ನಾನೂ ಬಂಕಾಪೂರದಲ್ಲಿ ಬಾಳು ಮಾಮಾನ ಕುರಿ ಕಾಯ್ದಿದ್ದೇನೆ: ಬಸವರಾಜ ಬೊಮ್ಮಾಯಿ
ಹಾವೇರಿ, ಅ. 25: ಉಪ ಚುನಾವಣೆ ಪ್ರಚಾರದ ಭರಾಟೆ ಮತ್ತಷ್ಟು ಜೋರಾಗುತ್ತಿದೆ. ಮಾಜಿ ಸಿಎಂ ಹಾಗೂ ಹಾಲಿ ಸಿಎಂ ಮಧ್ಯದ ವಾಕ್ಸಮರ ಮುದುವರೆದಿದೆ. ಸಿಂದಗಿಯಿಂದ ಹಾನಗಲ್‌ಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಮಾತಿನ ಮೂಲಕ ತಿರುಗೇಟು ಕೊಟ್ಟಿದ್ದಾರೆ.
ಕಂಬಳಿ ಮತ್ತು ಹಾಲುಮತದ ಕುರಿತ ವಾಕ್ಸಮರಕ್ಕೆ ಸಂಬಂಧಿಸಿದಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ನಾನು ಕೂಡ ಬಂಕಾಪುರದಲ್ಲಿ ಮಹಾರಾಷ್ಟ್ರದ ಬಾಳು ಮಾಮನ ಕುರಿ ಕಾದಿದ್ದೇನೆ" ಎಂದು ಸೋಮವಾರ ಮತ್ತೆ ಸಿದ್ದರಾಮಯ್ಯರಿಗೆ ತಿರುಗೇಟು ನೀಡಿದ್ದಾರೆ.
ಹಾನಗಲ್ಲ ವಿಧಾನಸಭಾ ಕ್ಷೇತ್ರದ ಯಳವಟ್ಟಿ ಗ್ರಾಮದಲ್ಲಿ ಬೈಟ್ ರ್‍ಯಾಲಿ ಮತ್ತು ರೋಡ್ ಶೋ ನಡೆಸಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಚಾರ ಭಾಷಣ ಮಾಡಿದ್ದಾರೆ.

ಹಾಲುಮತದ ಸಮುದಾಯಕ್ಕೆ ಯಾರ ಕೊಡುಗೆ ಎಷ್ಟು?
'ನಾನು ಹಾಲುಮತ ಸಮುದಾಯದಲ್ಲಿ ಹುಟ್ಟಿದ್ದೇನೆ. ಆದರೆ ಬಸವರಾಜ ಬೊಮ್ಮಾಯಿ ಅವರು ಹಾಲುಮತದವರಾ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ಆದರೆ ಯಾರಾದರೂ ಅರ್ಜಿ ಹಾಕಿ ಹುಟ್ಟುತ್ತಾರಾ?' ಎಂದು ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯರಿಗೆ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಹಾಲುಮತದ ಸಮುದಾಯಕ್ಕೆ ಯಾರ ಕೊಡುಗೆ ಎಷ್ಟು? ಹಾಲುಮತದ ಸಮುದಾಯದವರ ಅಭಿವೃದ್ಧಿಗೆ ಯಾರು ಶ್ರಮಿಸಿದ್ದಾರೆ ಎಂಬುದು ಮುಖ್ಯ. ನನ್ನ ಕ್ಷೇತ್ರದ ಬಾಡ ಗ್ರಾಮವನ್ನು ನಾನು ಅಭಿವೃದ್ಧಿ ಪಡಿಸಿದ್ದೇನೆ. ಕನಕದಾಸರ ಸ್ಮರಣೆ ಸದಾ ಮಾಡುತ್ತೇನೆ. ಪ್ರಾಧಿಕಾರ ರಚನೆಯ ಮೂಲಕ ಯಡಿಯೂರಪ್ಪ ಅವರು ಆರ್ಥಿಕ ನೆರವು ನೀಡಿದ್ದಾರೆ. ಹೀಗಾಗಿ ಈ ಸಮುದಾಯಕ್ಕೆ ಯಾರು ಎಷ್ಟು ಕೊಡುಗೆ ನೀಡಿದ್ದಾರೆ ಎಂಬುದನ್ನು ಜನ ಅರಿತುಕೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕಳೆದ 8 ತಿಂಗಳಿಂದ ಉಚಿತ ರೇಷನ್ ಕೊಟ್ಟಿದ್ದೇವೆ!
ಕೋವಿಡ್ ಸಂದರ್ಭದಲ್ಲಿ ಹಾನಗಲ್ ತಾಲ್ಲೂಕಿನಲ್ಲಿ 12 ಸಾವಿರ ಕಾರ್ಮಿಕರಿಗೆ ಕಿಟ್ ಕೊಡಲಾಗಿದೆ. ತಾಲ್ಲೂಕಿನಲ್ಲಿ ಅತಿ ಹೆಚ್ಚು ಲಸಿಕೆಯನ್ನು ಹಾಕಲಾಗಿದೆ. ಪ್ರಧಾನಿ ಮೋದಿಜೀಯವರ ನೇತೃತ್ವದಲ್ಲಿ 8 ತಿಂಗಳಿಂದ ಉಚಿತ ರೇಷನ್, ಉಚಿತ ಲಸಿಕೆ ದೇಶದ ನಾಗರಿಕರಿಗೆ ನೀಡಲಾಗಿದೆ. ಹೂ ಹಣ್ಣು ಮಾರಾಟಗಾರರಿಗೆ, ರೈತರಿಗೆ, ಟ್ಯಾಕ್ಸಿ, ರಿಕ್ಷಾ ಚಾಲಕರಿಗೆ ಪರಿಹಾರಧನ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ಸಿಎಂ ಸವಾಲು!
ಕಾಂಗ್ರೆಸ್ ಅವರು ಹಾನಗಲ್ ತಾಲ್ಲೂಕು ಅಭಿವೃದ್ಧಿ ಬಗ್ಗೆ ಮಾತನಾಡದೇ ಜಾತಿಗಳ ನಡುವೆ ಜಗಳ ಹಚ್ಚಿ ತಮ್ಮ ಕಾರ್ಯಸಾಧನೆಗೆ ನಿಲ್ಲುತ್ತಾರೆ. ಚುನಾವಣೆಯಲ್ಲಿ ಗೆಲವು ಸಿಗಲಿದೆ ಎನ್ನುವ ಭ್ರಮೆ ಕಾಂಗ್ರೆಸ್ ಅವರದು. ನೈತಿಕತೆ ಇಲ್ಲದ, ಅಶಿಕ್ಷಿತ ಚಿಂತನೆಗಳನ್ನೇ ಹೊಂದಿರುವ ಕಾಂಗ್ರೆಸ್‌ನವರ ಯಾವುದೇ ಆಮಿಷಗಳಿಗೆ ಯುವಕರು ಬಲಿಯಾಗುವುದಿಲ್ಲ. ಯುವಕರು ಸ್ವಾಭಿಮಾನಿಗಳಾಗಿದ್ದಾರೆ. ಮಾತನಾಡುವುದಿದ್ದರೆ ಹಾನಗಲ್ ತಾಲೂಕಿನ ಅಭಿವೃದ್ಧಿ ಬಗ್ಗೆ ಮಾತನಾಡಿದು ಎಂದು ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸವಾಲು ಹಾಕಿದ್ದಾರೆ.

ಕ್ಷೇತ್ರದಲ್ಲಿ ಯಡಿಯೂರಪ್ಪ ಪ್ರಭಾವವಿದೆ!
ಎಲ್ಲ ಸಮುದಾಯ ಹಾಗೂ ವರ್ಗಗಳ ಜನ ಇಂದು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದು, ಹಾನಗಲ್ ತಾಲೂಕಿನಲ್ಲಿ ಸಾಮಾಜಿಕ ಸಮೀಕರಣವಾಗಿದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಿ.ಜೆ.ಪಿ ಪರವಾಗಿ ಸಾಮಾಜಿಕ ಸಮೀಕರಣದ ಒಲವು ಕಾಣುತ್ತಿದೆ. ಶಿವರಾಜ ಸಜ್ಜನರ್ ಅವರು ದೊಡ್ಡ ಅಂತರದ ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭೇಟಿ ನೀಡಿದ ಸಂದರ್ಭದಲ್ಲಿಯೂ ಬಹಳ ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.












Click it and Unblock the Notifications