ಕುಡುಗರಹಳ್ಳಿ: ಮಧ್ಯಾಹ್ನದ ಊಟ ಸೇವಿಸಿ ಅಸ್ವಸ್ಥರಾದ 35 ಸೈನಿಕರು, ಆಸ್ಪತ್ರೆಗೆ ದಾಖಲು
ಹಾಸನ, ಜೂನ್, 07: ಕ್ಯಾಂಪ್‌ನಲ್ಲಿ ಮಧ್ಯಾಹ್ನದ ಊಟ ಸೇವಿಸಿ 35 ಮಂದಿ ಸೈನಿಕರು ಅಸ್ವಸ್ಥರಾದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕುಡುಗರಹಳ್ಳಿಯಲ್ಲಿ ನಡೆದಿದೆ. ಇನ್ನು ಅಸ್ವಸ್ಥರಾಗಿದ್ದ ಸೈನಿಕರಿಗೆ ಸಕಲೇಶಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚಾಲನಾ ತರಬೇತಿಗೆಂದು ಬಂದಿದ್ದ 35 ಜನ ಸೈನಿಕರು ಕುಡುಗರಹಳ್ಳಿ ಬಳಿ ಕ್ಯಾಂಪ್‌ನಲ್ಲಿ ಮಧ್ಯಾಹ್ನ ತಯಾರಾದ ಆಹಾರವನ್ನು ಸೇವಿಸಿದ್ದರು. ಊಟ ಮಾಡಿದ ನಂತರ ಸೈನಿಕರು ಅಸ್ವಸ್ಥಗೊಂಡಿದ್ದು, ಆಗ ಎಲ್ಲಾ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಆಸ್ಪತ್ರೆಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಅಸ್ವಸ್ಥಗೊಂಡಿರುವ ಸೈನಿಕರ ಆರೋಗ್ಯವನ್ನು ವಿಚಾರಿಸಿದರು.

30ಕ್ಕೂ ಹೆಚ್ಚು ಜನ ಅಸ್ವಸ್ಥ
ಹಾಗೆಯೆ ಕಲುಷಿತ ನೀರು ಸೇವಿಸಿ ಸುಮಾರು 30ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ಸಮೀಪದ ಅರಕೇರಾ ತಾಲೂಕಿನ ರೇಖಲಮರಡಿ ಗ್ರಾಮದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಇನ್ನು ಅಸ್ವಸ್ಥ ಗೊಂಡಿದ್ದ ಜನರನ್ನು ಅರಕೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ, ದೇವದುರ್ಗ ತಾಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ದುರಾದೃಷ್ಟವಶಾತ್ ಗ್ರಾಮ ಹನುಮಂತ ಎಂಬ 3 ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿತ್ತು.
ಸುಮಾರು ವರ್ಷಗಳಿಂದ ಗ್ರಾಮದಲ್ಲಿ ನೀರು ಸರಬರಾಜು ಆಗುತ್ತಿದ್ದ ನೀರಿನ ಟ್ಯಾಂಕ್ ಸ್ವಚ್ಛಗೊಳಿಸದೆ ಇರುವುದರಿಂದ ಕಲುಷಿತಗೊಂಡ ನೀರು ಸೇವಿಸಿ ಗ್ರಾಮಸ್ಥರು ವಾಂತಿ, ಬೇಧಿಗೆ ತುತ್ತಾಗಿದ್ದಾರೆ. ಮತ್ತು ರಸ್ತೆ ಬದಿಯಲ್ಲಿ ಪೈಪ್ ಲೈನ್ ಹೊಡೆದು ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಬೆರೆತು ಘಟನೆ ಸಂಭವಿಸಿದೆ.
ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ನಿರುಪಯುಕ್ತವಾಗಿದ್ದು ಪಂಚಾಯಿತಿ ಅಧಿಕಾರಿಗಳು ದುರಸ್ತಿ ಮಾಡದೆ ಹಿನ್ನೆಲೆ ಜನರು ಟ್ಯಾಂಕ್ ನೀರು ಹೆಚ್ಚು ಬಳಸುತ್ತಿದ್ದರು ಎಂದು ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ತಿಳಿಸಿದ್ದರು.
ಘಟನಾ ಸ್ಥಳಕ್ಕೆ ಅರಕೇರಾ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್, ತಾಲೂಕು ಆರೋಗ್ಯಾಧಿಕಾರಿ ಡಿ.ಬನದೇಶ್ವರ, ಪಿಡಿಒ ರೇಣುಕಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಭೇಟಿ ನೀಡಿ ಪರೀಶೀಲನೆ ನಡೆಸಿದ್ದರು.












Click it and Unblock the Notifications