Bhavani Revanna: ಕಾಂಗ್ರೆಸ್ ನೋಟು, ಜೆಡಿಎಸ್‌ಗೆ ವೋಟು: ಅರಸೀಕೆರೆಯಲ್ಲಿ ಶಿವಲಿಂಗೇಗೌಡಗೆ ಭವಾನಿ ರೇವಣ್ಣ ಠಕ್ಕರ್
ಹಾಸನ, ಮೇ, 05: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಭವಾನಿ ರೇವಣ್ಣ ಅವರು ಇಂದು ಅರಸೀಕೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಂತೋಷ್ ಪರ ಅಬ್ಬರದ ಪ್ರಚಾರ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಕುಲದೇವರು ಮತ್ತು ದೇವೇಗೌಡರ ಆಶೀರ್ವಾದದಿಂದ ಸಂತೋಷ್ ಅಭ್ಯರ್ಥಿ ಆಗಿದ್ದಾರೆ ಎಂದರು. ಅಲ್ಲದೆ ಕಾಂಗ್ರೆಸ್ ನೋಟು, ಜೆಡಿಎಸ್‌ಗೆ ವೋಟು ಎನ್ನುವ ಘೋಷಣೆ ಕೂಗಿದರು.
ಹಾಗೆಯೆ ಕಾಂಗ್ರೆಸ್ ಅಭ್ಯರ್ಥಿ ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಶಿವಲಿಂಗೇಗೌಡ ಅವರು ಎರಡು ವರ್ಷದಿಂದ ಪಕ್ಷ ಕಡೆಗಣನೆ ಮಾಡಿದ್ದರು. ಅಲ್ಲದೆ ದೇವೇಗೌಡರ ಮುಖ ನೋಡಿ ಯಾರು ಮತ ಹಾಕಲ್ಲ ಅಂತಾರೆ. ಹಾಗಿದ್ದರೆ ಇವತ್ತು ನಮ್ಮ ಪರವಾಗಿ ಇಷ್ಟೊಂದು ಜನ ಯಾಕಾಗಿ ಬಂದಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಶಿವಲಿಂಗೇಗೌಡ ಯಾರೆಂದು ಗೊತ್ತಿರಲಿಲ್ಲ, ಅವರನ್ನು ಕರೆದುಕೊಂಡು ಹೋಗಿ ಜಿಲ್ಲಾ ಪಂಚಾಯತಿ ಸದಸ್ಯ ಮಾಡಿದರು. ನಂತರ ಶಾಸಕರನ್ನಾಗಿ ಮಾಡಿದರು. ಆದರೆ ಈಗ ಅಭಿವೃದ್ಧಿ ಮಾಡುತ್ತೇನೆ ಅಂತಾ ಅವರು ಹೇಗೆ ಅಭಿವೃದ್ಧಿ ಆಗಿದ್ದಾರೆ ಅನ್ನುವುದು ಗೊತ್ತಿದೆ ಎಂದರು.
ಅವರ ತೂಕ ಎಷ್ಟು ಎತ್ತರ ಎಷ್ಟು ಎಂದು ಎಲ್ಲರಿಗೂ ಗೊತ್ತಿದೆ. ಆದರೆ ನಾವು ದೇವೇಗೌಡರ ಹುಟ್ಟುಹಬ್ಬಕ್ಕೆ ಈ ಕ್ಷೇತ್ರದ ಗೆಲುವಿನ ಉಡುಗೊರೆ ಕೊಡೋಣ. ಆದ್ದರಿಂದ ಅರಸೀಕೆರೆ ಅಭ್ಯರ್ಥಿ ಸಂತೋಷ್ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು. ಅಷ್ಟೇ ಅಲ್ಲದೆ ಶಿವಲಿಂಗೇಗೌಡರು ಬೇನಾಮಿ ಹಣ ಮಾಡಿದಾರೆ. ಹಾಗಾಗಿ ಕಾಂಗ್ರೆಸ್ ನೋಟು, ಜೆಡಿಎಸ್‌ಗೆ ವೋಟು ಎಂದು ಭವಾನಿ ರೇವಣ್ಣ ಘೋಷಣೆ ಕೂಗಿದರು.
ಪ್ರೀತಂ ಗೌಡ ವಿರುದ್ಧ ಭವಾನಿ ರೇವಣ್ಣ ಆಕ್ರೋಶ
ಅದೇ ರೀತಿ ಹೈವೋಲ್ಟೇಜ್ ಕ್ಷೇತ್ರವಾದ ಹಾಸನದಲ್ಲಿ ಕರವೇ ವತಿಯಿಂದ ಜೆಡಿಎಸ್ ಅಭ್ಯರ್ಥಿ ಸ್ವರೂಪ್‌ಗೆ ಬೆಂಬಲ ಘೋಷಣೆ ಹಾಗೂ ದೇಣಿಗೆ ನೀಡುವ ಕಾರ್ಯಕ್ರಮವನ್ನು ಇತ್ತೀಗಷ್ಟೇ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಭವಾನಿ ರೇವಣ್ಣ ಪ್ರೀತಂ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಭವಾನಿ ರೇವಣ್ಣ, ನಾವು ಯಾವಾಗಲೂ ಗೂಂಡಾಗಿರಿ ರಾಜಕಾರಣ ಮಾಡಿದವರಲ್ಲ. ವಿಶ್ವಾಸ ಬೆಳೆಸಿ, ವಿಶ್ವಾಸದಿಂದ ನಿಮ್ಮ ಮನಸ್ಸು ಗೆದ್ದು, ನಿಮ್ಮನ್ನು ಮತ ಕೇಳುತ್ತೇವೆಯೇ ಹೊರತು, ಬಿಹಾರ್ ಅಂತಹ ರಾಜಕಾರಣವನ್ನು ನಾವು ಮಾಡುವುದಿಲ್ಲ ಎಂದು ಪರೋಕ್ಷವಾಗಿ ಶಾಸಕ ಪ್ರೀತಂಗೌಡ ವಿರುದ್ಧ ಹರಿಹಾಯ್ದಿದ್ದರು.
ಅಲ್ಲದೆ ನೀವೆಲ್ಲ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸ್ವರೂಪ್‌ಗೆ ಬೆಂಬಲ ಕೊಡುತ್ತೇನೆ ಅಂತಾ ಹೇಳಿದ್ದೀರ. ಒಬ್ಬೊಬ್ಬರು ನೂರು ವೋಟು ಹಾಕಿಸುವ ಶಕ್ತಿ ಇದೆ ಅಂದುಕೊಳ್ಳುತ್ತೇನೆ ಎಂದಿದ್ದರು.
ಜೆಡಿಎಸ್‌ಗೆ ಬೆಂಬಲ ನೀಡಿದ್ದಕ್ಕೆ ನಾವೆಲ್ಲರೂ ಚಿರಋಣಿ ಆಗಿರುತ್ತೇವೆ. ಅದೇ ರೀತಿ ನಮ್ಮ ಕುಟುಂಬ, ಪ್ರಕಾಶಣ್ಣನ ಕುಟುಂಬ ನಿಮ್ಮ ಜೊತೆಗೆ ಇರುತ್ತದೆ. ರಾಮ ಸೇತುವೆ ಕಟ್ಟುವಾಗ ಅಳಿಲು ಕೂಡ ಸೇವೆ ಮಾಡಿತ್ತು. ಅದರಿಂದ ಅಳಿಲು ಸೇವೆ ಅಂತಾ ಹೆಸರು ಬಂತು ಎಂದು ಮಾತನಾಡುತ್ತಾರೆ. ಮುಂದಿನ ದಿನಗಳಲ್ಲಿ ನೀವು ನಮ್ಮ ಜೊತೆ ಇರುತ್ತೀರ, ನಿಮ್ಮ ಜೊತೆ ನಾವು ಇರುತ್ತೇವೆ. ಯಾವುದೇ ಧಮ್ಕಿಗೆ ನೀವ್ಯಾರು ಹೆದರಬಾರದು. ಎಲ್ಲಾ ಸಮಯದಲ್ಲೂ ನಾವು ನಿಮ್ಮ ಜೊತೆಗಿರುತ್ತೇವೆಂದು ಹೇಳಿದ್ದರು.












Click it and Unblock the Notifications