ಶರತ್ ಬಚ್ಚೇಗೌಡ ನಂತರ ಬಿಜೆಪಿಗೆ ಮತ್ತೊಂದು ಆಘಾತ: ಸೋಮಣ್ಣ ಕಾಂಗ್ರೆಸ್ಸಿಗೆ?
ಬೆಂಗಳೂರು, ಅ 14: ಹೊಸಕೋಟೆ ಕ್ಷೇತ್ರದ ಯುವ ಶಾಸಕ ಶರತ್ ಬಚ್ಚೇಗೌಡ, ಕಾಂಗ್ರೆಸ್ಸಿಗೆ ಸೇರುವ ಸುದ್ದಿ ಖಚಿತವಾಗುತ್ತಿದ್ದಂತೆಯೇ, ಬಿಜೆಪಿಗೆ ಇನ್ನೊಂದು ಆಘಾತ ಎದುರಾಗಿದೆ. ಪಕ್ಷದ ಮುಖಂಡ ಸೋಮಣ್ಣ ಬೇವಿನಮರದ ಕಾಂಗ್ರೆಸ್ ಬಾಗಿಲು ಬಡಿಯುತ್ತಿದ್ದಾರೆ.
ಒಂದು ದಿನದ ಹಿಂದೆ, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಜೊತೆಗೆ, ಸೋಮಣ್ಣ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ, ಪಕ್ಷ ಸೇರುವ ಇಂಗಿತ ವ್ಯಕ್ತ ಪಡಿಸಿದ್ದರು.
ವಿಧಾನ ಪರಿಷತ್ ಸದಸ್ಯರಾಗಿರುವ ಸೋಮಣ್ಣ ಬೇವಿನಮರದ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಶಿಗ್ಗಾಂವ್ -ಸವಣೂರು ಕ್ಷೇತ್ರದ ಬಿಜೆಪಿ ಟಿಕೆಟ್ ಬಯಸಿದ್ದರು. ಆದರೆ, ಯಡಿಯೂರಪ್ಪ, ತಮ್ಮಾಪ್ತ ಬಸವರಾಜ ಬೊಮ್ಮಾಯಿಗೆ ಅಲ್ಲಿಂದ ಟಿಕೆಟ್ ನೀಡಿದ್ದರು.

ಅಲ್ಲಿಂದ, ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಸೋಮಣ್ಣ, ಮತ್ತೆ ರಾಜಕೀಯ ನೆಲೆ ಕಾಣಲು ಮತ್ತು ಮುಂಬರುವ ಚುನಾವಣೆಗೆ ಶಿಗ್ಗಾಂವ್ ನಿಂದ ಟಿಕೆಟ್ ಬಯಸಿ, ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆಂದು ಹೇಳಲಾಗುತ್ತಿದೆ.
"ಹಿರಿಯ ಮುಖಂಡರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಕರೆಯ ಮೇರೆಗೆ, ಕೋಳಿವಾಡ ಅವರ ಜೊತೆಗೆ ಬಂದು ಮಾತುಕತೆ ನಡೆಸಿದ್ದೇನೆ. ನಾನಿನ್ನೂ ಕಾಂಗ್ರೆಸ್ಸಿಗೆ ಸೇರಿಲ್ಲ. ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರು ಏನು ಬಯಸುತ್ತಾರೋ ಅದನ್ನು ಮಾಡುತ್ತೇನೆ"ಎಂದು ಸೋಮಣ್ಣ ಬೇವಿನಮರದ ಹೇಳಿದ್ದಾರೆ.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೋಮಣ್ಣ ಬೇವಿನಮರದ 7,203 ಮತಗಳನ್ನು ಪಡೆದಿದ್ದರು. "ಚುನಾವಣೆಯಲ್ಲಿ ನನಗೆ ನನ್ನ ಮತ್ತು ನನ್ನ ಪತ್ನಿಯ ಮತಗಳು ಬಿದ್ದರೆ ಸಾಕು"ಎಂದು ಸೋಮಣ್ಣ ಹೇಳಿದ್ದರು.












Click it and Unblock the Notifications