ರೈಲ್ವೆ ಸಾಧನೆ; ಹಾಸನದಿಂದ ಹೌರಾಕ್ಕೆ 17 ಟನ್ ಶುಂಠಿ ಸಾಗಣೆ
ಹಾಸನ, ಸೆಪ್ಟೆಂಬರ್ 04: ಕೃಷಿ ಉತ್ಪನ್ನಗಳನ್ನು ಸಾಗಣೆ ಮಾಡಲು ಭಾರತೀಯ ರೈಲ್ವೆ ಕೆಲವು ದಿನಗಳ ಹಿಂದೆ 'ಕಿಸಾನ್ ರೈಲು' ಓಡಿಸಿದೆ. ಕರ್ನಾಟಕದ ಹಾಸನದಿಂದ ಹೌರಾಕ್ಕೆ ಈ ಯೋಜನೆ ಅನ್ವಯ 17 ಟನ್ ಶುಂಠಿ ಸಾಗಣೆ ಮಾಡಲಾಗಿದೆ.
Recommended Video
ನೈಋತ್ಯ ರೈಲ್ವೆ 'ಕಿಸಾನ್ ರೈಲು' ಯೋಜನೆಯಡಿ 17 ಟನ್ ಕೃಷಿ ಉತ್ಪನ್ನಗಳನ್ನು ಸಾಗಿಸಬಲ್ಲ ರೆಫ್ರಿಜಿರೇಟರ್ ಬೋಗಿಯನ್ನು ಪಡೆದಿದೆ. ಇದನ್ನು ಸರಕು ಅಥವ ಎಕ್ಸ್‌ಪ್ರೆಸ್ ರೈಲಿಗೆ ಜೋಡಿಸುವ ಮೂಲಕ ಉತ್ಪನ್ನಗಳನ್ನು ಸಾಗಣೆ ಮಾಡಲಾಗುತ್ತದೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಹಾಸನದ ಎಪಿಎಂಸಿ ಜೊತೆ ಚರ್ಚೆ ಮಾಡಿ ಶುಂಠಿಯನ್ನು ಸಾಗಣೆ ಮಾಡಿದೆ. 17 ಟನ್ ಶುಂಠಿ 48 ಗಂಟೆಯಲ್ಲಿ ಹಾಸನದಿಂದ ಹೌರಾಗೆ ಸಾಗಣೆಯಾಗಿದೆ. ರಸ್ತೆ ಮಾರ್ಗದಲ್ಲಿ ಸಾಗಣೆ ಮಾಡಿದ್ದರೆ 6 ರಿಂದ 8 ದಿನ ಬೇಕಾಗುತ್ತಿತ್ತು.

ಹಳೆ ಮೈಸೂರು ಭಾಗದಲ್ಲಿ ಬೆಳೆಯುವ ಹಣ್ಣು, ತರಕಾರಿಗಳ ಸಾಗಣೆಗೆ ರಸ್ತೆ ಮಾರ್ಗವನ್ನು ಅವಲಂಬಿಸಲಾಗಿದೆ. ಆದರೆ, ರೈಲಿನ ಮೂಲಕ ಸಾಗಣೆ ಮಾಡುವುದರಿಂದ ವೆಚ್ಚವೂ ಕಡಿಮೆಯಾಗಲಿದೆ ಮತ್ತು ತಾಜಾವಾಗಿಯೂ ಸರಬರಾಜು ಆಗಲಿದೆ.
ಮೈಸೂರು ರೈಲ್ವೆ ವಿಭಾಗ ವಿವಿಧ ಜಿಲ್ಲೆಗಳ ಎಪಿಎಂಸಿಗಳ ಜೊತೆ ಮಾತುಕತೆ ನಡೆಸಿದ್ದು, ರೆಫ್ರಿಜಿರೇಟರ್ ಬೋಗಿಯನ್ನು ಹೊಂದಿರುವ ರೈಲಿನಲ್ಲಿ ಹಣ್ಣು, ತರಕಾರಿ ಸಾಗಣೆ ಮಾಡಲು ಚರ್ಚೆ ನಡೆಸಿದೆ. ದೇಶದ ಬೇರೆ ಬೇರೆ ನಗರಗಳಿಗೆ ಸಾಗಣೆ ಮಾಡಬಹುದಾಗಿದೆ.

ರೈತರು ಈ ರೆಫ್ರಿಜಿರೇಟರ್ ಬೋಗಿಯ ಉಪಯೋಗವನ್ನು ಪಡೆದುಕೊಳ್ಳಲು ಎಪಿಎಂಸಿಗಳು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದೆ. ಕಡಿಮೆ ಅವಧಿಯಲ್ಲಿ ತಾಜಾ ಉತ್ಪನ್ನಗಳನ್ನು ಸಾಗಿಸಲು ಇದು ಸಹಾಯಕವಾಗಿದೆ.












Click it and Unblock the Notifications