ಗೌರವಧನವನ್ನೇ ಶಾಲಾ ಮಕ್ಕಳ ಭವಿಷ್ಯಕ್ಕೆ ಮುಡಿಪಾಗಿಟ್ಟ ಜಲ್ಲಾಪುರದ ಗ್ರಾ.ಪಂ ಸದಸ್ಯ ಸತೀಶ್ ಗೌಳಿ
ಹಾವೇರಿ: ಇಂದಿನ ರಾಜಕೀಯ ಸನ್ನಿವೇಶದಲ್ಲಿ 'ಚುನಾವಣೆ' ಎಂದ ತಕ್ಷಣ ಕಣ್ಣ ಮುಂದೆ ಬರುವುದು ಹಣದ ಹೊಳೆ, ಹೆಂಡದ ಹರಿವು ಮತ್ತು ಬಾಡೂಟದ ಅಬ್ಬರ. ಸಾಮಾನ್ಯ ಹಳ್ಳಿಯ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಅಭ್ಯರ್ಥಿಗಳಿರುವ ಈ ಕಾಲದಲ್ಲಿ, ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಜಲ್ಲಾಪುರ ಗ್ರಾಮದ ಸತೀಶ್ ಗೌಳಿ ಅವರು ಒಂದು ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ. ವೃತ್ತಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಸತೀಶ್, ರಾಜಕೀಯ ಎನ್ನುವುದು ಲಾಭದಾಯಕ ವ್ಯವಹಾರವಲ್ಲ, ಅದು ಜನಸೇವೆಯ ಪರಮೋಚ್ಚ ವೇದಿಕೆ ಎಂಬುದನ್ನು ತಮ್ಮ ನಡವಳಿಕೆಯ ಮೂಲಕ ಸಾಬೀತುಪಡಿಸಿದ್ದಾರೆ.
ಲಂಚದ ಕಹಿ ಘಟನೆಯೇ ರಾಜಕೀಯಕ್ಕೆ ಪ್ರೇರಣೆ
ಸತೀಶ್ ಅವರು ರಾಜಕೀಯಕ್ಕೆ ಪ್ರವೇಶಿಸಲು ಯಾವುದೇ ರಾಜಕೀಯ ಹಿನ್ನೆಲೆ ಇರಲಿಲ್ಲ. ಬದಲಾಗಿ, ವ್ಯವಸ್ಥೆಯಲ್ಲಿದ್ದ ಭ್ರಷ್ಟಾಚಾರದ ಕಹಿ ಅನುಭವವೇ ಅವರನ್ನು ಈ ಹಾದಿಗೆ ತಳ್ಳಿತು. 2016-17ರ ಅವಧಿಯಲ್ಲಿ ತಮ್ಮ ತಂಗಿಯ ಮದುವೆಯ ತಯಾರಿ ನಡೆಯುತ್ತಿದ್ದಾಗ, ಬ್ಯಾಂಕ್ ಸಾಲ ಪಡೆಯಲು ಅನಿವಾರ್ಯವಾಗಿದ್ದ 'ಇ-ಸ್ವತ್ತು' ಪ್ರಮಾಣಪತ್ರಕ್ಕಾಗಿ ಅವರು ಪಂಚಾಯ್ತಿ ಕಚೇರಿಗೆ ಅಲೆದಿದ್ದರು. ಆಗ ಅಲ್ಲಿನ ಅಧಿಕಾರಿಗಳು 15,000 ರೂಪಾಯಿ ಲಂಚ ಕೇಳಿದ್ದಲ್ಲದೆ, ಸುಮಾರು 11 ಬಾರಿ ಅಲೆದಾಡಿಸಿ ಸತಾಯಿಸಿದ್ದರು. ಅಂದು ಸತೀಶ್ ಅವರ ಮನಸ್ಸಿನಲ್ಲಿ ಮೂಡಿದ ಆಕ್ರೋಶ "ನನ್ನಂತವರಿಗೇ ಹೀಗಾದರೆ ಇನ್ನು ಸಾಮಾನ್ಯ ಜನರ ಗತಿಯೇನು?" ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತು. ಈ ವ್ಯವಸ್ಥೆಯನ್ನು ಒಳಗಿನಿಂದಲೇ ಬದಲಿಸಬೇಕೆಂಬ ಛಲ ಅವರಲ್ಲಿ ಮೂಡಿತು.

2020ರ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸತೀಶ್ ಸ್ಪರ್ಧಿಸಲು ನಿರ್ಧರಿಸಿದಾಗ ಅವರ ಬಳಿ ಹಣದ ಬಲವಿರಲಿಲ್ಲ. ಆದರೆ, ಜನರ ಮೇಲಿನ ನಂಬಿಕೆಯಿತ್ತು. ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಖರ್ಚು ಮಾಡಿದ್ದು ಕೇವಲ 1,964 ರೂಪಾಯಿ ಮಾತ್ರ! ಯಾವುದೇ ಆಮಿಷಗಳಿಲ್ಲದೆ, ಕೇವಲ ಕರಪತ್ರಗಳನ್ನು ಹಿಡಿದು ಮನೆಮನೆಗೆ ತೆರಳಿ ತಮ್ಮ ಪ್ರಾಮಾಣಿಕತೆಯನ್ನೇ ಬಂಡವಾಳವಾಗಿಸಿಕೊಂಡರು. ಜಲ್ಲಾಪುರದ ಜನತೆ ಇವರ ನಿಷ್ಠೆಯನ್ನು ಮೆಚ್ಚಿ, ಕಣದಲ್ಲಿದ್ದ 16 ಜನ ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಿದರು. ಇದು ಕೇವಲ ಸತೀಶ್ ಅವರ ಗೆಲುವಲ್ಲ, ಬದಲಾಗಿ ಭ್ರಷ್ಟಾಚಾರದ ವಿರುದ್ಧ ಜನಸಾಮಾನ್ಯರು ನೀಡಿದ ತೀರ್ಪಾಗಿತ್ತು.
ಗೆದ್ದ ನಂತರ ಸತೀಶ್ ಗೌಳಿ ಅವರು ಕೈಗೊಂಡ ನಿರ್ಧಾರ ಇಡೀ ರಾಜ್ಯದ ಗಮನ ಸೆಳೆಯುವಂತದ್ದು. ಗ್ರಾಮ ಪಂಚಾಯ್ತಿ ಸದಸ್ಯರಿಗೆ ಸರ್ಕಾರ ನೀಡುವ ಮಾಸಿಕ 2,000 ರೂಪಾಯಿ ಗೌರವಧನವನ್ನು ಅವರು ತಮ್ಮ ಸ್ವಂತಕ್ಕೆ ಬಳಸದಿರಲು ನಿರ್ಧರಿಸಿದರು. ಐದು ವರ್ಷಗಳ ಅವಧಿಯಲ್ಲಿ ತಮಗೆ ಬಂದ ಒಟ್ಟು 1.2 ಲಕ್ಷ ರೂಪಾಯಿಗಳನ್ನು ಗ್ರಾಮದ ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳ ಅಭಿವೃದ್ಧಿಗೆ ವಿನಿಯೋಗಿಸಿದರು.
ಶಾಲಾ ಮಕ್ಕಳು ಜೆರಾಕ್ಸ್ ಮಾಡಿಸಲು ರಸ್ತೆ ದಾಟಿ ಹೋಗುವುದನ್ನು ತಪ್ಪಿಸಲು ಶಾಲೆಗೆ ಪ್ರಿಂಟರ್ ಕೊಡಿಸಿದರು. ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಸೌಲಭ್ಯ, ಬೋರ್‌ವೆಲ್‌ಗೆ ಕೇಬಲ್ ಅಳವಡಿಕೆ ಮತ್ತು ಶಾಲೆಯ ಸುತ್ತುಗೋಡೆ ಗೋಡೆಗೆ ಸುಂದರವಾದ 'ವರ್ಲಿ ಆರ್ಟ್' ಪೇಂಟಿಂಗ್ ಮಾಡಿಸುವ ಮೂಲಕ ಶಾಲೆಗೆ ಹೈಟೆಕ್ ಕಳೆ ನೀಡಿದರು. ಇಷ್ಟೇ ಅಲ್ಲದೆ, ಶಿಥಿಲಗೊಂಡಿದ್ದ ಅಂಗನವಾಡಿಗಳಿಗೆ ಮೇಲ್ಛಾವಣಿ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಿ ಮಕ್ಕಳ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸಿದರು.
ರಕ್ತದಾನದ ಹರಿಕಾರ
ಸತೀಶ್ ಅವರ ಸಮಾಜ ಸೇವೆ ಕೇವಲ ಅಭಿವೃದ್ಧಿ ಕಾಮಗಾರಿಗಳಿಗೆ ಸೀಮಿತವಾಗಿಲ್ಲ. ಅವರು ಜಿಲ್ಲೆಯಲ್ಲೇ ಹೆಸರಾದ ರಕ್ತದಾನದ ಹರಿಕಾರ. ಕೋವಿಡ್ ಸಮಯದಲ್ಲಿ ರಕ್ತ ಸಿಗದೆ ರೋಗಿಯೊಬ್ಬರು ಸಾವನ್ನಪ್ಪಿದ ಘಟನೆಯಿಂದ ನೊಂದ ಇವರು 'ಜಲ್ಲಾಪುರ ಜೀವದಾನಿಗಳ ಬಳಗ'ವನ್ನು ಆರಂಭಿಸಿದರು. ಇಂದು ಕೇವಲ 520 ಮನೆಗಳಿರುವ ಈ ಪುಟ್ಟ ಹಳ್ಳಿಯಲ್ಲಿ 400ಕ್ಕೂ ಹೆಚ್ಚು ರಕ್ತದಾನಿಗಳಿದ್ದಾರೆ ಎಂದರೆ ಅದು ಸತೀಶ್ ಅವರ ಪರಿಶ್ರಮಕ್ಕೆ ಸಾಕ್ಷಿ. ಕಳೆದ ಆರು ವರ್ಷಗಳಲ್ಲಿ ಈ ತಂಡ 1,200 ಯೂನಿಟ್ ರಕ್ತವನ್ನು ಜಿಲ್ಲಾ ಆಸ್ಪತ್ರೆಗೆ ಒದಗಿಸಿದೆ. ಸತೀಶ್ ಸ್ವತಃ 44 ಬಾರಿ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.
ಕೋಟ ಶ್ರೀನಿವಾಸ್ ಪೂಜಾರಿ ರೋಲ್ ಮಾಡೆಲ್
ಸರಳ ರಾಜಕಾರಣಿ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ರೋಲ್ ಮಾಡೆಲ್ ಆಗಿ ಸ್ವೀಕರಿಸಿರುವ ಸತೀಶ್, ಯುವಕರು ರಾಜಕಾರಣಿಗಳ ಹಿಂದೆ ಜೈಕಾರ ಹಾಕುತ್ತಾ ತಿರುಗುವ ಬದಲು ಸಮಾಜಕ್ಕೆ ಉಪಯುಕ್ತವಾಗುವ ಕೆಲಸ ಮಾಡಬೇಕು ಎನ್ನುತ್ತಾರೆ. ರೈಲ್ವೆ ಉದ್ಯೋಗಿಯಾಗಿರುವ ಪತ್ನಿ ಶೈಲಾ ಅವರ ಅಚಲ ಬೆಂಬಲ ಸತೀಶ್ ಅವರ ಈ ಎಲ್ಲಾ ಕಾರ್ಯಗಳಿಗೆ ಶಕ್ತಿಯಾಗಿದೆ. ಐದು ವರ್ಷಗಳ ಕಾಲ ಕಳಂಕರಹಿತ ಸೇವೆ ಸಲ್ಲಿಸಿ ಅಧಿಕಾರಾವಧಿ ಮುಗಿಸಿರುವ ಇವರು, "ರಾಜಕೀಯ ಅಂದರೆ ಅಧಿಕಾರವಲ್ಲ, ಅದೊಂದು ಜವಾಬ್ದಾರಿ" ಎಂದು ತೋರಿಸಿಕೊಟ್ಟಿದ್ದಾರೆ. ಇಂದಿನ ಯುವ ಪೀಳಿಗೆಗೆ ಸತೀಶ್ ಗೌಳಿ ನಿಜವಾದ ಸ್ಫೂರ್ತಿಯಾಗಿದ್ದಾರೆ.












Click it and Unblock the Notifications