ಹಾಸನ : 'ಶುಭಗಳಿಗೆ' ಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಜ್ವಲ್ ರೇವಣ್ಣ
ಹಾಸನ, ಮಾರ್ಚ್ 22: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮೊಮ್ಮಗ, ಸಚಿವ ಎಚ್ ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಶುಕ್ರವಾರದಂದು ರಾಹುಕಾಲ ಮುಗಿದ ಬಳಿಕ ಶುಭಗಳಿಗೆಯಲ್ಲಿ ಲೋಕಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಹೊಳೆನರಸೀಪುರದ ರಾಘವೇಂದ್ರಸ್ವಾಮಿ, ಆಂಜನೇಯಸ್ವಾಮಿ, ಮಾವಿನಕೆರೆ ರಂಗನಾಥಸ್ವಾಮಿ ಲಕ್ಷ್ಮಿನರಸಿಂಹ ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಜ್ವಲ್ ಅವರ ತಂದೆ ರೇವಣ್ಣ ಹಾಗೂ ತಾಯಿ ಭವಾನಿ ಅವರು ಜತೆಗಿದ್ದರು.

12.35ರ ಶುಭ ಗಳಿಗೆಯಲ್ಲಿ ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸಿದರು. ಜ್ಯೋತಿಷಿಗಳ ಸಲಹೆ ಸೂಚನೆ ಮೇರೆಗೆ ಚಪ್ಪಲಿ ಧರಿಸದೆ, ನಿಗದಿ ಮಾಡಿದ ಸಮಯಕ್ಕೆ ಸರಿಯಾಗಿ ನಾಮಪತ್ರವನ್ನು ಪ್ರಜ್ವಲ್ ಸಲ್ಲಿಸಿದರು.
ನಾಮಪತ್ರ ಬಳಿಕ ಜೆಡಿಎಸ್ ಸಮಾವೇಶದಲ್ಲಿ ಪ್ರಜ್ವಲ್ ರೇವಣ್ಣ ಅವರು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪ್ರಜ್ವಲ್ ಅವರ ಉಮೇದುವಾರಿಕೆಗೆ ಸೂಚಕರಾಗಿ ಸಹಿ ಹಾಕಿದರು. ಮೊಮ್ಮಗನನ್ನು ಹರಸಲು ಎಚ್ ಡಿ ದೇವೇಗೌಡರು ಉಪಸ್ಥಿತರಿದ್ದರು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಅರಕಲಗೂಡು ಮಂಜು ಅವರು ಹಾಸನ ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಜೆಡಿಎಸ್ ನ ಅಧಿಕೃತ ಅಭ್ಯರ್ಥಿ ಎಂದು ಕಣ್ಣೀರ 'ಹೊಳೆ' ಹರಿಸಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಮಾರ್ಚ್ 14ರಂದು ಹೊಳೆನರಸೀಪುರದಲ್ಲಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು












Click it and Unblock the Notifications