ಘೋಷಿತ ದಿನಾಂಕದಂದು 86 ನೇ ಅಖಿಲ ಭಾರತ ಕ.ಸಾ.ಸಮ್ಮೇಳನ ನಡೆಯೋದು ಅನುಮಾನ: ಮಹೇಶ್ ಜೋಶಿ
ಹಾವೇರಿ, ಅಕ್ಟೋಬರ್ 3: 'ಹಾವೇರಿಯಲ್ಲಿ ಘೋಷಿತ ದಿನಾಂಕದಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದು ಅನುಮಾನ' ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಅವರು ಬೇಸರ ಹೊರಹಾಕಿದ್ದಾರೆ.
ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನವೆಂಬರ್ 11,12 ಮತ್ತು 13 ರಂದು ಘೋಷಣೆಯಾಗಿದ್ದ ಸಾಹಿತ್ಯ ಸಮ್ಮೇಳನ ನಡೆಯುವುದು ಅನುಮಾನವಾಗಿದೆ. ಏಕೆಂದರೆ, ಸಮ್ಮೇಳನದ ಘೋಷಿತ ದಿನಾಂಕಕ್ಕೆ ಇನ್ನೂ ಒಂದು ತಿಂಗಳು ಏಳು ದಿನಗಳು ಮಾತ್ರ ಬಾಕಿ ಇದ್ದು, ಸಮ್ಮೇಳನದ ಪೂರ್ವದಲ್ಲಿ ಸಮ್ಮೇಳನದ ಲಾಂಛನ ಬಿಡುಗಡೆ ಆಗಬೇಕು ಅದು ಆಗಿಲ್ಲ. ಸ್ವಾಗತ ಸಮಿತಿ ಸೇರಿದಂತೆ ಇಪ್ಪತ್ತು ಸಮಿತಿಗಳು ರಚನೆ ಆಗಬೇಕು. ವಸತಿ ವ್ಯವಸ್ಥೆ, ಪ್ರತಿನಿಧಿಗಳ ನೋಂದಣಿ ಆಗಬೇಕು. ಆದರೆ ಈವರೆಗೆ ಯಾವುದೇ ಕೆಲಸವೂ ಆಗಿಲ್ಲ ಎಂದು ಡಾ.ಮಹೇಶ ಜೋಶಿ ಬೇಸರ ಹೊರಹಾಕಿದರು.
50 ರೈತರಿಗೆ ಇಸ್ರೇಲ್ ಪ್ರವಾಸ ಭಾಗ್ಯ ಕಲ್ಪಿಸಿದ ಮಾಜಿ MLC ರಘು ಆಚಾರ್
ಇನ್ನು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸ್ವಾಯತ್ತ ಸ್ವಾಭಿಮಾನದ ಸಂಸ್ಥೆಯಾಗಿದೆ. ಸಿಎಂ ಅವರ ಮನೆ ಕಾಯುವ ಅಧ್ಯಕ್ಷ ನಾನಾಗುವುದಿಲ್ಲ. ಸಿಎಂ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾದ ನಾನು ಹಾವೇರಿ ಜಿಲ್ಲೆಯವರು, ಸಮ್ಮೇಳನ ನಡೆಸುವ ಬಗ್ಗೆ ಸಾಕಷ್ಟು ಉತ್ಸುಕತೆ ಹೊಂದಿದ್ದೆ. ಆದರೆ ಮೊದಲು ಇದ್ದ ಉತ್ಸಾಹ ಈಗ ಕಡಿಮೆ ಆಗುತ್ತಿದೆ. ಏಕೆಂದರೆ ಹಜ್ಜೆ ಹೆಜ್ಜೆಗೂ ನಮಗೆ ಸಹಕಾರ ಸಿಗುತ್ತಿಲ್ಲ ಎಂದು ಸರಕಾರ ಮತ್ತು ಜಿಲ್ಲಾಡಳಿತದ ನಡೆ ಕುರಿತು ಕಸಾಪ ಅಧ್ಯಕ್ಷ ನಾಡೋಜಿ ಅವರು ಬೇಸರ ಹೊರಹಾಕಿದರು.
ಇನ್ನು ಹಾವೇರಿಯಲ್ಲಿ ಎಷ್ಟು ಬೇಗ ಅಗುತ್ತದೋ ಅಷ್ಟು ಬೇಗ ಸಮ್ಮೇಳನ ಮಾಡಿ ಎನ್ನುವುದು ಕಸಾಪ ನಿಲುವು ಆಗಿದೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ನಾನು ಸಮ್ಮೇಳನ ಯಾವಾಗ ಎನ್ನುವುದನ್ನು ನಿಶ್ಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ, ಇದು ನನ್ನ ದೌರ್ಭಾಗ್ಯ. ಸಮ್ಮೇಳನ ವಿಚಾರದಲ್ಲಿ ಈವರೆಗೆ ಸಾಕಷ್ಟು ಕಾಗದಗಳನ್ನು ಸರಕಾರಕ್ಕೆ ಬರೆದಿರುವೆ. ಕಾಗದಗಳನ್ನು ಬರೆದರೆ ಯಾರೋ ಒಬ್ಬ ಅಂಡರ್ ಸೆಕ್ರೇಟರಿ ಉತ್ತರ ಕೊಡುತ್ತಾನೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಕಸಾಪ ಕಡೆಗಣಿಸಲಾಗಿದೆ. ಈ ರೀತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗಾದರೆ ಬಹಳ ಬೇಸರ ಆಗುತ್ತಿದೆ ಎಂದರು.
ಇನ್ನು ಸಮ್ಮೇಳನಕ್ಕೆ ಬಜೆಟ್‌ನಲ್ಲಿ ಇಪ್ಪತ್ತು ಕೋಟಿ ಕೊಟ್ಟಿದ್ದೇವೆ ಎಂದರು. ಇವತ್ತಿನವರೆಗೂ ಜಿಲ್ಲಾಡಳಿತಕ್ಕೆ ಒಂದು ಪೈಸೆಯೂ ಬಂದಿಲ್ಲ. ಸಿಎಂ ನಿಗದಿತ ದಿನಾಂಕಕ್ಕೆ ಸಮ್ಮೇಳನ ಮಾಡುತ್ತೀವಿ ಎನ್ನುತ್ತಾರೆ, ಜಿಲ್ಲಾ ಉಸ್ತುವಾರಿ ಸಚಿವರು ಸಮ್ಮೇಳನದ ದಿನಾಂಕ ಮುಂದೂಡುತ್ತೀವಿ ಎನ್ನುತ್ತಾರೆ. ಸಮ್ಮೇಳನಕ್ಕೆ ಗುರುತಿಸಿದ ಸ್ಥಳ ಕೋರ್ಟಿನಲ್ಲಿದೆ ಎನ್ನುತ್ತಾರೆ. ನಾನು ಸಿಎಂ ಅವರಿಗೆ ಹೇಳಿದೆ, ಯಾರಾದರೂ ಒಬ್ಬ ಅಧಿಕಾರಿ ಅಥವಾ ಮಂತ್ರಿ ನೇಮಕ ಮಾಡುವಂತೆ. ಆದರೆ ಹೇಳಿದೆ ಯಾವ ಕೆಲಸವೂ ಆಗಿಲ್ಲ ಎಂದು ಮಹೇಶ್ ಜೋಶಿ ಬೇಸರ ವ್ಯಕ್ತಪಡಿಸಿದರು.
ಸರಕಾರವೇ ನಿರ್ಧರಿಸಿದರೆ ಸಮ್ಮೇಳನಕ್ಕೆ ಹೋಗಲ್ಲ
ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತೆಗಳು ಇನ್ನೂ ಆರಂಭಗೊಂಡಿಲ್ಲ. ಕಸಾಪ ಎಂದರೆ ಕನ್ನಡಿರ ಸ್ವಾಭಿಮಾನದ ಸಂಕೇತ. ಸರಕಾರ ಇಂತಹ ಸಂಸ್ಥೆಯನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022 ಜಾರಿ ಪ್ರಾಧಿಕಾರದ ರಾಜ್ಯ ಮಟ್ಟದ ಸಮಿತಿಯಲ್ಲಿ ಕೈ ಬಿಟ್ಟಿದೆ.
ಅಧಿಕಾರಶಾಹಿಗಳು ಕೂಡ ಕಸಾಪದೊಂದಿಗೆ ಆಟ ಆಡುತ್ತಿದ್ದಾರೆ. ಇದೆಲ್ಲವನ್ನೂ ನಿಲ್ಲಿಸಬೇಕು. ಇದು ಹೀಗೆಯೇ ಮುಂದುವರಿದರೆ ಅಥವಾ ಸಚಿವರು, ಸಿಎಂ ಸ್ವತಃ ಅವರ ಪಾಡಿಗೆ ಅವರು ನಿರ್ಧಾರಗಳನ್ನು ತೆಗೆದುಕೊಂಡು ಅವರೇ ಸಮ್ಮೇಳನ ನಡೆಸಿದರೆ, ನಾನೂ ಸಮ್ಮೇಳನಕ್ಕೆ ಹೋಗದಿರಲು ತೀರ್ಮಾನಿಸಬೇಕಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿದ್ದಾರೆ.