ಹಾಸನ: ದೇವಸ್ಥಾನಕ್ಕೆ ತೆರಳಿದ್ದ ವೈದ್ಯ: ಹೇಮಾವತಿ ಹಿನ್ನೀರಿನಲ್ಲಿ ಶವವಾಗಿ ಪತ್ತೆ
ಹಾಸನ, ಸೆಪ್ಟೆಂಬರ್ 16: ಹೇಮಾವತಿ ಹಿನ್ನೀರಿಗೆ ಸ್ನಾನಮಾಡಲು ಹೋಗಿದ್ದ ವೈದ್ಯ ಮುಳುಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗೊರೂರು ಸಮೀಪ ನಡೆದಿದೆ. ಚಂದ್ರಶೇಖರ್ (31) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಅರಕಲಗೂಡು ಪಟ್ಟಣದ ಹೌಸಿಂಗ್ ಬೋರ್ಡ್‌ನಲ್ಲಿ ವಾಸವಿದ್ದ ಚಂದ್ರಶೇಖರ್ ಹೊಳೆನರಸೀಪುರ ತಾಲೂಕಿನ ಕೆರಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೆಪ್ಟೆಂಬರ್ 14 ರಂದು ಹೇಮಾವತಿ ಹಿನ್ನೀರಿನಲ್ಲಿರುವ ದೇವಾಲಯಕ್ಕೆ ತೆರಳಿದ್ದರು. ಕೋನಾಪುರ ಐಲ್ಯಾಂಡ್‌ನ ರಂಗನಾಥಸ್ವಾಮಿ ದೇವಾಲಯಕ್ಕೆ ಹೋಗಿ ಬರುವುದಾಗಿ ಆಪ್ತರಿಗೆ ತಿಳಿಸಿ ಹೋಗಿದ್ದರು.

ಬೆಳಗ್ಗೆ ದೇವಸ್ಥಾನಕ್ಕೆ ತೆರಳಿದ್ದ ಚಂದ್ರಶೇಖರ್ ಸಂಜೆ 5 ಗಂಟೆಯಾದರೂ ಬಾರದೇ ಇದ್ದಾಗ ಗೊರೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಾರು ಹಾಗೂ ಬಟ್ಟೆ ಪತ್ತೆಯಾಗಿದೆ. ಸೆಪ್ಟೆಂಬರ್ 15 ರಂದು ಶವ ನೀರಿನಲ್ಲಿ ತೇಲಿ ಬಂದಿದ್ದು, ಅರಕಲಗೂಡು ತಾಲೂಕು ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ. ಘಟನೆ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾರ್ಮಾಡಿ ಘಾಟ್: 100 ಅಡಿ ಪ್ರಪಾತಕ್ಕೆ ಬಿದ್ದ ಲಾರಿ, ಚಾಲಕ, ಕ್ಲೀನರ್ ಪಾರು
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ನೂರು ಅಡಿ ಪ್ರಪಾತಕ್ಕೆ ಮಗುಚಿ ಬಿದ್ದಿದ್ದು ಲಾರಿ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮುಡಿ ಘಾಟಿ ಪ್ರದೇಶದಲ್ಲಿನ ಸೋಮನ ಕಾಡು ಬಳಿ ನಡೆದಿದೆ.
ಘಾಟಿ ಪ್ರದೇಶದಲ್ಲಿ ದಟ್ಟ ಮಂಜು ಹಾಗೂ ಮಳೆಯ ಪರಿಣಾಮ ಲಾರಿ ಚಾಲಕನಿಗೆ ರಸ್ತೆ ಕಾಣದೆ ಘಟನೆ ಸಂಭವಿಸಿರಬಹುದು ಎನ್ನಲಾಗುತ್ತಿದೆ. ಲಾರಿ ಪುತ್ತೂರಿನಿಂದ ಚಿತ್ರದುರ್ಗ ಜಿಲ್ಲೆಗೆ ನೀರಿನ ಬಾಟಲಿಗಳನ್ನು ಸಾಗಿಸುತ್ತಿತ್ತು, ಈ ವೇಳೆ ಲಾರಿ ಪ್ರಪಾತಕ್ಕೆ ಬಿದ್ದು ಮರಕ್ಕೆ ಸಿಲುಕಿ ಹಾಕಿಕೊಂಡಿದೆ. ಈ ವೇಳೆ ಸ್ಥಳೀಯರು ಲಾರಿ ಚಾಲಕ ಮತ್ತು ಕ್ಲೀನರ್ ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಬಣಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications