ರೈಲಿನಲ್ಲಿ ಕಳ್ಳತನ: ಹಾಸನದಲ್ಲಿ ಸಹಾಯಕ ಲೋಕೋ ಪೈಲಟ್ ಬಂಧನ
ಹಾಸನ ಜನವರಿ 30: ಸಾಮಾನ್ಯವಾಗಿ ಕಳ್ಳರು ಕಳ್ಳತನ ಮಾಡ್ತಾರೆ. ಹಾಗಂತ ಕಳ್ಳರಿಗೆ ಕಳ್ಳತನವೊಂದೇ ಕೆಲಸ ಎಂದು ಅಂದುಕೊಳ್ಳಬೇಡಿ. ಕಳ್ಳರು ಉದ್ಯೋಗದ ಸ್ಥಳದಲ್ಲೂ ಇರಬಹುದು. ಉದ್ಯೋಗಸ್ಥರು, ವಿದ್ಯಾವಂತರು ಕಳ್ಳತನ ಮಾಡಲ್ಲ ಎಂದೇನಲ್ಲ.
ಹೌದು.. ರೈಲಿನಲ್ಲಿ ಸಹಾಯಕ ಲೋಕೋ ಪೈಲಟ್ ಕಳ್ಳತನ ಮಾಡಿರುವುದು ಹಾಸನ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಲೊಕೊ ಪೈಲಟ್ ಸ್ವರಾಜ್ ಎಂದು ಗುರುತಿಸಲಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಗೆ ರೈಲುಗಳಲ್ಲಿ ಕಳ್ಳತನ ಪ್ರಕರಣದ ದೂರುಗಳು ಹೆಚ್ಚಾಗಿ ಬಂದಿದ್ದವು. ಕಳ್ಳನ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಹಾಯಕ ಲೋಕೋ ಪೈಲಟ್ ಒಬ್ಬರ ಮೇಲೆ ಅನುಮಾನ ಬಂದಿದೆ. ಸಂಪೂರ್ಣ ತನಿಖೆಯ ನಂತರ ನೈಋತ್ಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕ ಲೋಕೋ ಪೈಲಟ್ ಸ್ವರಾಜ್ ಅನ್ನು ಬಂಧಿಸುವ ಮೂಲಕ ಪೊಲೀಸರು ಕನಿಷ್ಠ ಐದು ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆ ವೇಳೆ ಆರೋಪಿ ತಾನು ಸಾಲ ಮಾಡಿದ್ದು, ಅದನ್ನು ತೀರಿಸಲು ಸಾಧ್ಯವಾಗದೇ ಇದ್ದಾಗ ಪ್ರಯಾಣಿಕರಿಂದ ವಸ್ತುಗಳನ್ನು ಕದಿಯಲು ಆರಂಭಿಸಿದ್ದೆ ಎಂದು ಹೇಳಿಕೊಂಡಿದ್ದಾನೆ.
ಅರಸೀಕೆರೆ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಕನಿಷ್ಠ ಐದು ಕಳ್ಳತನ ಪ್ರಕರಣಗಳು ದಾಖಲಾಗಿವೆ. ರೈಲಿನಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಹೆಚ್ಚಿದ್ದರೂ ಆರೋಪಿಗಳನ್ನು ಹಿಡಿಯಲು ಸಾಧ್ಯವಾಗದೇ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.
ಆದರೆ ನೈರುತ್ಯ ರೈಲ್ವೆಯೊಂದಿಗೆ ಕೆಲಸ ಮಾಡುತ್ತಿರುವ ಮೈಸೂರು ವಿಭಾಗದ ಸಹಾಯಕ ಲೋಕೋ ಪೈಲಟ್‌ನ ಟ್ರಾಲಿಯು ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿತು.
ಲೊಕೊ ಪೈಲಟ್ ಪುಡಿ ಸ್ವರಾಜ್ ಕರ್ತವ್ಯದಲ್ಲಿದ್ದಾಗ ಏಕಾಏಕಿ ಟ್ರಾಲಿ ಬಳಸಲು ಆರಂಭಿಸಿದ್ದರಿಂದ ಪೊಲೀಸರಿಗೆ ಅನುಮಾನ ಬಂದಿತ್ತು. ಅನುಮಾನದ ಮೇರೆಗೆ ಪೊಲೀಸರು ಆತನ ಟ್ರಾಲಿಯನ್ನು ಪರಿಶೀಲಿಸಿದಾಗ ಚಿನ್ನಾಭರಣಗಳು ಪತ್ತೆಯಾಗಿವೆ.
ವಿಚಾರಣೆ ನಡೆಸಿದಾಗ ಚಿನ್ನಾಭರಣ ತನ್ನ ಪತ್ನಿಯದ್ದು ಎಂದು ಹೇಳಿದ್ದಾನೆ. ಆತನ ಉತ್ತರದಿಂದ ಪೊಲೀಸರು ತೃಪ್ತರಾಗದ ಕಾರಣ ಲೋಕೋ ಪೈಲಟ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ.
ವಿಚಾರಣೆ ವೇಳೆ ಪುಡಿ ಸ್ವರಾಜ್, 13 ಲಕ್ಷ ಸಾಲ ಹೊಂದಿದ್ದು, ಮರುಪಾವತಿಸಲು ಕಷ್ಟಪಡುತ್ತಿದ್ದೇನೆ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಇದಲ್ಲದೆ ಅವರು ಕಳೆದ ವರ್ಷ ವಿವಾಹವಾದರು. ಇದರಿಂದಾಗಿ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇತ್ತು. ಮನೆಯ ಜವಬ್ದಾರಿ ಹೋರಲು ಸಾಧ್ಯವಾಗಲಿಲ್ಲ. ಹಣದ ಅವಶ್ಯಕತೆ ಇದ್ದುದರಿಂದ ರೈಲಿನಲ್ಲಿದ್ದ ಪ್ರಯಾಣಿಕರ ಬೆಲೆಬಾಳುವ ವಸ್ತುಗಳನ್ನು ಕದಿಯಲು ಆರಂಭಿಸಿದ್ದ ಎಂದು ಆತ ಹೇಳಿಕೊಂಡಿದ್ದಾನೆ.
ಪರಿಶೀಲನೆ ವೇಳೆ ಪೊಲೀಸರು 3.33 ಲಕ್ಷ ಮೌಲ್ಯದ ವಸ್ತುಗಳನ್ನು ಪತ್ತೆ ಮಾಡಿದ್ದಾರೆ. ಆರೋಪಿಗಳು ಬೇರೆ ಕಡೆಗಳಲ್ಲಿ ವಸ್ತುಗಳನ್ನು ಬಚ್ಚಿಟ್ಟಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.











Click it and Unblock the Notifications