Hemavathi Dam: ಜಲಾಶಯ ಜಳಹರಿವಿಗಿಂತ ಹೊರಹರಿವು ಭಾರೀ ಹೆಚ್ಚಳ: ಪ್ರವಾಹ ಸೃಷ್ಟಿ ಜನಾತಂಕ
ಹಾಸನ, ಜುಲೈ 26: ನಿರಂತರ ಮಳೆಯಿಂದಾಗಿ ಹೇಮಾವತಿ ಜಲಾನಯನ ಪ್ರದೇಶಗಳ ಭಾಗದಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಹೇಮಾವತಿ ಜಲಾಶಯ ಭರ್ತಿಯಾಗಿದ್ದು, ನದಿಯ ಒಳಹರಿವು ಏರಿಕೆ ಆಗಿದೆ. ಹೀಗಾಗಿ ರಾಜ್ಯ ಹೆದ್ದಾರಿಗಳು ಜಲಾವೃತಗೊಂಡಿದ್ದು, ವಿವಿಧ ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ.
ಹೇಮಾವತಿ ನದಿ ಪ್ರವಾಹಕ್ಕೆ ಹೊಳೆನರಸೀಪುರ, ಕುಶಾಲನಗರ, ಮಡಿಕೇರಿ ರಸ್ತೆ ಜಲಾವೃತವಾಗಿದೆ. ಹೊಳೆನರಸೀಪುರ ಪಟ್ಟಣದ ಸಮೀಪ ರಸ್ತೆಯಲ್ಲಿ ಐದು ಅಡಿಗೂ ಅದಿಕ ಪ್ರಮಾಣದ ನೀರು ತುಂಬಿಕೊಂಡಿದೆ. ನಿತ್ಯ ಸಾವಿರಾರು ವಾಹನ ಓಡಾಡೋ ರಸ್ತೆಯಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಹಲವು ರಸ್ತೆಗಳು ನಿರಂತರ ಮಳೆಗೆ ಕುಸಿದಿವೆ.

ಈ ರಸ್ತೆಗಳಲ್ಲಿ ಅನಿವಾರ್ಯ ಕಾರಣಗಳಿಂದ ಓಡಾಡುತ್ತಿರುವ ಸವಾರರ ಪರದಾಡುತ್ತಿದ್ದಾರೆ. ಜೀವ ಕೈಲಿ ಹಿಡಿದುಕೊಂಡು ವಾಹನಗಳು ರಸ್ತೆಗೆ ಇಳಿಯುತ್ತಿದೆ. ಹಾಸನ ವ್ಯಾಪ್ತಿಯಲ್ಲಿನ ಕೆಲವು ಐತಿಹಾಸಿಕ ಪ್ರವಾಸಿ ಸ್ಥಳಗಳು ಮುಳುಗಡೆ ಆಗುತ್ತಿವೆ. ಪ್ರವಾಹ ಇನ್ನಷ್ಟು ಹೆಚ್ಚಾಗುವ ಲಕ್ಷಣಗಳು ಇವೆ.
ವಿವಿಧ ಭಾಗದ ಜನಜೀವನ ಅಸ್ತವ್ಯಸ್ತ
ಇದು ರಾಜ್ಯ ಹೆದ್ದಾರಿ ಆಗಿರುವ ಕಾರಣಕ್ಕೆ, ಲಘು ವಾಹನಗಳ ಸೇರಿದಂತೆ ಎಲ್ಲ ಬಗೆಯ ವಾಹನಗಳು ಪ್ರಯಾಸ ಪಡುತ್ತಿವೆ. ಮಳೆ ಮುಂದುವರಿದಿದ್ದು, ಜನಜೀವನ ಅಸ್ತವೆಸ್ತವಾಗುತ್ತಿದೆ. ಹೊಳೆನರಸೀಪುರ, ಕುಶಾಲನಗರ, ಮಡಿಕೇರಿ ಭಾಗದ ಜನರು ಈ ರಸ್ತೆಯಲ್ಲಿ ಮಾಹಿತಿ ಇಲ್ಲದೇ ಬಂದು ಪಜೀತಿ ಅನುಭವಿಸುವಂತಾಗಿದೆ.
ವ್ಯಾಪಕ ಮಳೆಯಿಂದಾಗಿ ಹೇಮಾವತಿ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ರಸ್ತೆಗಳು, ಸೇತುವೆಗಳು ಜಲಾವೃತವಾಗಿವೆ.
ರಸ್ತೆ ಪಕ್ಕದ ಕೆಲ ವಾಣಿಜ್ಯ ಮಳಿಗೆಗಳೂ ಜಲಾವೃತಗೊಂಡಿದ್ದು, ಶುಕ್ರವಾರ ಬೆಳಗ್ಗೆಯಿಂದಲೇ ವ್ಯಾಪಾರ ವಹೀವಾಟಿಗೆ ತೊಂದರೆ ಆಗುತ್ತಿರುವುದು ಕಂಡು ಬಂದಿದೆ.
ಜಿಲ್ಲಾಡಳಿತವು ಸ್ಥಳದಲ್ಲಿ ಯಾವುದೇ ಅನಾಹುತ ನಡೆಯದಂತೆ ಎಚ್ಚರಿಕೆ ವಹಿಸಿದೆ. ಉದ್ದೇಶಿತ ಪ್ರವಾಹದ ಸ್ಥಳಗಳಿಗೆ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರ ನಿಯೋಜನೆ ಮಾಡಲಾಗಿದೆ. ಅಗತ್ಯ ಎಚ್ಚವರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಹಾಸನ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯು ಕಳೆದ ಐದು ವರ್ಷಗಳಲ್ಲಿ ಸುರಿದ ಅತ್ಯಧಿಕ ಮಳೆ ಇದಾಗಿದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.
ಶಿವಮೊಗ್ಗ ಸೇರಿ ವಿವಿಧೆಡೆ ಪ್ರವಾಹ
ಹಾಸನ ಮಾತ್ರವಲ್ಲದೆ, ಶಿವಮೊಗ್ಗ, ಕೊಡಗು, ಮಡಿಕೇರಿ ಸೇರಿದಂತೆ ಮಲೆನಾಡಿನ ಕೆಲವು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಶಿವಮೊಗ್ಗದಲ್ಲಿ ಭಾರೀ ಮಳೆ ಮುಂದುವರಿದಿದೆ. ಇಲ್ಲಿನ ವ್ಯಾಪಕ ಮಳೆಗೆ ಮುಖ್ಯ ರಸ್ತೆಗಳೇ ಕುಸಿದಿವೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆ ವ್ಯಾಪ್ತಿಯಲ್ಲಿ ಕುಣೆಗದ್ದೆಯಿಂದ ಹಲಸೆ ದೇವಸ್ಥಾನಕ್ಕೆ ಹೋಗುವ ರಸ್ತೆ ಕುಸಿತವಾಗಿದೆ. ಇಲ್ಲೆಲ್ಲ ವಾಹನ ಸಂಚಾರ ವ್ಯತ್ಯಯವಾಗಿದೆ. ರಸ್ತೆ ದುರಸ್ತಿಗೊಳಿಸುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ.
ಹೇಮಾವತಿ ಡ್ಯಾಂ ಒಳಹರಿವು ಭಾರೀ ಕ್ಯೂಸೆಕ್ ಏರಿಕೆ
ಹೇಮಾವತಿ ಜಲಾಶಯ ಒಹರಿವು ಹೆಚ್ಚಾಗಿದೆ. ಹೇಮಾವತಿ ಅಣೆಕಟ್ಟಿನ ಒಟ್ಟು ಸಾಮರ್ಥ್ಯ 890.58 ಟಿಎಂಸಿ ಇದ್ದು, ಈ ಪೈಕಿ ಇಂದು ಶುಕ್ರವಾರ 52,999 ಕ್ಯೂಸೆಕ್ ಒಳಹರಿವು ಕಂಡು ಬಂದಿದೆ. ಇನ್ನೂ ಹೊರ ಹರಿವು 63580 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಇದು ಸಹ ಹೇಮಾವತಿ ನದಿಯ ಒಳಹರಿವು ಹೆಚ್ಚಳ, ಪ್ರವಾಹಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications