ಎಡಿಜಿಪಿ ಬರೆದಿರುವ ಪತ್ರ ವೈರಲ್: ತನಿಖೆಗೆ ಆಗ್ರಹಿಸಿದ ಶಾಸಕ ಎ ಮಂಜು
ಹಾಸನ ಅಕ್ಟೋಬರ್ 1: ಎಡಿಜಿಪಿ ಬರೆದಿರುವ ಪತ್ರ ವೈರಲ್ ಆದ ಬೆನ್ನಲ್ಲೆ ಶಾಸಕ ಎ ಮಂಜು ತನಿಖೆಗೆ ಆಗ್ರಹಿಸಿದ್ದಾರೆ. ಶಾಸಕ ಎ.ಮಂಜು, ಮಾಜಿ ಶಾಸಕರುಗಳಾದ ಎಚ್.ಕೆ.ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್ ಹಾಸನದಲ್ಲಿಂದು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಹಲವಾರು ವಿಚಾರಗಳ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎ ಮಂಜು ಅವರು, 'ಎಡಿಜಿಪಿ ಬರೆದಿರುವ ಪತ್ರ ವೈರಲ್ ಆಗಿದೆ. ಅದರ ಬಗ್ಗೆ ತನಿಖೆ ಆಗಬೇಕು. ಅವರು ತನಿಖಾಧಿಕಾರಿ ಆಗಿ ಕೆಲಸ ಮಾಡ್ತಿಲ್ಲ. ಅದನ್ನು ಬಿಟ್ಟು ಬೇರೆ ಪದಗಳನ್ನು ಬಳಸಿದ್ದಾರೆ. ಅವರು ತನಿಖಾಧಿಕಾರಿ ಆಗಲು ಅರ್ಹರಲ್ಲ. ಪೊಲೀಸ್ ಅಧಿಕಾರಿಗೆ ಪ್ರಕರಣದ ತನಿಖೆ ಮಾಡಿ ವರದಿ ನೀಡಲು ಕೊಟ್ಟಿದ್ದಾರೆ. ಇವರು ಪ್ರಚಾರ ತೆಗೆದುಕೊಳ್ಳಲು ಈ ರೀತಿ ಮಾಡಿದ್ದಾರೆ' ಎಂದು ಕಿಡಿ ಕಾರಿದರು.

'ಎಡಿಜಿಪಿಗೆ ಪದ ಬಳಕೆ ಯಾರು ಕಲಿಸಿಕೊಟ್ಟರು ಗೊತ್ತಿಲ್ಲ. ಹುಷಾರಾಗಿ ಮಾತನಾಡುವುದನ್ನು ಕಲಿತುಕೊಳ್ಳಬೇಕು. ಫುಟ್‌ಪಾತ್‌ನವರ ರೀತಿ ಮಾತನಾಡಿದ್ದಾರೆ, ಅದು ಸರಿಯಲ್ಲ. ಯಾರೋ ಬರೆದ ಪುಸ್ತಕವನ್ನು ಓದಿದ್ದಾರೋ, ಬಿಟ್ಟವ್ರೋ ಗೊತ್ತಿಲ್ಲ. ಅವರು ಆ ರೀತಿ ಬರೆದಿದ್ದಾರೋ ಗೊತ್ತಿಲ್ಲ, ಬೇರೆಯವರು ಅವರ ಮೂಲಕ ಹೇಳಿಸಿರುವುದು ಎದ್ದು ಕಾಣ್ತಿದೆ. ಪ್ರಚಾರ ಪ್ರೀಯರಾಗಿ ಮಾಡುತ್ತಿರುವುದು ಸರಿಯಲ್ಲ. ಅವರ ಮೇಲೆ ಹಲವು ಆಪಾದನೆಗಳಿವೆ' ಎಂದು ಹರಿಹಾಯ್ದರು.
'ಎಡಿಜಿಪಿ ಮಾವ ಡಿಸಿ ಆಗಿದ್ರು ಅವರ ಹಗರಣಗಳಿವೆ, ಅವು ಮುಚ್ಚಿ ಹೋಗಿವೆ. ಎಡಿಜಿಪಿಯನ್ನು ಕಾಂಗ್ರೆಸ್ ಮಂತ್ರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕೂಡಲೇ ತನಿಖಾಧಿಕಾರಿಯನ್ನು ಬದಲಾವಣೆ ಮಾಡಬೇಕು. ಸಾರ್ವಜನಿಕವಾಗಿ ನಾನು ಮಾಡಿರುವುದು ತಪ್ಪು ಅಂತ ಹೇಳಿ ಕ್ಷಮೆ ಕೇಳಬೇಕು' ಎಂದು ಒತ್ತಾಯಿಸಿದರು.
ಮುಡಾ ಸೈಟ್ ಹಂಚಿಕೆ
ಸಿದ್ದರಾಮಯ್ಯ ಪತ್ನಿ ಮುಡ ಸೈಟುಗಳನ್ನು ಹಿಂದಿರುಗಿಸಲು ಪತ್ರ ಬರೆದ ವಿಚಾರವಾಗಿ ಮಾತನಾಡಿದ ಶಾಸಕ ಮಂಜು, 'ನಾವು ತಗೊಂಡಿರೋದು ತಪ್ಪು, ಕಾನೂನು ಬಾಹಿರವಾಗಿ ತಗೆದಕೊಂಡಿದ್ದೇವೆ. ಈ ಕ್ರಮದ ಮೇಲೆಯೇ ಜಡ್ಜ್ ಆರ್ಡರ್ ಮಾಡಿಬಿಡಬಹುದು. ಒತ್ತಾಯ ಪೂರ್ವಕವಾಗಿ ವಾಪಾಸ್ ನೀಡಿದ್ದಾರೆ ಎಂದಿದ್ದಾರೆ. ಅದು ಒತ್ತಾಯ ಪೂರ್ವಕವಾಗಿ ಮಾಡಿರುವುದಲ್ಲ. ನಿಮ್ಮಬ್ಬರಿಗೂ ಅದು ಒಬ್ಬ ದಲಿತನಿಗೆ ಸೇರಿದ ಜಮೀನು ಎಂಬುದು ಗೊತ್ತಿದೆ'
ಕೆಸರೆ ಗ್ರಾಮದ ಆ ಜಮೀನು ಮೂರು, ನಾಲ್ಕು ಜನಕ್ಕೆ ಸೇರುತ್ತೆ. ಆ ಜಮೀನನ್ನ ಮುಡ ಅಭಿವೃದ್ಧಿ ಮಾಡುತ್ತೆ. ಇದೆಲ್ಲಾ ಆದಮೇಲೆ ಆ ಜಾಗವನ್ನ ಕಂದಾಯ ಜಾಗ ಎಂದು ಬರೆಸಿಕೊಳ್ಳುತ್ತಾರೆ. ಮುಡದವರು ಜಮೀನು ಮಾಲೀಕರಿಗೆ ಹಣವನ್ನೂ ಹಾಕಿದ್ದಾರೆ. ಈ ಜಾಗ ರೆವೆನ್ಯೂಗೆ ಸೇರಿದೆ ಇದರ ಬದಲಿಗೆ 50% ಅನುಪಾತದಲ್ಲಿ ಸೈಟ್ ಕೊಡಿ ಎಂದು ಸಿದ್ದರಾಮಯ್ಯ ಕಾಗದ ಬರೆಯುತ್ತಾರೆ. ಎಲ್ಲಾ ಸಂದರ್ಭದಲ್ಲೂ ಸಿದ್ದರಾಮಯ್ಯ ನವರೇ ಅಧಿಕಾರದಲ್ಲಿ ಇರುತ್ತಾರೆ. ಆ ಸಂದರ್ಭ ಅವರು ಬರೆದ ಪತ್ರಗಳನ್ನು ಬಿಡುಗಡೆ ಮಾಡಿದ್ದೇವೆ ಎಂದರು.
ಆ ಆಧಾರದ ಮೇಲೆಯೇ ಕೇಸ್ ಎಫ್ಐಆರ್ ಆಗಿದೆ. ಮೂಡಾಕ್ಕೆ ಆಗಿದ್ದನ್ನು ರೆವೆನ್ಯು ಎಂದು ಬರೆಸಿಕೊಂಡಿರೋದೆ ಮೊದಲನೇ ಅಪರಾಧ, 50:50 ಯಲ್ಲಿ ಕೊಡಿ ಎಂದು ಕೇಳಿರೋದು ಎರಡನೇ ಅಪರಾಧ, ಅದಾದ ನಂತರ ಜಮೀನು ಕಳೆದುಕೊಂಡ ಜಾಗದಲ್ಲಿ ಸೈಟ್ ಕೇಳಬೇಕು. ಅದನ್ನ ಬಿಟ್ಟು ವಿಜಯನಗರದಲ್ಲಿ ಸೈಟ್ ತೆಗೆದುಕೊಂಡಿರೋದು ಅಪರಾಧ, ಇನ್ನೊಂದು ನೋವಿನ ಸಂಗತಿ ಏನಂದ್ರೆ ಮುಖ್ಯಮಂತ್ರಿಗಳೇ 62 ಕೋಟಿ ಹಣ ಕೊಡಿ ಎಂದು ಕೇಳುವ ಪರಿಸ್ಥಿತಿ ಉದ್ಭವವಾಯ್ತಲ್ಲಾ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು..
ಇವರು ಸಿಕ್ಕಿಹಾಕಿಕೊಂಡಿರೋದು 14 ಸೈಟ್ ವಿಚಾರವಾಗಿ, ನಮಗೆ ಗೊತ್ತಿರುವ ಮಾಹಿತಿಯ ಪ್ರಕಾರ 5 ಸಾವಿರ ಕೋಟಿಯ ಅವ್ಯವಹಾರ ಆಗಿದೆ ಎಂದು ಗಂಭೀರ ಆರೋಪ ಇದೆ. ಅದು ಪೂರ್ಣ ತನಿಖೆ ಆಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಸಿದ್ದರಾಮಯ್ಯ ನವರು ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಅವರು ಕ್ಲಿಯರ್, ಕ್ಲೀನ್ ಆಗಿದ್ದೇವೆ ಎಂದು ಸಾಭೀತಾದ ಮೇಲೆ ಮುಖ್ಯಮಂತ್ರಿ ಆಗಲಿ ನಮ್ಮದೇನು ಅಭ್ಯಂತರವಿಲ್ಲ ಎಂದರು.
ಪ್ರಾಸಿಕ್ಯೂಷನ್ ಆದ ನಂತರ ನಾವು ಎಲ್ಲೂ ಅವರ ರಾಜೀನಾಮೆ ಕೊಡಿ ಎಂದು ಕೇಳಿಲ್ಲ. ಅದು ತನಿಖೆ ಅಷ್ಟೇ, ಆಮೇಲೆ ಇವರದ್ದು ತಪ್ಪೋ ಇಲ್ಲವೋ ಎಂಬುದನ್ನ ಹೇಳುತ್ತಾರೆ. ಈಗ ಅವರೇ ಸೈಟ್ ವಾಪಾಸ್ ಕೊಡಲು ಒಪ್ಪಿಗೆ ಕೊಟ್ಟಿದ್ದಾರೆ, ಇದರಿಂದ ಪ್ರೂವ್ ಆಗಿದೆ.
ಈಗ ಅವರು ಕ್ಲೀನ್ ಚಿಟ್ ಬರುವ ವರೆಗೆ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.












Click it and Unblock the Notifications