ಹಾಸನ; 2023ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿ ಎಂದು ಎಚ್.ಡಿ.ರೇವಣ್ಣ ಪ್ರಾರ್ಥನೆ
ಹಾಸನ, ಅಕ್ಟೋಬರ್, 14: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಭಕ್ತಸಾಗರ ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವಿಯನ್ನು ನೋಡಿ ಕಣ್ತುಂಬಿಕೊಂಡರು. ಹಾಗೆಯೇ ಎಚ್.ಡಿ.ರೇವಣ್ಣ ಹಾಸನಾಂಬೆಯ ದರ್ಶನ ಪಡೆದು ಮಾತನಾಡಿದ್ದು, 2023ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿ ಅಂತಾ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಹಾಸನಂಬೆಯ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗಿತ್ತು. ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಸರಳವಾಗಿ ಜಾತ್ರಾ ಮಹೋತ್ಸವವನ್ನು ಆಚರಿಸಲಾಗಿತ್ತು. ಆದರೆ ಈ ಬಾರಿ ಮಹಾಮಾರಿ ಕೊರೊನಾ ತೊಲಗಿದ ಕಾರಣ ಅದ್ಧೂರಿಯಾಗಿ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಿದ್ದು, ತಾಯಿಯ ದರ್ಶನ ಪಡೆಯಲು ಭಕ್ತರ ದಂಡೇ ಹರಿದುಬಂದಿದೆ. ಭಕ್ತರು ಕಿಕ್ಕಿರಿದು ಬರುವ ಕಾರಣ ದೇವಾಲಯದ ಹೊರಭಾಗದಿಂದಲೂ ದರ್ಶನಕ್ಕೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ.
ಅಕ್ಟೋಬರ್ 13ರಿಂದ ಅಕ್ಟೋಬರ್ 27ರವರೆಗೂ ದೇಗುಲದ ಬಾಗಿಲು ಓಪನ್ ಆಗಿರುತ್ತದೆ. ಆದರೆ ನಿನ್ನೆ ಮೊದಲ ದಿನವಾದ ಕಾರಣ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಅಕ್ಟೋಬರ್ 13ರಂದು 12 ಗಂಟೆ 12 ನಿಮಿಷಕ್ಕೆ ಗರ್ಭಗುಡಿಗೆ ಹಾಕಿದ್ದ ಬೀಗವನ್ನು ತೆರೆಯಲಾಗಿತ್ತು. ನಂತರ ಅರ್ಚಕರು ಗರ್ಭಗುಡಿ ಬಾಗಿಲಿಗೆ ಮಹಾ ಮಂಗಳಾರತಿಯನ್ನು ನೆರವೇರಿಸಿದ್ದರು. ಸತತ ಒಂದು ಗಂಟೆಗಳ ಕಾಲ ಗರ್ಭಗುಡಿ ಬಾಗಿಲಿಗೆ ಪೂಜೆ ಮಾಡಿದ್ದರು. ಒಟ್ಟು 12 ದಿನ ಸಾರ್ವಜನಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ ಮೊದಲ ದಿನ ನಿನ್ನೆ ಹಾಸನಾಂಬೆ ದರ್ಶನ ಸಿಗದೆ ಭಕ್ತರು ಪರದಾಡಿದ್ದರು.

ಇನ್ನು ಆಗಮಿಸುತ್ತಲೇ ಇದ್ದಾರೆ ಭಕ್ತರು
ವರ್ಷದ ಹಿಂದೆ ಇಟ್ಟ ಹೂ ಬಾಡುವುದಿಲ್ಲ, ದೀಪ ಆರುವುದಿಲ್ಲ ಎಂಬ ಪವಾಡವನ್ನು ನೋಡಲು ಭಕ್ತರು ಕುತೂಹಲದಿಂದ ನೆರೆದಿದ್ದರು. ಭಕ್ತರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ದೇವಿಯ ದರ್ಶನಕ್ಕೆ ಆಗಮಿಸುತ್ತಲೇ ಇದ್ದಾರೆ. ಮಾಜಿ ಸಚಿವ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ ಆಗಮಿಸಿದ್ದು, ತಾಯಿಯ ದರ್ಶನ ಪಡೆದರು. ಗರ್ಭಗುಡಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಇದ್ದು, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತಾಯಿಯ ದರ್ಶನ ಪಡೆದ ಬಳಿಕ ಮಾತಾನಾಡಿದ ರೇವಣ್ಣ, ರಾಜ್ಯದ ಜನರಿಗೆ ಒಳ್ಳೆಯದಾಗಬೇಕು. ಮಳೆ, ಬೆಳೆ ಆಗಿ ರೈತರು ಸಮೃದ್ದಿ ಆಗಿರಬೇಕು ಎಂದು ಪ್ರಾರ್ಥಿಸಿದ್ದೇನೆ. ದೇವೇಗೌಡರು, ಚೆನ್ನಮ್ಮ ಅವರಿಗೆ ಆರೋಗ್ಯ ಕೊಡಲಿ. ಹಾಗೆಯೇ 2023ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿ. ನಮ್ಮ ಜಿಲ್ಲೆಯಲ್ಲಿ ಏಳಕ್ಕೆ ಏಳೂ ಸ್ಥಾನಗಳು ಜೆಡಿಎಸ್ ಗೆಲ್ಲಲಿ ಅಂತಾ ಪ್ರಾರ್ಥಿಸಿದ್ದೇನೆ ಎಂದರು.

ಸರದಿಯಲ್ಲಿ ನಿಂತು ದರ್ಶನ ಪಡೆದ ಭಕ್ತರು
ಈ ಸಂದರ್ಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಎಂಎಲ್‌ಸಿ ಸೂರಜ್ ರೇವಣ್ಣ ಸೇರಿದಂತೆ ಅನೇಕ ಗಣ್ಯರು ತಾಯಿಯ ದರ್ಶನ ಪಡೆದು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ವರ್ಷದಲ್ಲಿ ಒಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ತಾಯಿ ಹಾಸನಾಂಬೆ ಜಾತ್ರಾ ಮಹೋತ್ಸವವನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ಹಲವು ಗಣ್ಯರು ಹಾಗೂ ಸಾವಿರಾರು ಜನ ಭಕ್ತರು ದೇವಿಯ ದರ್ಶನ ಪಡೆದರು.

ವಿಶೇಷ ದರ್ಶನಕ್ಕೆ ನಿಗದಿಯಾದ ಹಣ
ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಸಬೇಕಿತ್ತು. ಆದರೆ ಕಳೆದ ರಾತ್ರಿ ಸುರಿದ ಮಳೆ ಹಾಗೂ ವಿದ್ಯುತ್ ಸಮಸ್ಯೆಯಿಂದ ತಡವಾಗಿ ಆರಂಭಿಸಲಾಯಿತು. ಭಕ್ತರು ಕಿಲೋ ಮೀಟರ್‌ಗಟ್ಟಲೇ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ವಿಶೇಷ ದರ್ಶನಕ್ಕೆ 1,000 ರೂಪಾಯಿ ಹಾಗೂ 300 ರೂಪಾಯಿ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.

ದೇವಿ ದರ್ಶನ ಪಡೆಯಲು ನೆರೆದಿದ್ದ ಭಕ್ತಸಾಗರ
ರಾಜ್ಯದ ಮೂಲೆ ಮೂಲೆಗಳಿಂದ ಬಂದಂತಹ ಭಕ್ತರಿಗೆ ಯಾವುದೇ ಸಮಸ್ಯೆ ಆಗಬಾರದು ಎಂದು ಶೌಚಾಲಯ, ಮೆಡಿಕಲ್, ಪಾರ್ಕಿಂಗ್, ಕುಡಿಯುವ ನೀರು ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ನೈವೇದ್ಯದ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಯವರೆಗೂ ಮಾತ್ರ ದರ್ಶನ ಅವಕಾಶ ನೀಡಲಾಗಿತ್ತು. ಅಕ್ಟೋಬರ್ 15ರಿಂದ ರಾತ್ರಿ 10 ಗಂಟೆಯವರೆಗೂ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 15, 16 ವೀಕೆಂಡ್ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications