ಹಾಸನದಲ್ಲಿ ಶಕ್ತಿದೇವತೆ ಹಾಸನಾಂಬೆ ನೆಲೆನಿಂತಿದ್ದೇಗೆ? ದೇವಿಯ ವೈಶಿಷ್ಟ್ಯವೇನು?
ಹಾಸನ, ಅಕ್ಟೋಬರ್ 21: ಹಾಸನದ ಶಕ್ತಿದೇವತೆ ಹಾಸನಾಂಬ ದೇವಿಯ ದೇಗುಲದ ಬಾಗಿಲನ್ನು ವರ್ಷಕ್ಕೊಮ್ಮೆ ತೆರೆದು ವಿವಿಧ ಪೂಜಾ ಕೈಂಕರ್ಯದೊಂದಿಗೆ ತಾಯಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡುವುದು ಹಿಂದಿನಿಂದಲೂ ನಡೆದು ಬಂದಿದ್ದು ಅದರಂತೆ ಈ ಬಾರಿಯೂ ಅ.೨೪ರಂದು ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ದೇಗುಲದ ಬಾಗಿಲನ್ನು ತೆರೆಯಲಾಗುತ್ತಿದ್ದು, ಹನ್ನೊಂದು ದಿನಗಳ ಕಾಲ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿದೆ. ಇದೀಗ ಈ ಶುಭಗಳಿಗೆಗಾಗಿ ಭಕ್ತರು ಕಾತರದಿಂದ ಕಾಯುತ್ತಿದ್ದು ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿದೆ.
ಹಾಸನಾಂಬ ದೇವಿಯ ದರ್ಶನ ವರ್ಷಕ್ಕೊಮ್ಮೆ ಮಾತ್ರ ಸಿಗುತ್ತದೆ. ದೇಗುಲದ ಬಾಗಿಲನ್ನು ಪ್ರತಿವರ್ಷ ಅಶ್ವೀಜ ಮಾಸ ಪೂರ್ಣಿಮೆಯ ನಂತರ ಬರುವ ಗುರುವಾರ(ಅ.24) ದಂದು ತೆಗೆದು ದೀಪಾವಳಿಯ ಬಲಿಪಾಡ್ಯಮಿಯ ಮಾರನೇ ದಿನ (ನ.3) ಬಾಗಿಲನ್ನು ಮುಚ್ಚಲಾಗುತ್ತದೆ. ದೇವಸ್ಥಾನದ ಬಾಗಿಲನ್ನು ಮುಚ್ಚುವಾಗ ಹಚ್ಚಿದ್ದ ದೀಪ ಮತ್ತೆ ಮುಂದಿನ ವರ್ಷ ಬಾಗಿಲು ತೆಗೆಯುವವರೆಗೆ ಗರ್ಭಗುಡಿಯಲ್ಲಿ ಆರದೆ ಉರಿಯುತ್ತಿರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಇನ್ನು ದೇವಿಯ ಬಾಗಿಲನ್ನು ತೆರಯುವಾಗ ಮತ್ತು ಮುಚ್ಚುವ ದಿನ ವಿಧಿ ವಿಧಾನದಂತೆ ಪೂಜಾ ಕೈಂಕರ್ಯಗಳು ನಡೆಯುವುದನ್ನು ನಾವು ಕಾಣಬಹುದಾಗಿದೆ. ದೇವಾಲಯದ ಬಾಗಿಲು ತೆರೆಯುವ ದಿನದಂದು ಮೊದಲಿಗೆ ತಳವಾರ ಮನೆತನದವರು ದೇಗುಲದ ಬಳಿ ನೆರೆಯುತ್ತಾರೆ ನಂತರ ದೇವಿಯ ಗರ್ಭಗುಡಿಯ ಮುಂದೆ ಬಾಳೆಕಂದನ್ನು ಅರಸು ಮನೆತನದವರು ನೆಟ್ಟು ಹಾಸನಾಂಬೆಯನ್ನು ಪ್ರಾರ್ಥಿಸಿ ಬಳಿಕ ಬಾಳೆಕಂದನ್ನು ಕತ್ತರಿಸುವುದರೊಂದಿಗೆ ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ.
ಬಾಳೆ ಕಂದು ಕಡಿದು ಶಾಂತಿ
ಹಾಸನಾಂಬೆಯ ದೇಗುಲದ ಬಾಗಿಲನ್ನು ಏಳು ದಿನಗಳಿಗಿಂತ ಕಡಿಮೆ ಮತ್ತು ಹದಿನಾರು ದಿನಗಳಿಗಿಂತ ಹೆಚ್ಚು ತೆರೆಯದಂತೆ ಧಾರ್ಮಿಕ ನಿಯಮವಿದೆ. ಇನ್ನು ದೇವಿಯ ಎದುರು ಪ್ರಾಣಿಬಲಿಗೆ ಅವಕಾಶ ಇಲ್ಲದ ಕಾರಣ ಬಾಗಿಲು ತೆಗೆಯುವ ದಿನದಂದು ಬಾಳೆ ಕಂದು ಕಡಿದು ಶಾಂತಿ ಮಾಡಲಾಗುತ್ತದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ ಏಕೆಂದರೆ ವರ್ಷವಿಡೀ ಬಾಗಿಲ ಮರೆಯಲ್ಲಿ ಇರುವ ದೇವಿ ಒಮ್ಮೆಲೆ ಬೀರುವ ದೃಷ್ಟಿ ನೇರವಾಗಿ ಜನರ ಮೇಲೆ ಬೀಳಬಾರದೆಂದು ಬಾಳೆ ಕಂಬ ಕಡಿಯಲಾಗುತ್ತದೆ.

ಹಾಸನಾಂಬೆ ದೇಗುಲದ ಬಾಗಿಲು ತೆರೆದ ನಂತರ ಮೊದಲ ದಿನದಂದು ತಾಯಿ ಹಾಸನಾಂಬೆಗೆ ಯಾವುದೇ ರೀತಿಯ ಆಭರಣಗಳನ್ನು ಧರಿಸುವ ಸಂಪ್ರದಾಯವಿಲ್ಲ. ಆದರೆ ಎರಡನೆಯ ದಿನ ಜಿಲ್ಲಾ ಖಜಾನೆಯಿಂದ ದೇವಿಯ ಆಭರಣ ವಸ್ತ್ರಗಳನ್ನು ಪಲ್ಲಕಿಯಲ್ಲಿ ತಂದು ಅಲಂಕರಿಸಿ ಪೂಜೆ ಮಾಡಿ ನೈವೇದ್ಯ ಅರ್ಪಿಸಲಾಗುವುದು. ಹಾಸನಾಂಬೆಯನ್ನು ಕುಂಭಗಳ ರೂಪದಲ್ಲಿ ಪ್ರತಿಷ್ಠಾಪಿಸಿ ಈ ಕುಂಭಗಳಿಗೆ ಹೆಣ್ಣು ದೇವತೆಯಂತೆ ಮುಖವಾಡಗಳನ್ನು ಮಾಡಿ ಅಲಂಕರಿಸುವುದು ಇಲ್ಲಿನ ವಿಶೇಷತೆಯಾಗಿದೆ.
ದೇಗುಲ ನಿರ್ಮಾಣವಾಗಿದ್ದು ಹೇಗೆ?
ವಾರಾಣಸಿಯಿಂದ ದಕ್ಷಿಣಾಭಿಮುಖವಾಗಿ ವಾಯುವಿಹಾರಕ್ಕೆಂದು ಬಂದ ಸಪ್ತ ಮಾತೃಕೆಯರಾದ ಬ್ರಾಹ್ಮೀದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ದುರ್ಗೆ, ಚಾಮುಂಡಿ, ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಸಾವಿರಾರು ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲೆಸಿದರೆಂದೂ ಈ ಪೈಕಿ ವೈಷ್ಣವಿ, ಕೌಮಾರಿ, ಮಹೇಶ್ವರಿಯರು ಹಾಸನಾಂಬೆ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆ ನಿಂತರೆ, ಬ್ರಾಹ್ಮೀದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದಳು. ಚಾಮುಂಡಿ, ವಾರಾಹಿ, ಇಂದ್ರಾಣಿಯರು ನಗರದ ಮಧ್ಯೆ ಇರುವ ದೇವಿಗೆರೆಯ ಬಳಿ ನೆಲೆಸಿದರು ಎಂದು ಹೇಳಲಾಗುತ್ತದೆ.

ಇತಿಹಾಸದ ಬಗ್ಗೆ ಮೆಲುಕು ಹಾಕಿದರೆ ದೇವಾಲಯದ ಕುರಿತಂತೆ ಕಥೆಗಳಿದ್ದು, ಕ್ರಿ.ಶ. ೧೨ನೇ ಶತಮಾನದಲ್ಲಿ ಚೋಳರ ಅರಸ, ಪಾಳೆಗಾರ ಕೃಷ್ಣಪ್ಪನಾಯಕ, ಚನ್ನಪಟ್ಟಣದಲ್ಲಿ ಕೋಟೆಯೊಂದನ್ನು ಕಟ್ಟಿದ್ದ. ಅವನ ನಂತರ ಬಂದ ಸಂಜೀವನಾಯಕ, ಕಾರ್ಯನಿಮಿತ್ತ ಹೊರಗಡೆ ಪ್ರಯಾಣ ಹೊರಟಾಗ ಮೊಲ ಅಡ್ಡ ಬಂತು. ಇದು ಅಪಶಕುನವೆಂದು ಭಾವಿಸಿದ ಆತ ಮುಂದಿನ ಪ್ರಯಾಣ ರದ್ದುಗೊಳಿಸಲು ನಿರ್ಧರಿಸಿದ. ಈ ವೇಳೆ ಪ್ರತ್ಯಕ್ಷಳಾದ ಹಾಸನಾಂಬೆ, ನಾನಿರುವ ಈ ಸ್ಥಳದಲ್ಲಿ ದೇಗುಲವೊಂದನ್ನು ಕಟ್ಟು. ನಾನು ಹಾಸನಾಂಬೆ ಎಂದೇ ಹೆಸರಾಗಿ ಇಲ್ಲಿ ನೆಲೆಸುವೆ ಎಂದಳಂತೆ. ಅದರಂತೆ ದೇಗುಲ ನಿರ್ಮಾಣ ಮಾಡಲಾಯಿತು ಎಂದು ಹೇಳಲಾಗುತ್ತಿದೆ.
ಕಳ್ಳಪನ ಗುಡಿಯ ವಿಶೇಷತೆ ಏನು?
ದೇವಿಯ ಶಕ್ತಿಯ ಕುರಿತಂತೆಯೂ ಕಥೆಗಳಿದ್ದು ಅದಕ್ಕೆ ದೇಗುಲದ ಬಳಿಯಿರುವ ಕಳ್ಳಪನ ಗುಡಿ ಸಾಕ್ಷಿಯಾಗಿದೆ. ಕಥೆಯ ಪ್ರಕಾರ ದೇವಿ ಮೇಲೆ ಹಾಕಿರುವ ಆಭರಣಗಳನ್ನು ಅಪಹರಿಸಲೆಂದು ನಾಲ್ವರು ಕಳ್ಳರು ಒಳಪ್ರವೇಶಿಸಿ ದೇವಿಯ ಮೈಮೇಲಿದ್ದ ಆಭರಣಗಳನ್ನು ತೆಗೆಯಲು ಕೈ ಇರಿಸಿದಾಗ, ಕೋಪಗೊಂಡ ದೇವಿ ಶಾಪ ನೀಡಿದ ಪರಿಣಾಮ ಅವರು ಕಲ್ಲಾದರೆಂದೂ ಅದರಂತೆ ದೇವಾಲಯದ ಪಕ್ಕದಲ್ಲಿಯೇ ಕಲ್ಲಾದ ಕಳ್ಳರ ಗುಡಿ ಇದ್ದು, ಅದನ್ನು ಕಳ್ಳಪನ ಗುಡಿ ಎಂದೇ ಕರೆಯಲಾಗುತ್ತಿದೆ. ಕಳ್ಳಪ್ಪನ ಗುಡಿಯ ಪಕ್ಕದಲ್ಲಿ ಹಾಲಪ್ಪನ ಗದ್ದುಗೆಯನ್ನು ಕಾಣಬಹುದಾಗಿದೆ. ಇಲ್ಲಿರುವ ಐದು ಅಡಿ ಉದ್ದದ ಒಂದು ಕಂಬವನ್ನೇ ಹಾಲಪ್ಪನ ಗದ್ದುಗೆ ಎಂದು ನಂಬಿರುವ ಭಕ್ತರು, ಪೂಜೆ ಸಲ್ಲಿಸುತ್ತಾರೆ.
ಸಪ್ತ ಮಾತೃಕೆಯರು ನೆಲೆಸಿರುವಲ್ಲಿ ವೀರಭದ್ರಸ್ವಾಮಿಯೂ ಇದ್ದು ಆತನನ್ನು ಪೂಜಿಸಲಾಗುತ್ತಿದೆ. ಇಲ್ಲಿ ನಾಗರ ಕಲ್ಲುಗಳೂ ಇವೆ. ವೀರಭದ್ರೇಶ್ವರ, ಎಡಭಾಗದಲ್ಲಿ ದರ್ಬಾರ್ ಗಣಪತಿಯಿದೆ. ಇದೆಲ್ಲದರ ನಡುವೆ ಹಾಸನಾಂಬೆ ಕುರಿತಂತೆ ದಂತಕಥೆಯೊಂದಿದ್ದು, ಅದು ಏನೆಂದರೆ ಸದಾ ಅತ್ತೆಯ ಕಿರುಕುಳದಿಂದ ಬೇಸತ್ತಿದ್ದ ಸೊಸೆ ದೇವಿಯ ಮುಂದೆ ಮಂಡಿಯೂರಿ ತನ್ನ ನೋವನ್ನು ತೋಡಿಕೊಳ್ಳುತ್ತಾ ದೇವಿಯನ್ನು ಪ್ರಾರ್ಥಿಸುತ್ತಿದ್ದಳಂತೆ. ಒಮ್ಮೆ ಪ್ರತಿದಿನವೂ ದೇವಿಯ ದರ್ಶನಕ್ಕೆ ತೆರಳುತ್ತಿದ್ದ ಸೊಸೆಯ ಮೇಲೆ ಅನುಮಾನಗೊಂಡ ಅತ್ತೆ ಸೊಸೆಯನ್ನು ಹಿಂಬಾಲಿಸಿ ಬಂದಳಂತೆ. ಈ ವೇಳೆ ಸೊಸೆ ದೇವಿಯ ಮುಂದೆ ಪ್ರಾರ್ಥಿಸುತ್ತಿದ್ದದ್ದು ಕಂಡು ಬಂದಿತಂತೆ.
ಕಲಿಯುಗ ಅಂತ್ಯವಾಗುವುದು ಹೇಗೆ?
ಇದರಿಂದ ಕೋಪಗೊಂಡ ಅತ್ತೆ ನಿನಗೆ ಮನೆಯ ಕೆಲಸಕ್ಕಿಂತ ಈ ದೇವಿಯ ಪ್ರಾರ್ಥನೆ ಜಾಸ್ತಿ ಆಯಿತಾ ಎಂದು ಕೋಪದಿಂದ ಪಕ್ಕದಲ್ಲಿದ್ದ ಚಂದ್ರಬಟ್ಟಲನ್ನು ತೆಗೆದು ಧ್ಯಾನದಲ್ಲಿದ್ದ ಸೊಸೆಯ ಮೇಲೆ ಕುಕ್ಕಿದಳಂತೆ. ಈ ವೇಳೆ ಸೊಸೆ ನೋವು ತಾಳಲಾರದೆ ಹಾಸನಾಂಬೆ ಎಂದು ಚೀರಿದಳಂತೆ. ಸೊಸೆಯ ಕಷ್ಟ ನೋಡಲಾರದೆ ಮತ್ತು ಆಕೆಯ ಭಕ್ತಿಗೆ ಮೆಚ್ಚಿ ದೇವಿಯೇ ಪ್ರತ್ಯಕ್ಷಳಾಗಿ ನಿನ್ನ ಕಾವಲಿಗೆ ನಾನಿರುವುದಾಗಿ ವಾಗ್ದಾನ ಮಾಡಿ ಕಲ್ಲಾಗಿ ನೆಲೆಸಿದಳೆಂಬ ಕಥೆಯೂ ಪ್ರಚಲಿತದಲ್ಲಿದೆ.
ಇನ್ನು ದೇವಿಯ ದರ್ಶನದ ಕೊನೆಯ ದಿನ ಹಚ್ಚಿದ ದೀಪ ಆರದೆ, ಹೂವು ಬಾಡದೆ ಮುಂದಿನ ವರ್ಷ ದೇಗುಲದ ಬಾಗಿಲು ತೆರೆಯುವ ತನಕ ಇರುತ್ತದೆ ಎಂಬ ನಂಬಿಕೆಯೂ ಇದ್ದು, ಈ ಬಗ್ಗೆ ಹಿಂದೆ ವಿವಾದವೂ ಏರ್ಪಟ್ಟಿತ್ತು. ದೇವರ ಪವಾಡವನ್ನು ಬಯಲು ಮಾಡುವಂತೆಯೂ ಕೆಲವರು ಒತ್ತಾಯಿಸಿದ್ದರು. ಆ ನಂತರ ವಿವಾದ ತಣ್ಣಗಾಯಿತು. ದೇವರ ಕುರಿತಂತೆ ಪ್ರತಿಯೊಬ್ಬರಿಗೂ ಅವರದ್ದೇ ಆದ ನಂಬಿಕೆಯಿದ್ದು ಅದು ಅವರವರಿಗೆ ಬಿಟ್ಟ ವಿಚಾರವಾಗಿದೆ. ಕೆಲವರ ಪ್ರಕಾರ ಹಾಸನಾಂಬೆ ದೇವಿ ಪ್ರತಿಷ್ಠಾಪನೆಗೊಂಡ ಸ್ಥಳದಿಂದ ಪ್ರತೀ ವರ್ಷವೂ ಭತ್ತದ ಕಾಳಿನ ತುದಿಯಷ್ಟು ಚಲಿಸುವಳೆಂದೂ, ದೇವಿಯ ಪಾದ ತಲುಪಿದ ಕ್ಷಣದಲ್ಲೇ ಕಲಿಯುಗ ಅಂತ್ಯವಾಗುತ್ತದೆ ಎಂಬ ಮಾತುಗಳಿವೆ.












Click it and Unblock the Notifications