ಜೈನ ಸಂಪ್ರದಾಯದಂತೆ ಸರ್ಕಾರಿ ಗೌರವಗಳೊಂದಿಗೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಅಂತ್ಯಕ್ರಿಯೆ
ಹಾಸನ, ಮಾರ್ಚ್, 23: ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳ ಚಿತೆಗೆ ಅಗ್ನಿಸ್ಪರ್ಶ ಮಾಡಲಾಗಿದೆ. ಚಂದ್ರಗಿರಿ ಬೆಟ್ಟದ ತಪ್ಪಲಿನಲ್ಲಿ ಜೈನ ಸಂಪ್ರದಾಯದಂತೆ ಸೂರ್ಯಾಸ್ತಕ್ಕೂ ಮೊದಲು ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ.
ಜೈನ ಮಠದ ಸಾವಿರಾರು ಭಕ್ತಾದಿಗಳು ಚಾರೂಕೀರ್ತಿ ಭಟ್ಟಾರಕ ಮಹಾಸ್ವಾಮಿಗಳ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರವಣಬೆಳಗೊಳದ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (74) ಗುರುವಾರ ವಿಧಿವಶರಾಗಿದ್ದರು. ಬೆಳ್ಳೂರು ಕ್ರಾಸ್‌ನಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿದ್ದ ಸ್ವಾಮೀಜಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದರು.

ಇತಿಹಾಸ ತಜ್ಞರು, ತತ್ವ ಜ್ಞಾನಿಗಳು ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ನಮ್ಮನ್ನಗಲಿದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಪೂಜ್ಯರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಅಪಾರ ಸಂಖ್ಯೆಯ ಭಕ್ತರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದರು.

ಹಾಗೆಯೇ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರ ಅಂತ್ಯಸಂಸ್ಕಾರವನ್ನು ಜೈನ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಸಿಎಂ ತಿಳಿಸಿದ್ದರು.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ನಡೆದುಬಂದ ಹಾದಿ
ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು 1949ರ ಮೇ 3 ರಂದು ಕಾರ್ಕಳ ತಾಲೂಕಿನ ವರಂಗದಲ್ಲಿ ಜನಿಸಿದ್ದರು. 20ನೇ ವಯಸ್ಸಿನಲ್ಲೇ ಅಂದರೆ 1970ರಲ್ಲಿ ಧರ್ಮಾಚಾರ್ಯ ಪೀಠವನ್ನು ಅಲಂಕರಿಸಿದ್ದರು. ಶ್ರೀಗಳ ಪೂರ್ವಾಶ್ರಮದ ಹೆಸರು ರತ್ನಾಕರ ಆಗಿದೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಮೈಸೂರು ವಿಶ್ವವಿದ್ಯಾಲಯದಿಂದ ಎಂಎ ಇತಿಹಾಸ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂಎ ತತ್ವಶಾಸ್ತ್ರ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದರು.
ಶ್ರೀಗಳು ಕನ್ನಡ, ಸಂಸ್ಕೃತ, ಮತ್ತು ಪ್ರಾಕೃತದಲ್ಲೂ ಸ್ನಾತಕೋತ್ತರ ಪದವಿ ಪಡೆದಿದ್ದರು. ಶ್ರವಣಬೆಳಗೊಳದಲ್ಲಿ ಇದ್ದುಕೊಂಡೇ ಮಠದ ಸಮಸ್ತ ಕಾರ್ಯನಿರ್ವಹಣೆಯೊಂದಿಗೆ ಗೊಮ್ಮಟೇಶ್ವರ ಮೂರ್ತಿಯ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನಡೆಸುತ್ತಿದ್ದರು. 1981ರಲ್ಲಿ ಗೊಮ್ಮಟೇಶ್ವರ ಸಹಸ್ರಾಬ್ಧಿ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನಡೆಸಿದ್ದರು. ಅಂದಿನ ಪ್ರಧಾನಿ ಇಂದಿಗಾರಾಂಧಿ ಶ್ರೀಗಳಿಗೆ ಕರ್ಮಯೋಗಿ ಎಂಬ ಬಿರುದು ನೀಡಿ ಗೌರವಿಸಿದ್ದರು.
ಇನ್ನು 1981, 1993, 2006, 2018ರಲ್ಲಿ ಸಹ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನಡೆಸಿದ್ದರು. ಸ್ವಾಮೀಜಿಗಳು 40ಕ್ಕೂ ಹೆಚ್ಚು ಜಿನಾಲಯಗಳನ್ನೂ ಜೀರ್ಣೋದ್ಧಾರ ಮಾಡಿದ್ದಾರೆ. ಶ್ರವಣಬೆಳಗೊಳದ ಸುತ್ತಲಿನ 10ಕ್ಕೂ ಹೆಚ್ಚು ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದರು. ಶಿಕ್ಷಣ ಸಂಸ್ಥೆಗಳನ್ನೂ ಸಹ ಮಠದಿಂದ ಸ್ಥಾಪಿಸಿದ್ದರು.
ಪ್ರಾಕೃತ ಭಾಷೆಯ ಅಭಿವೃದ್ಧಿಗೆ ಬೆಂಗಳೂರಿನಲ್ಲಿ ಪ್ರಾಕೃತ ಜ್ಞಾನ ಭಾರತ ಟ್ರಸ್ಟ್ ಅನ್ನು ಸ್ಥಾಪಿಸಿದ್ದರು. ಶ್ರವಣಬೆಳಗೊಳದಲ್ಲಿ ಸಂಚಾರಿ ಆಸ್ಪತ್ರೆ, ಆರ್ಯುವೇದಿಕ್ ಆಸ್ಪತ್ರೆ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ, ರಾಷ್ಟ್ರೀಯ ಪ್ರಾಕೃತ ಅಧ್ಯಯನ-ಸಂಶೋಧನಾ ಸಂಸ್ಥೆಯಲ್ಲಿ ತಾಳೆಗರಿಗಳನ್ನು ಸಂರಕ್ಷಿಸುವ ಹಾಗೂ ಪ್ರಾಕೃತ ಗ್ರಂಥಗಳ ಕನ್ನಡ ಅನುವಾದದ ವ್ಯವಸ್ಥೆಯನ್ನು ಸಹ ಜಾರಿಗೆ ತಂದಿದ್ದರು.












Click it and Unblock the Notifications