ಪಕ್ಷದ ಹೊಸ ಜವಾಬ್ದಾರಿ ಬಗ್ಗೆ ಪ್ರಜ್ವಲ್ ರೇವಣ್ಣ ಹೇಳಿದ್ದು ಹೀಗೆ
ಹಾಸನ, ನವೆಂಬರ್ 28 : ಇತ್ತೀಚೆಗಷ್ಟೆ ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಭಾರಿ ಹುಮ್ಮಸ್ಸಿನಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.
ಹುದ್ದೆ ಸಿಕ್ಕ ಖುಷಿಯಲ್ಲಿ ಹಾಸನದ ಬೇಲೂರಿಗೆ ಭೇಟಿನೀಡಿ, ಚೆನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
'ಇತ್ತೀಚೆಗಷ್ಟೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ, ಹಂತ ಹಂತವಾಗಿ ರಾಜ್ಯ ಪ್ರವಾಸ ಮಾಡುವೆ, ಪಕ್ಷ ಸಂಘಟನೆಗಾಗಿ ದೇವೇಗೌಡರು, ಕುಮಾರಣ್ಣ ಸೂಚನೆ ಕೊಟ್ಟಿದ್ದಾರೆ, ಅವರ ಸಲಹೆ ಸೂಚನೆಗಳನ್ನು ಪಾಲಿಸುತ್ತೇನೆ' ಎಂದರು.

ತಮಗೆ ದೊರೆತ ಹುದ್ದೆಯ ಬಗ್ಗೆ ಮಾತನಾಡಿದ ಅವರು 'ಕಿರಿಯ ವಯಸ್ಸಿನಲ್ಲಿ ಇದು ನನಗೆ ದೊಡ್ಡ ಜವಾಬ್ದಾರಿ, ದೇವೇಗೌಡರು ನನ್ನನ್ನು ಗುರುತಿಸಿರುವುದು ಸಂತೋಷವಾಗಿದೆ, ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡುವೆ, ಅವರು ಕೊಟ್ಟಿರುವ ಜವಾಬ್ದಾರಿಗೆ ನ್ಯಾಯ ಒದಗಿಸುವೆ' ಎಂದರು.
ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮಾತನಾಡಲು ಹಿಂಜರಿದ ಯುವ ನಾಯಕ 'ಮುಂದಿನ ಚುನಾವಣೆ ಸ್ಪರ್ಧೆ ಬಗ್ಗೆ ಏನೂ ಮಾತನಾಡಲ್ಲ, ಪಕ್ಷದ ನಾಯಕರು ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧ, ಅವರ ನಿರ್ಧಾರವೇ ಅಂತಿಮ, ಕುಮಾರಣ್ಣ ವಿಕಾಸ ಯಾತ್ರೆಗೆ ಅಭೂತಪೂರ್ವ ಜನ ಬೆಂಬಲ ಸಿಕ್ಕಿದೆ, ಕುಮಾರಣ್ಣ ಮುಂದಿನ ಸಿಎಂ ಆಗಬೇಕು ಎಂಬುದು ಜನರ ಆಸೆಯಾಗಿದೆ' ಎಂದಷ್ಟೆ ಹೇಳಿದರು.
ಕಾಂಗ್ರೆಸ್, ಬಿಜೆಪಿ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ ಅವರು 'ರಾಜ್ಯದ ಜನರ ಸಂಕಷ್ಟಗಳಿಗೆ ರಾಷ್ಟ್ರೀಯ ಪಕ್ಷಗಳು ಸ್ಪಂದಿಸಿಲ್ಲ ಎಂದರು' ಜೊತೆಗೆ 'ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತರಿಗೆ ಡಿಸಿಎಂ ಸ್ಥಾನ, ನೀಡುವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಅವರು ಬೆಂಬಲ ಸೂಚಿಸಿದರು.












Click it and Unblock the Notifications