ಸಿದ್ದರಾಮಯ್ಯ ನಮ್ಮಿಂದ ಸರ್ಕಾರಿ ಸೌಲಭ್ಯ ಬಳಸುತ್ತಿದ್ದಾರೆ: ಬಿ.ಸಿ.ಪಾಟೀಲ್
ಹಾವೇರಿ, ನವೆಂಬರ್ 25: ವಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮಿಂದಾಗಿ ಇಂದು ಸರ್ಕಾರಿ ಕಾರಿನಲ್ಲಿ ಓಡಾಡುವ ಯೋಗ ಬಂದಿದೆ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಬೋಗಾವಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಇಷ್ಟು ದಿನ ಸಿದ್ದರಾಮಯ್ಯನವರು ಬೇರೆಯವರ ಹೆಸರಿನ ಬಂಗಲೆ ಮತ್ತು ಯಾರದೋ ಕಾರಿನಲ್ಲಿ ಓಡಾಡುತ್ತಿದ್ದರು. ನಾವು ರಾಜೀನಾಮೆ ಕೊಟ್ಟಿದ್ದರಿಂದ ಅವರಿಗೆ ವಿಪಕ್ಷ ನಾಯಕ ಸ್ಥಾನ ಸಿಕ್ಕಿದೆ, ಸ್ವಂತ ಕಾರು ಬಿಟ್ಟು ಸರ್ಕಾರಿ ಕಾರಿನಲ್ಲಿ ಓಡಾಡುತ್ತಿದ್ದಾರೆ ಎಂದು ಹೇಳಿದರು.
ಅನೇಕ ವರ್ಷಗಳಿಂದ ನಾವು ಸಿದ್ದರಾಮಯ್ಯ ಪಕ್ಷ ಸಂಘಟನೆಯಲ್ಲಿ ಒಂದಾಗಿದ್ದೇವು, ಆದರೆ ನಮಗೆ ಅಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದರಿಂದ ಕಾಂಗ್ರೆಸ್ ಪಕ್ಷ ಬಿಟ್ಟು ಬಂದಿದ್ದೇವೆ. ಸಿದ್ದರಾಮಯ್ಯನವರ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವ ಇದೆ. ನಾವು ಅವರಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ ಎಂದರು.

ಒಂದು ಕಾಲದಲ್ಲಿ ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದಾಗ ದೇವೇಗೌಡರು ಅವರು ಒಂದಾಗಿದ್ದರು, ಅಲ್ಲಿಂದ ಹೊರ ಬಂದ ಮೇಲೆ ಅವರ ವಿರುದ್ಧವೇ ತೊಡೆತಟ್ಟಿದ್ದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು. ನಾವು ಸಿದ್ದರಾಮಯ್ಯನವರಿಗೆ ಒಳ್ಳೆಯದನ್ನೇ ಮಾಡಿದ್ದೇವೆ ಅವರು ನಮ್ಮನ್ನು ನೆನೆಸಿಕೊಳ್ಳಬೇಕು ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರದು ದೊಡ್ಡ ಗುಣ. ನಮ್ಮ ಮೇಲೆ ಅವರಿಗೆ ಪ್ರೀತಿ ಇದೆ. ನಮ್ಮನ್ನು ಅವರು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ನಮ್ಮ ಕ್ಷೇತ್ರದ ಅಭಿವೃದ್ದಿಗಾಗಿ ಈಗಾಗಲೇ ೨೫೦ ಕೋಟಿ ರೂ,ಗಳನ್ನು ನೀಡಿದ್ದಾರೆ, ಅಷ್ಟೇ ಅಲ್ಲದೇ ಇನ್ನೂ ಅನೇಕ ಬೇಡಿಕೆಗೆಗಳನ್ನು ಅವರು ಹಿಡೇರಿಸುತ್ತೇನೆ ಎಂದಿದ್ದಾರೆ.
ನಮ್ಮ ತಾಲ್ಲೂಕಿಗೆ 30 ವರ್ಷಗಳಿಂದ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ, ಈಗ ನಾನು ಚುನಾವಣೆಯಲ್ಲಿ ಗೆದ್ದರೆ ಮಂತ್ರಿ ಸ್ಥಾನ ಕೊಡುತ್ತೇನೆಂದು ಹೇಳಿದ್ದಾರೆ. ಅವರದು ಕೊಡುಗೈ ದಾನಿ ಮನಸ್ಸು ಹೀಗಾಗಿ ಅವರ ಜೊತೆಗೆ ಹೋಗಿದ್ದೇವೆ ಎಂದರು.
ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಡಿಸೆಂಬರ್ 05 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications