ಹಾಸನಾಂಬ ಜಾತ್ರೆ; ಮೈಸೂರು ದಸರಾ ಮಾದರಿಯಲ್ಲಿ ದೀಪಾಲಂಕಾರ
ಹಾಸನ, ಅಕ್ಟೋಬರ್, 13: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ಗರ್ಭಗುಡಿಯ ಬಾಗಿಲು ಇಂದು ಮಧ್ಯಾಹ್ನ 12:12ಕ್ಕೆ ತೆರೆದಿದೆ. ಇಂದಿನಿಂದ ಅಕ್ಟೋಬರ್ 27 ರವರೆಗೆ ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೊತ್ಸವ ನಡೆಯಲಿದೆ. ದೇವಿಯ ದರ್ಶನಕ್ಕೆ ಬಂದವರ ಕಣ್ಮನ ಸೆಳೆಯುವುದಕ್ಕೆಂದು ವಿಶೇಷವಾದ ಅಲಂಕಾರಗಳನ್ನು ಮಾಡಲಾಗಿದೆ.
ಗರ್ಭಗುಡಿಯ ಮುಂಭಾಗ ಹಣ್ಣು ಹಾಗೂ ತರಕಾರಿಯಿಂದ ಅದ್ದೂರಿಯಾಗಿ ಅಲಂಕಾರ ಮಾಡಿದ್ದಾರೆ. ದೇವಾಲಯದ ಮುಂಭಾಗ ವಿವಿಧ ಹೂಗಳಿಂದ ಜನರನ್ನು ಆಕರ್ಷಿಸುವಂತಹ ಅಲಂಕಾರ ಮಾಡಲಾಗಿದೆ. ಇನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೈಸೂರು ಮಾದರಿಯ ಲೈಟಿಂಗ್ ಅಳವಡಿಸಲಾಗಿದ್ದು, ಗಮನ ಸೆಳೆದಿದೆ. ಜಿಲ್ಲಾಡಳಿತದ ವ್ಯವಸ್ಥೆಯ ಬಗ್ಗೆ ಭಕ್ತರಿಂದ ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಗಮನ ಸೆಳೆಯಲಿರುವ ದೀಪಾಲಂಕಾರ
ನಗರದ ಪ್ರಮುಖ ವೃತ್ತಗಳು, ಬಡಾವಣೆಗಳಿಗೆ ದೀಪಾಲಂಕಾರ ಇರಲಿದ್ದು, ಆನೆ, ಕುದುರೆ, ಸಿಂಹಗಳ ಪ್ರತಿಕೃತಿಗಳನ್ನು ಸ್ಥಾಪಿಸಲಾಗುತ್ತದೆ. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳ ಕಾಲ ಜಿಲ್ಲಾಡಳಿತ ಹಾಸನಾಂಬ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಹಾಸನಾಂಬ ದೇವಾಲಯಕ್ಕೆ ಬೃಹತ್ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಸಾಧ್ಯತೆ ಇದೆ.

ನಾಳೆಯಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲನ್ನು ಓಪನ್ ಮಾಡಲಾಯಿತು. ನಾಳೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಹರಿದುಬರುವ ನಿರೀಕ್ಷೆ ಇದೆ. ಹಾಸನದ ಅದಿದೇವತೆ ಹಾಸನಾಂಬ ತಾಯಿ ವರ್ಷದ ಬಳಿಕ ದರ್ಶನ ಕಲ್ಪಿಸಿದ್ದಾಳೆ. ಆರದ ದೀಪ ಹಾಗೂ ಬಾಡದ ಹೂವನ್ನು ಕಂಡು ಭಕ್ತರು ಆಕರ್ಷಿತರಾಗಿದ್ದಾರೆ. ಸಚಿವ ಕೆ.ಗೋಪಾಲಯ್ಯ ಕುಟುಂಬ ಸಮೇತರಾಗಿ ದರ್ಶನ ಪಡೆದಿದ್ದಾರೆ.
ಇತಿಹಾಸ ಪ್ರಸಿದ್ದ, ಪವಾಡ ನಡೆಯುವ ಕ್ಷೇತ್ರ, ವರ್ಷದಲ್ಲಿ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬ ತಾಯಿ ಜಾತ್ರಾ ಮಹೋತ್ಸವಕ್ಕೆ ಇಂದು ವಿದ್ಯುಕ್ತ ಚಾಲನೆ ದೊರೆಯಿತು. ಬೆಳಗ್ಗೆಯಿಂದಲೇ ಪುರೋಹಿತರು ಗರ್ಭಗುಡಿಯ ಬಾಗಿಲಿಗೆ ವಿಶೇಷ ಪೂಜೆಯನ್ನ ಅರ್ಪಿಸಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಹಾಸನಾಂಬ ಗರ್ಭಗುಡಿ ಬಾಗಿಲು ತೆಗೆಯುವ ವಿಧಿವಿಧಾನಗಳನ್ನು ಆರಂಭಿಸಲಾಯಿತು. ಅರಸು ಮನೆತನದ ನಂಜೇರಾಜೇ ಅರಸ್ ಅವರು ದೇವಾಲಯದ ಮುಂಭಾಗ ಬಾಳೆ ಗಿಡಕ್ಕೆ ವಿಶೇಷ ಪೂಜೆಯನ್ನು ನೆರವೇರಿಸಿದರು.

ಪುರೋಹಿತರ ತಂಡ ಇಂದು ದೇವಾಲಯದ ಒಳಭಾಗದಲ್ಲಿ ಸ್ವಚ್ಛತೆ ಮಾಡಿ, ಸುಣ್ಣಬಣ್ಣ ಬಳಿಯುತ್ತಾರೆ. ಬಳಿಕ ದೇವಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ಹಾಗೂ ನೈವೇದ್ಯವನ್ನು ನೆರವೇರಿಸುತ್ತಾರೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕರಿಗೆ ದರ್ಶನ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕೊರೊನಾ ಬಳಿಕ ಅದ್ದೂರಿಯಾಗಿ ಜಾತ್ರಾ ಮಹೋತ್ಸವವನ್ನು ಜಿಲ್ಲಾಡಳಿತ ಆಯೋಜನೆ ಮಾಡಿದೆ. ಶಾಸಕ ಪ್ರೀತಂಗೌಡ ಕೂಡ ದೇವಿಯ ದರ್ಶನ ಮಾಡಿ, ದೇವಿಯ ಪವಾಡವನ್ನು ಕೊಂಡಾಡಿದರು.












Click it and Unblock the Notifications