತ್ತಿದ್ದರು. ಕಳೆದ ಚುನಾವಣೆ ವೇಳೆ ನಮ್ಮ ತಂದೆ ಕ್ಷೇತ್ರದ ಮೂವತ್ತು ಜನರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಅದರಲ್ಲಿ ಇಪ್ಪತ್ತೈದು ಜನರೂ ಅವರಿಗೆ ಮತ ಹಾಕಲಿಲ್ಲ," ಎಂದು ಸಂಸದ ಶಿವಕುಮಾರ್ ಉದಾಸಿ ವಿಷಾದ ವ್ಯಕ್ತಪಡಿಸಿದರು.

"ನಾವು ಕ್ಷೇತ್ರದಲ್ಲಿ ಕೆಲಸ‌ ಮಾಡಿದಾಗಲೂ ಅವು ಮತವಾಗಿ ಪರಿವರ್ತನೆ ಆಗುತ್ತವೆ ಎಂದು ತಿಳಿಯಲು ಆಗುವುದಿಲ್ಲ. ಚುನಾವಣೆ ಇದ್ದಾಗ‌ ಕೊನೆಯ ಒಂದು ತಿಂಗಳು ರಾಜಕಾರಣ ಮಾಡಬೇಕು. ಮುಂದಿನ ಚುನಾವಣೆಯಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ನನಗೆ ಟಿಕೆಟ್ ಸಿಕ್ಕಿದೆ ಎನ್ನುವ ರೀತಿಯಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು," ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಚುನಾವಣಾ ರಾಜಕಾರಣ ನಮಗೆ ಪಾಠ ಅನ್ನುವುದಕ್ಕಿಂತ, ಇಲ್ಲಿ ನಮಗೆ ಕಲಿಯೋದು ಜಾಸ್ತಿ ಇರುತ್ತದೆ. ಪಾಠ ಕಲಿಸಿದ್ದಾರೆ ಅಂತಾ ನಾನು ಹೇಳುವುದಿಲ್ಲ. ನಮ್ಮ ತಪ್ಪಿನಿಂದ ನಾವು ಸೋತಿದ್ದೀವಿ, ಜನರು ನಮ್ಮನ್ನು ಯಾವಾಗಲೂ ಗೆಲ್ಲಿಸುತ್ತಾರೆ ಎನ್ನುವ ಮಾತನ್ನು ಪದೇಪದೇ ದಿವಂಗತ ಸಿ.ಎಂ. ಉದಾಸಿಯವರು ಹೇಳುತ್ತಿದ್ದರು.

ಚುನಾವಣೆಯಲ್ಲಿ ಗೆಲ್ಲಬೇಕಾದರೂ ಎಲ್ಲ ಸಮಾಜದವರೂ ವೋಟು ಹಾಕುತ್ತಾರೆ. ಸೋಲಬೇಕಾದರೂ ಎಲ್ಲ ಸಮಾಜದವರೂ ಮತಹಾಕ್ತಾರೆ. ಕಾಂಗ್ರೆಸ್‌ನವರು ಎಷ್ಟೇ ಪ್ರಚಾರ, ಅಪಪ್ರಚಾರ ಮಾಡಿದರೂ ಎಂಬತ್ತು ಸಾವಿರಕ್ಕೂ ಅಧಿಕ ಜನರು ಅವರ ಮಾತು ನಂಬಲಿಲ್ಲ ಎಂದರು.

ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮ ಸರಕಾರಗಳಿವೆ. ನಾವು ಮಂಜೂರಾತಿ ಮಾಡಿಸಿಕೊಂಡು ಬಂದ ಕೆಲಸಗಳನ್ನು ಗೆದ್ದ ಕಾಂಗ್ರೆಸ್ ಅಭ್ಯರ್ಥಿ ನಾವೇ ಮಾಡಿಸಿದ್ದೇವೆ ಅಂತಾರೆ. ಅದಕ್ಕೆ ಯಾರೂ ಕಿವಿಗೊಡಬೇಡಿ. ಮುಂದಿನ ದಿನಗಳಲ್ಲಿ ಜಾಸ್ತಿ ದಿನಗಳ ಕಾಲ ನಿಮ್ಮ ಜೊತೆಗೆ ಇರುತ್ತೇನೆ ಎಂದು ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಶಿವಕುಮಾರ್ ಉದಾಸಿ ಭರವಸೆ ನೀಡಿದರು.

   David Warner ಹೊಡೆದ 6 ಈಗ ಎಲ್ಲೆಡೆ ವೈರಲ್ | Oneindia Kannada
   ಉದಾಸಿ ಶಿವಕುಮಾರ ಚನ್ನಬಸಪ್ಪ
   Know all about
   ಉದಾಸಿ ಶಿವಕುಮಾರ ಚನ್ನಬಸಪ್ಪ
   English summary
   We were Defeated in Hanagal Constituency by our own fault, Haveri Lok Sabha MP Shivakumar Udasi said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X