ಬಸವರಾಜ ಬೊಮ್ಮಾಯಿಗೆ ಟಿಕೆಟ್ ನೀಡದಂತೆ ಸ್ಥಳೀಯರ ಆಗ್ರಹ
ಹಾವೇರಿ, ಮಾರ್ಚ್ 30 : ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಬಂಡಾಯದ ಬಿಸಿ ತಟ್ಟುವ ಸಾಧ್ಯತೆ ಇದೆ. ಶಿಗ್ಗಾವಿ ಕ್ಷೇತ್ರದಲ್ಲಿ ಅವರಿಗೆ ಟಿಕೆಟ್ ನೀಡಬಾರದು, ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದ ಹಾಲಿ ಶಾಸಕರು ಬಸವರಾಜ ಬೊಮ್ಮಾಯಿ. ಕಳೆದ ಚುನಾವಣೆಯಲ್ಲಿ ಅವರು 73,007 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಹಾಲಿ ಶಾಸಕರಿಗೆಲ್ಲಾ ಟಿಕೆಟ್ ಖಚಿತ ಎಂದು ಪಕ್ಷ ಹೇಳುತ್ತಿದ್ದು, ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಬೇಕು.
ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ರಾಜಶೇಖರ ಸಿಂಧೂರ ಅವರು ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಬಾರದು. ಸ್ಥಳೀಯರಿಗೆ ಈ ಬಾರಿಯ ಚುನಾವಣೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.

'2008ರಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಏಕೈಕ ಕಾರಣಕ್ಕೆ ಬೊಮ್ಮಾಯಿ ಅವರ ಸ್ಪರ್ಧೆಗೆ ನಾವು ಒಪ್ಪಿಗೆ ನೀಡಿದ್ದೆವು. ಕೊಟ್ಟ ಮಾತಿನಂತೆ 2 ಬಾರಿ ಗೆಲ್ಲಿಸಿದ್ದೇವೆ' ಎಂದು ಹೇಳಿದ್ದಾರೆ.
'2008, 2013ರ ಬಳಿಕ ಕ್ಷೇತ್ರವನ್ನು ಬಿಟ್ಟುಕೊಡುವ ಭರವಸೆಯನ್ನು ಅವರು ನೀಡಿದ್ದರು. ಜನರಿಂದ ದೂರವಾಗಿರುವ ಮತ್ತು ಕೊಟ್ಟ ಮಾತು ತಪ್ಪಿರುವ ಬಸವರಾಜ ಬೊಮ್ಮಾಯಿ ಅವರನ್ನು ಬಿಟ್ಟು ಸ್ಥಳೀಯರಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡುತ್ತೇವೆ' ಎಂದು ಎಚ್ಚರಿಸಿದ್ದಾರೆ.
ಯಾರು ಟಿಕೆಟ್ ಆಕಾಂಕ್ಷಿಗಳು? : ಸೋಮಣ್ಣ ಬೇವಿನಮರದ, ರಾಜಶೇಖರ ಸಿಂಧೂರ, ಶ್ರೀಕಾಂತ ದುಂಡಿಗೌಡ್ರ, ಶಶಿಧರ ಯಲಿಗಾರ ಅವರು ಶಿಗ್ಗಾವಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ನಾಲ್ವರಲ್ಲಿ ಪಕ್ಷದ ಮುಖಂಡರು ಯಾರಿಗೆ ಟಿಕೆಟ್ ಕೊಟ್ಟರೂ ನಮಗೆ ಸಹಮತವಿದೆ. ಇಲ್ಲದೇ ಹೋದಲ್ಲಿ ಒಬ್ಬರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications