ಡಿಕೆ ಶಿವಕುಮಾರ್ ಸಿಎಂ ಆದ್ರೆ ನನಗ್ಯಾಕೆ ನಿರಾಸೆ: ಹೆಚ್.ಡಿ. ಕುಮಾರಸ್ವಾಮಿ
ಹಾಸನ, ಆಗಸ್ಟ್ 21: ಸಿದ್ದರಾಮೋತ್ಸವ ಕಾರ್ಯಕ್ರಮದ ನಂತರ ಎರಡು ಪಕ್ಷಗಳು ಹತಾಷರಾಗಿವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದರು. ಇದಕ್ಕೆ ಹರದನಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ ಇಂತಹ ಸಿದ್ದರಾಮೋತ್ಸವಗಳು ರಾಜ್ಯದಲ್ಲಿ ಎಷ್ಟು ನಡೆದಿಲ್ಲ. ನಾವು ಕಾಣದೆ ಇರುವ ಸಿದ್ದರಾಮೋತ್ಸವನಾ? ಎಂತೆಂಥಾ ಸಮಾವೇಶಗಳನ್ನು ಎಷ್ಟು ಪಕ್ಷಗಳು ಮಾಡಿಲ್ಲ ಹೇಳಿ ಎಂದು ಕುಟುಕಿದರು.
ಸುಮ್ಮನೆ ಅವರ ಚಪಲಕ್ಕೆ ಹೀಗೆ ಹೇಳಿಕೊಳ್ಳುತ್ತಾರೆ ಅಷ್ಟೇ. ಇಂತಹ ಉತ್ಸವಗಳಿಂದ ಜನ ವೋಟು ಹಾಕುತ್ತಾರೆ ಎಂದು ತಿಳಿದೊಕೊಂಡಿದ್ದಾರೆ. ಅವರು ಭ್ರಮೆ ಲೋಕದಲ್ಲಿ ಇದ್ದಾರೆ ಎಂದು ಪ್ರತಿಕ್ರಿಯಿಸಿದರು.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆದರೆ ಸಹಕಾರ ನೀಡುತ್ತೇನೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ನಂಜಾವಧೂತ ಸ್ವಾಮೀಗಳು ಏನು ಹೇಳಿದ್ದಾರೆ ಅದಕ್ಕೆ ಹಿನ್ನೆಲೆಯಾಗಿ ಹೇಳಿದ್ದೇನೆ. ಯಾರು ಬೇಕಾದರೂ ಅವರು ಮುಖ್ಯಮಂತ್ರಿ ಆಗಬೇಕಾದರೆ ಭಗವಂತನ ಆಶೀರ್ವಾದ ಬೇಕು. ಆ ಭಗವಂತ ಆಶೀರ್ವಾದ ಕೊಟ್ಟಾಗ ಮಾತ್ರ ನಮ್ಮದು ಸಹಕಾರ ಇರುತ್ತದೆ ಎಂದರು.
ನಮ್ಮ ಪಕ್ಷವನ್ನು ನಾನು ಸಂಘಟನೆ ಮಾಡುತ್ತಿದ್ದೇನೆ, ಹಾಗೆಯೇ ಅವರ ಪಕ್ಷವನ್ನು ಅವರು ಸಂಘಟನೆ ಮಾಡುತ್ತಿದ್ದಾರೆ. ನಮ್ಮ ನಂಜಾವಧೂತ ಸ್ವಾಮಿಗಳು ಮುಖ್ಯಮಂತ್ರಿ ಸ್ಥಾನ ಬಲಕ್ಕೆ ಅಥವಾ ಎಡಕ್ಕೆ ಸಿಕ್ಕರು ಪರ್ವಾಗಿಲ್ಲ ಎಂದು ಹೇಳಿದ್ದಾರೆ. ದೇವರ ಇಚ್ಛೆ ಏನು ಇದಿಯೋ ಅದೇ ಆಗುತ್ತದೆ ಎಂದರು.

ಡಿಕೆಶಿ ಅವರ ಆಸೆಗೆ ನಿರಾಸೆ ತರುವುದಿಲ್ಲ
ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕೆಂದು ಹೋರಾಟ ಮಾಡುತ್ತಿದ್ದೇನೆ. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂಬ ಆಸೆಗೆ ನಾನೇಕೆ ನಿರಾಸೆ ತರಬೇಕು ಎಂದರು. ಆಗಸ್ಟ್ 26ರಂದು ಕಾಂಗ್ರೆಸ್‌ನವರು ಪಾದಯಾತ್ರೆಯ ಬಗ್ಗೆ ಮಾತನಾಡಿದ ಅವರು, ಅದರ ಬಗ್ಗೆ ನಾನು ಮಹತ್ವ ಕೊಡುವುದಿಲ್ಲ. ಅದೇನು ಜನತೆಯ ಹಿತಕ್ಕಾಗಿ ಮಾಡುತ್ತಿರುವ ಪಾದಯಾತ್ರೆಯಲ್ಲ. ಅದಕ್ಕೆ ಜನ ಯಾವುದೇ ರೀತಿಯ ಪ್ರೋತ್ಸಾಹ ಕೊಡದೇ ಇರುವುದು ಒಳ್ಳೆಯದು ಎಂದು ಹೇಳಿದರು.
ಇವತ್ತು ನಮ್ಮ ದೇವರಾದ ದೇವಿರಮ್ಮ ದೇವರಿಗೆ ನನ್ನ ಮೊಮ್ಮಗನ ಮುಡಿ ಕೊಡಲು ಬಂದಿದ್ದೇನೆ. ನಮ್ಮ ತಂದೆಯವರಿಗೆ ರಕ್ಷಣೆ ಕೊಟ್ಟು ಅವರ ಬದುಕನ್ನು ಹಳ್ಳಿಯಿಂದ ದೆಹಲಿ ಮಟ್ಟಕ್ಕೆ ತೆಗೆದುಕೊಂಡು ಹೋದಂತಹ ಹರದನಹಳ್ಳಿಯ ಶಿವನ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ.

ಸಂಘರ್ಷ ಹುಟ್ಟುಹಾಕುವುದನ್ನು ತಡೆಯಬೇಕು
ಜಿಲ್ಲೆಯಲ್ಲಿ 2019ರಲ್ಲಿ ಮಳೆಯಿಂದ ಆದ ಅನಾಹುತಳಿಗೆ, ಬೆಳೆ ಹಾನಿಗೆ ಪರಿಹಾರ ಕೊಡದೆ ಸರ್ಕಾರ ಬರೀ ಘೋಷಣೆಯನ್ನಷ್ಟೇ ಮಾಡುತ್ತಿದೆ. ಹಲವಾರು ಕುಟುಂಬಗಳು ಈಗಲೂ ಶೆಡ್‌ನಲ್ಲೇ ವಾಸ ಮಾಡುತ್ತಿರುವುದನ್ನು ಗಮನಿಸಿದ್ದೇನೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಯಿಂದ ಮತ್ತು ಜಾಹೀರಾತುಗಳಲ್ಲಿ ಕೆಲವು ವ್ಯಕ್ತಿಗಳನ್ನು ಅವಹೇಳನ ಮಾಡಿಕೊಂಡು ಹೇಗೆ ವರ್ತಿಸಿದ್ದಾರೆಂಬುದು ಜನತೆಗೆ ಗೊತ್ತಿದೆ. ಕೆಲವರನ್ನು ಕ್ರೂಡಿಕರಿಸುವ ಮೂಲಕ ಎರಡು ರಾಷ್ಟ್ರೀಯ ಪಕ್ಷಗಳು ಸಾರ್ವಜನಿಕವಾಗಿ ಸಂಘರ್ಷದ ವಾತವಾರಣ ನಿರ್ಮಾಣ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್, ಬಿಜೆಪಿ ವಿರುದ್ಧ ಹೆಚ್‌ಡಿಕೆ ಕಿಡಿ
ರಾಜ್ಯದಲ್ಲಿ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನಿರುದ್ಯೋಗ, ಬಡತನ ರೈತರ ಸಂಕಷ್ಟಗಳಿಗೆ ಎರಡು ರಾಷ್ಟ್ರೀಯ ಪಕ್ಷಗಳು ಸ್ಪಂಧಿಸುತ್ತಿಲ್ಲ. ವಿಪಕ್ಷ ನಾಯಕರ ಮೇಲೆ ಮೊಟ್ಟೆ ಎಸೆದರು ಎಂದು ಅದಕ್ಕೊಂದು ಪಾದಯಾತ್ರೆ ಮಾಡಿದ್ದಾರೆ. ಅದರ ವಿರುದ್ಧವಾಗಿ ಇನ್ನೊಂದು ಪಾದಯಾತ್ರೆ ಮಾಡಿದರು. ಎರಡು ರಾಷ್ಟ್ರೀಯ ಪಕ್ಷಗಳ ಬೇಜಬ್ದಾರಿ ನಡವಳಿಕೆಯಿಂದ ರಾಜ್ಯದ ಜನರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಎರಡು ಪಕ್ಷಗಳಿಗೆ ಭಗವಂತನೆ ಜ್ಞಾನೋದಯ ಮಾಡಿಸಬೇಕೆಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದರು.

ಜನರಿಗೆ ಹೆಚ್.ಡಿ.ಕುಮಾರಸ್ವಾಮಿ ಕಿವಿಮಾತು
ಎರಡು ರಾಷ್ಟ್ರೀಯ ಪಕ್ಷಗಳಿಗೆ ಸಂಘರ್ಷಗಳನ್ನು ಹುಟ್ಟುಹಾಕುವುದೇ ಪ್ರಮುಖವಾದ ಸುದ್ದಿ ಆಗಿದೆ. ಸಮಾಜದ ಸಾಮರಸ್ಯವನ್ನು ಹಾಳು ಮಾಡುವುದರಲ್ಲಿ ಒಬ್ಬರಿಗಿಂತ ಒಬ್ಬರು ಮೇಲಾಗಿದ್ದಾರೆ. ಇದಕ್ಕೆ ಜನರು ಸರಿಯಾದ ನಿರ್ಧಾರ ಮಾಡಬೇಕು. ಅಗಸ್ಟ್ 26ಕ್ಕೆ ಮಡಿಕೇರಿ ಚಲೋ ಬಗ್ಗೆ ಜನರೇ ಯೋಚನೆ ಮಾಡಿ ನಿರ್ಧಾರ ಮಾಡಲಿ ಎಂದು ಕಿಡಿಕಾರಿದರು.
ಮಾಂಸಹಾರ ಸೇವಿಸಿ ಸಿದ್ದರಾಮಯ್ಯನವರು ಕೊಡಗಿನ ದೇಗುಲಕ್ಕೆ ಭೇಟಿ ನೀಡಿದ್ದ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಆಹಾರ ಪದ್ಧತಿಗಳು, ನಮ್ಮ ನಡವಳಿಕೆಗಳನ್ನು ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗುವಂತೆ ಅವಕಾಶ ಮಾಡಿಕೊಡದಿರುವುದು ಒಳ್ಳೆಯದು. ಸಾರ್ವಜನಿಕವಾಗಿ ತಮ್ಮ ಬದುಕಿನ ಬಗ್ಗೆ ಹೇಳುವುದರ ಮೂಲಕ ಸಂಘರ್ಷ ಉಂಟುಮಾಡಬಾರದು ಎಂದು ಸಲಹೆ ನೀಡಿದರು.












Click it and Unblock the Notifications