ಹಾಸನ ಲೋಕಸಭೆ ಚುನಾವಣೆ ಫಲಿತಾಂಶ: ಪ್ರಜ್ವಲ್ v/s ಶ್ರೇಯಸ್
ಹಾಸನ, ಮೇ 27: ಈ ಬಾರಿಯ ಹಾಸನ ಲೋಕಸಭೆ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಏಪ್ರಿಲ್ 26ರಂದು ಮೊದಲ ಹಂತದಲ್ಲಿ ಹಾಸನದಲ್ಲಿ ಶೇ 77.68ರಷ್ಟು ಮತದಾನ ನಡೆಯಲಿದ್ದು, ಜೂನ್ 4ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.
ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ. ಈ ಬಾರಿಯ ಚುನಾವಣೆಯಲ್ಲಿಯೂ ಅವರೇ ಬಿಜೆಪಿ-ಜೆಡಿಸ್ ಮೈತ್ರಿ ಅಭ್ಯರ್ಥಿ. ಮತದಾನಕ್ಕೂ ಮೊದಲು ಹಂಚಿಕೆಯಾದ ಪ್ರಜ್ವಲ್ ರೇವಣ್ಣರದ್ದು ಎಂದು ಆರೋಪಿಸಲಾದ ಅಶ್ಲೀಲ ವಿಡಿಯೋ ಪ್ರಕರಣ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿದೆ.

ಏಪ್ರಿಲ್ 26ರಂದು ಮತದಾನ ಮಾಡಿ ವಿದೇಶಕ್ಕೆ ಹಾರಿರುವ ಪ್ರಜ್ವಲ್ ರೇವಣ್ಣ ಇನ್ನೂ ವಾಪಸ್ ಆಗಿಲ್ಲ. ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ತಕ್ಷಣ ರದ್ದುಗೊಳಿಸಲು ವಿದೇಶಾಂಗ ಇಲಾಖೆ ಪ್ರಕ್ರಿಯೆ ಆರಂಭಿಸಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ.
ಕಾಂಗ್ರೆಸ್, ಜೆಡಿಎಸ್ ಪೈಪೋಟಿ: ಹಾಸನ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ತವರು ಕ್ಷೇತ್ರ. ದೇವೇಗೌಡರ ಕುಟುಂಬ ಪ್ರಭಾವ ಕ್ಷೇತ್ರದಲ್ಲಿದೆ. ಕುಟುಂಬಕ್ಕೆ ರಾಜಕೀಯ ನೆಲೆ ಒದಗಿಸಿದ ಕ್ಷೇತ್ರವಿದು. ಹಾಸನದ ಚುನಾವಣೆ ಎಂದರೆ ಅದು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಪೈಪೋಟಿ.
2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್. ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಹಾಸನ ಜೆಡಿಎಸ್‌ಗೆ ಸಿಕ್ಕಿದ್ದು, ಪ್ರಜ್ವಲ್ ರೇವಣ್ಣ ಅಭ್ಯರ್ಥಿ. ಆದರೆ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಬಿಜೆಪಿ ನಾಯಕರ ವಿರೋಧವಿತ್ತು ಎಂಬ ಮಾತು ಕೇಳಿ ಬರುತ್ತಿದೆ.
ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಹಾಸನ, ಬೇಲೂರು, ಅರಸೀಕೆರೆ, ಶ್ರವಣಬೆಳಗೊಳ, ಸಕಲೇಶಪುರ, ಹೊಳೆನರಸೀಪುರ ಮತ್ತು ಕಡೂರು ವಿಧಾನಸಭಾ ಕ್ಷೇತ್ರ ಸೇರುತ್ತದೆ. ಕಡೂರು, ಅರಸೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಹಾಸನ, ಹೊಳೆನರಸೀಪುರ, ಶ್ರವಣಬೆಳಗೊಳದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಬೇಲೂರು ಮತ್ತು ಸಕಲೇಶಪುರದಲ್ಲಿ ಬಿಜೆಪಿ ಶಾಸಕರಿದ್ದಾರೆ.
ಜೆಡಿಎಸ್ ಪ್ರಭಾವದ ಜೊತೆಗೆ ಬಿಜೆಪಿಯ ಬಲವೂ ಸೇರಿದ್ದು, ಮೈತ್ರಿಕೂಟಕ್ಕೆ ಗೆಲುವು ಎಂಬುದು ಸದ್ಯದ ಜನರ ಅಭಿಪ್ರಾಯ. 2019ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಮೊದಲ ಚುನಾವಣೆ ಎದುರಿಸಿದ್ದ ಪ್ರಜ್ವಲ್ ರೇವಣ್ಣ 1,41,224 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಹಾಸನ ಲೋಕಸಭಾ ಕ್ಷೇತ್ರದಿಂದ 5 ಬಾರಿ ಎಚ್. ಡಿ. ದೇವೇಗೌಡರು ಆಯ್ಕೆಯಾಗಿದ್ದರು. 2019ರ ಚುನಾವಣೆಯಲ್ಲಿ ಅವರು ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟರು. ಮೊದಲ ಚುನಾವಣೆಯಲ್ಲಿಯೇ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಬೆಂಬಲವನ್ನು ಪಡೆದು, ಸಂಸತ್ ಪ್ರವೇಶ ಮಾಡಿದರು.
2019ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 676,606 ಮತಗಳನ್ನು ಪಡೆದು ಗೆಲುವು ಕಂಡಿದ್ದರು. ಎದುರಾಳಿಯಾಗಿದ್ದ ಬಿಜೆಪಿಯ ಎ. ಮಂಜು 535,282 ಮತಗಳನ್ನು ಪಡೆದು ಸೋಲು ಕಂಡಿದ್ದರು. ಈಗ ಎ. ಮಂಜು ಜೆಡಿಎಸ್‌ನಲ್ಲಿದ್ದು, ಹಾಲಿ ಶಾಸಕರು.
ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ ಜಿ.ಪುಟ್ಟಸ್ವಾಮಿಗೌಡ ಮೊಮ್ಮಗ. ಪ್ರಜ್ವಲ್ ರೇವಣ್ಣ ಎಚ್. ಡಿ. ದೇವೇಗೌಡರ ಮೊಮ್ಮಗ. ಪುಟ್ಟಸ್ವಾಮಿ ಗೌಡ 1985ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. 1989, 1999ರ ಚುನಾವಣೆಯಲ್ಲಿ ಅವರು ದೇವೇಗೌಡರನ್ನು ಸೋಲಿಸಿದ್ದರು.
ಅವರ ಮೊಮ್ಮಗ ಎಂ. ಶ್ರೇಯಸ್ ಪಟೇಲ್ ಎಚ್. ಡಿ. ರೇವಣ್ಣ ವಿರುದ್ಧ 2023ರ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. 84951 ಮತಗಳನ್ನು ಪಡೆದು ರೇವಣ್ಣಗೆ ಪ್ರಬಲ ಪೈಪೋಟಿ ನೀಡಿದ್ದರು. ಅಂತಿಮವಾಗಿ ರೇವಣ್ಣ 88103 ಮತಗಳನ್ನು ಪಡೆದು ಗೆಲುವು ಕಂಡಿದ್ದರು. ಈಗ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ವಿರುದ್ಧ ಶ್ರೇಯಸ್ ಪಟೇಲ್ ಕಣಕ್ಕಿಳಿದಿದ್ದಾರೆ.
ಹಿಂದಿನ ಚುನಾವಣೆ ಫಲಿತಾಂಶ ನೋಡುವುದಾದರೆ 2014ರಲ್ಲಿ ಕಾಂಗ್ರೆಸ್‌ನ ಎ. ಮಂಜು 409,379 ಮತಗಳನ್ನು ಪಡೆದು, ಜೆಡಿಎಸ್‌ನ ಎಚ್. ಡಿ. ದೇವೇಗೌಡ ವಿರುದ್ದ (509,841 ಮತ) ಸೋಲು ಕಂಡಿದ್ದರು. 2009ರಲ್ಲಿ ಕಾಂಗ್ರೆಸ್‌ನ ಬಿ. ಶಿವರಾಮು 201,147 ಮತಗಳನ್ನು ಪಡೆದು ದೇವೇಗೌಡರ ವಿರುದ್ಧ ಸೋಲು ಕಂಡಿದ್ದರು. ಈ ಬಾರಿಯ ಚುಣಾವಣಾ ಫಲಿತಾಂಶದಲ್ಲಿ ಯಾರಿಗೆ ಗೆಲುವು?.












Click it and Unblock the Notifications