ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ: ಒಂದೇ ರಸ್ತೆಯಲ್ಲಿ 20ಕ್ಕೂ ಹೆಚ್ಚು ಬಾರ್ ಅಂಡ್ ರೆಸ್ಟೋರೆಂಟ್; ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ನವೆಂಬರ್ 8: ಹಾಸನದ ರಸ್ತೆವೊಂದರಲ್ಲೇ 20ಕ್ಕೂ ಹೆಚ್ಚು ಬಾರ್ ಅಂಡ್ ರೆಸ್ಟೋರೆಂಟ್‌ಗಳು ತಲೆ ಎತ್ತಿದ್ದು, ಸ್ಥಳೀಯ ಜನರಿಗೆ ದೊಡ್ಡ ತಲೆ ನೋವಾಗಿದೆ. ಬಾರ್‌ಗಳನ್ನು ಬಂದ್ ಮಾಡಿಸುವಂತೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಹಾಸನದ ಬೆಂಗಳೂರು- ಮಂಗಳೂರು ರಸ್ತೆಯಿಂದ ನೇರವಾಗಿ ಬೇಲೂರು ರಸ್ತೆಗೆ ಸಂಪರ್ಕಿಸಲು ನಿರ್ಮಾಣವಾಗಿರುವ ರಿಂಗ್ ರಸ್ತೆಯನ್ನು ಈಗ ಜನರು ಬಾರ್ ರಸ್ತೆ ಎಂದೇ ಮಾತನಾಡಿಕೊಳ್ಳುತ್ತಿದ್ದು, ಇದಕ್ಕೆ ಕಾರಣವಾದ ಅಬಕಾರಿ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಹೇಳಿ ಕೇಳಿ ನಗರಕ್ಕೆ ಹೊಂದಿಕೊಂಡ ಹತ್ತಾರು ಹಳ್ಳಿಗಳು ಹಾಗೂ ಬೇಲೂರು, ಹಳೆಬೀಡಿಗೆ ಹೋಗುವ ಸಾವಿರಾರು ಜನರು ಈ ಮಾರ್ಗವನ್ನೆ ಅವಲಂಬಿಸಿದ್ದಾರೆ.

 ಒಳ್ಳೆಯ ವ್ಯಾಪಾರ ಆಗುತ್ತದೆ ಎನ್ನುವ ಲೆಕ್ಕಾಚಾರ

ಒಳ್ಳೆಯ ವ್ಯಾಪಾರ ಆಗುತ್ತದೆ ಎನ್ನುವ ಲೆಕ್ಕಾಚಾರ

ಹೊಸದಾಗಿ ಬೆಳೆಯುತ್ತಿರುವ ಪ್ರದೇಶವಾಗಿದ್ದು, ಪಕ್ಕಾ ಕಮರ್ಶಿಯಲ್ ಏರಿಯಾ ಆಗಿರುವುದರಿಂದ ಇಲ್ಲಿ ಏನೇ ಬ್ಯುಸಿನೆಸ್ ಮಾಡಿದರೂ ಒಳ್ಳೆಯ ವ್ಯಾಪಾರ ಆಗುತ್ತದೆ ಎನ್ನುವ ಲೆಕ್ಕಾಚಾರದಲ್ಲೇ ಒಂದರ ಹಿಂದೊಂದರಂತೆ ಬಾರ್‌ಗಳು ಓಪನ್ ಆಗುತ್ತಲೇ ಇವೆ. ಲಾಡ್ಜ್‌ಗೆ ಹೊಂದಿಕೊಂಡಂತೆ ಇರುವ ಬಾರ್ ಅಂಡ್ ರೆಸ್ಟೋರೆಂಟ್ ಓಪನ್‌ಗೆ ಸರ್ಕಾರ ನಿಯಮ ಸಡಿಲ ಮಾಡಿದೆ.

ನಗರ ಪ್ರದೇಶದಲ್ಲಿ ಹಿಂದೆ ಇದ್ದ 15 ರೂಂ ಬದಲಾಗಿ ಈಗ 10 ರೂಂ ಇದ್ದರೆ ಅವರಿಗೆ ಬಾರ್ ತೆರೆಯುವುದಕ್ಕೆ ಅನುಮತಿ ಸಿಗುತ್ತದೆ. ಆದರೆ ಸಿಎಲ್ 7ಗಳಲ್ಲಿ ಮಾಲೀಕರು ಮದ್ಯವನ್ನು ಕೇವಲ ತಮ್ಮ ಲಾಡ್ಜ್‌ಗಳಲ್ಲಿ ವಾಸ್ತವ್ಯ ಹೂಡುವ ಅತಿಥಿಗಳು ಹಾಗೂ ಅವರ ಆಹ್ವಾನಿತರಿಗೆ ಪೆಗ್ ಸಿಸ್ಟಮ್‌ನಲ್ಲಿ ವಿತರಣೆ ಮಾಡಬೇಕು. ಆದರೆ ಈ ಎಲ್ಲಾ ನಿಯಮಗಳು ಇಲ್ಲಿ ಉಲ್ಲಂಘನೆ ಆಗುತ್ತಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

 ಹೊಸ ಬಾರ್‌ಗಳಿಗೆ ಅನುಮತಿ ನೀಡಿಲ್ಲ

ಹೊಸ ಬಾರ್‌ಗಳಿಗೆ ಅನುಮತಿ ನೀಡಿಲ್ಲ

ಈ ಬಗ್ಗೆ ಸ್ವತಃ ಬೇಸರ ವ್ಯಕ್ತಪಡಿಸಿರುವ ಹಾಸನ ಜಿಲ್ಲಾಧಿಕಾರಿಗಳು, ಈ ಬಗ್ಗೆ ಹಲವು ದೂರುಗಳು ಬಂದ ಬಳಿಕ ನಮಗೆ ಕೆಲ ಒತ್ತಡ ಬಂದರೂ ಕೂಡ ಹಲವಾರು ಬಾರ್‌ಗಳಿಗೆ ಅನುಮತಿ ನೀಡಿಲ್ಲ. ಆದರೆ ಸರ್ಕಾರದ ನಿಯಮಗಳ ಪ್ರಕಾರ ನಾವು ಕೆಲಸ ಮಾಡಬೇಕಾಗುತ್ತದೆ. ಜನರಿಗೆ ತೊಂದರೆ ಆಗದಂತೆ ಮತ್ತೆ ಹೆಚ್ಚಿನ ಬಾರ್‌ಗೆ ಅನುಮತಿ ನೀಡದಂತೆ ಅಬಕಾರಿ ಇಲಾಖೆಗೆ ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ಆರ್. ಗಿರೀಶ್ ಮಾಹಿತಿ ನೀಡಿದ್ದಾರೆ.

ಹಾಸನದ ಡೈರಿ ವೃತ್ತದಿಂದ ಸಾಲಗಾಮೆ ವೃತ್ತದವರೆಗೆ ಏನಿಲ್ಲವೆಂದರೂ 15 ಬಾರ್‌ಗಳಿವೆ. ಇದರಲ್ಲಿ ಸಿಎಲ್ 2 ಅಂದರೆ ಕೇವಲ ಬಾಟಲ್‌ಗಳನ್ನು ಎಂಆರ್‌ಪಿ ದರದಲ್ಲಿ ಮಾರಾಟ ಮಾಡುವ ಬಾರ್‌ಗಳ ಜೊತೆಗೆ ಸಿಎಲ್ 7 ಶಾಪ್‌ಗಳು ಕೂಡ ಸೇರಿವೆ. ಇನ್ನು ಸಾಲಗಾಮೆ ವೃತ್ತದಿಂದ ಬೇಲೂರು ರಸ್ತೆವರೆಗೆ ಈಗಾಗಲೇ ಐದು ಬಾರ್‌ಗಳು ಓಪನ್ ಆಗಿದ್ದು, ಇನ್ನೂ ಕೂಡ ಹಲವಾರು ಜನರು ಅರ್ಜಿ ಸಲ್ಲಿಸಿದ್ದಾರೆ.

 ನಾನ್ ವೆಜ್ ಹೋಟೆಲ್‌ಗಳಲ್ಲಿಯೂ ಅಕ್ರಮ ಮದ್ಯ ಸೇವನೆ

ನಾನ್ ವೆಜ್ ಹೋಟೆಲ್‌ಗಳಲ್ಲಿಯೂ ಅಕ್ರಮ ಮದ್ಯ ಸೇವನೆ

ಬಾರ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಹಾಗೂ ಇದೇ ರಸ್ತೆಯಲ್ಲಿ ತಲೆ ಎತ್ತಿರುವ ಭಾರೀ ಸಂಖ್ಯೆಯ ನಾನ್ ವೆಜ್ ಹೋಟೆಲ್‌ಗಳಲ್ಲಿಯೂ ಅಕ್ರಮ ಮದ್ಯ ಸೇವನೆ ಆರೋಪ ಕೇಳಿ ಬರುತ್ತಿರುವುದು ಹಾಗೂ ಬಳಿಕ ಹಲವು ಪುಂಡರ ಹೊಡೆದಾಟಗಳು, ಕ್ರೈಂಗಳು ಇದೇ ರಸ್ತೆಯಲ್ಲಿ ಹೆಚ್ಚಾಗಿ ನಡೆಯುತ್ತಿರುವುದು ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಅಬಕಾರಿ ಸಚಿವ ಕೆ. ಗೋಪಾಲಯ್ಯ ಹಾಸನ ಜಿಲ್ಲೆಗೆ ಉಸ್ತುವಾರಿ ಆದ ಬಳಿಕವಂತೂ ಬಾರ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿವೆ ಅನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಇನ್ನು ಬಾರ್ ಗಳು ಹೆಚ್ಚಾಗುತ್ತಿರವ ಬಗ್ಗೆ ಹಾಗೂ ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿರುವ ಪೊಲೀಸ್ ಇಲಾಖೆ ಹೆಚ್ಚಿನ ಸಂಖ್ಯೆಯಲ್ಲಿ ಬಾರ್‌ಗೆ ಅನುಮತಿ ನೀಡದಂತೆ ಮನವಿ ಮಾಡಿದೆ.

 ಪೊಲೀಸರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ

ಪೊಲೀಸರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ

ಸಿಎಲ್ 7 ಬಾರ್‌ಗಳಿಗೆ ಅನುಮತಿ ನೀಡುವ ವೇಳೆ ಪೊಲೀಸ್ ಇಲಾಖೆಯಿಂದ ಯಾವುದೇ ಎನ್‌ಒಸಿ ಪಡೆಯುವ ಅವಶ್ಯಕತೆ ಇಲ್ಲ, ಹಾಗಾಗಿ ಇದಕ್ಕೂ ನಮಗೂ ಸಂಬಂಧ ಇಲ್ಲ. ಆದರೂ ಸಮಸ್ಯೆ ಇರುವ ಕಡೆ ಸೂಕ್ತ ಕ್ರಮಕ್ಕೆ ನಾವು ಜಿಲ್ಲಾಡಳಿತ ಹಾಗೂ ಅಬಕಾರಿ ಇಲಾಖೆಗೆ ಮಾಹಿತಿ ನೀಡಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರಕ್ಕೆ ಆದಾಯದ ಪ್ರಮುಖ ಮೂಲವಾಗಿರುವ ಅಬಕಾರಿ ಇಲಾಖೆ ತನ್ನ ಆದಾಯ ಹೆಚ್ಚಿಸಿಕೊಳ್ಳುವುದಕ್ಕೆ ಹಾಗೂ ಪ್ರತಿ ಜಿಲ್ಲೆಯಲ್ಲಿ ತಮ್ಮ ನಿರ್ದಿಷ್ಟ ಗುರಿಯಷ್ಟು ಮದ್ಯ ಮಾರಾಟ ಮಾಡುವುದಕ್ಕೆ ಇದ್ದ ನಿಯಮಗಳೆನ್ನೆಲ್ಲಾ ಸಡಿಲಗೊಳಿಸಿ ಬಾರ್‌ಗಳಿಗೆ ಅನುಮತಿ ನೀಡುತ್ತಿರುವುದು ಜನರಿಗಷ್ಟೇ ಅಲ್ಲ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ಸುಳ್ಳಲ್ಲ.

Recommended Video

ಹಾಸನಾಂಬೆ ದೇವಿಯ ಬಳಿ ಏನೆಲ್ಲಾ ಬೇಡಿಕೆ ಇಟ್ಟಿದ್ದಾರೆ ಭಕ್ತಾದಿಗಳು | Oneindia Kannada

English summary
There are more than 20 bars and restaurants along the Hassan road, with locals appealing to the district administration to close bars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X