ಪಂಚಾಯಿತಿ ಫೈಟ್; ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಅಪಹರಣ!
ಹಾಸನ, ಫೆಬ್ರವರಿ 03: ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಗೊಂಡಿದೆ. ಅಧ್ಯಕ್ಷರಾಗಲು ಪೈಪೋಟಿ ಜೋರಾಗಿದೆ. ಹಾಸನದಲ್ಲಿ ಅಧ್ಯಕ್ಷರಾಗಬೇಕಿದ್ದ ಅಭ್ಯರ್ಥಿಯನ್ನು ಅಪಹರಣ ಮಾಡಲಾಗಿದೆ.
ಹಾಸನ ತಾಲೂಕಿನ ಮಡೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಬೇಕಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾರೇಕೆರೆಯಿಂದ ಗೆದ್ದಿದ್ದ ಭಾಗ್ಯಮ್ಮ ಸ್ಪರ್ಧಿಸಲು ತೀರ್ಮಾನಿಸಿದ್ದರು.
ಬೆಂಗಳೂರಿನ ಸಂಬಂಧಿಕರ ಮನೆಯಿಂದ ಆಗಮಿಸುತ್ತಿದ್ದ ಭಾಗ್ಯಮ್ಮ ಅವರನ್ನು ಅಪಹರಣ ಮಾಡಲಾಗಿದೆ. ಭಾಗ್ಯಮ್ಮ ಪುತ್ರ ಈ ಕುರಿತು ಶಾಂತಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಲೋಕೇಶ್ ಎಂಬುವವರು ಸಹ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಮಡೆನೂರು, ಕಾರೇಕೆರೆ ಗ್ರಾಮದ ವೆಂಕಟೇಶ್, ಹಿರಿಯಣ್ಣ ಗೌಡ, ಸುರೇಂದ್ರ ಎಂಬುವವರು ತಮ್ಮ ತಾಯಿಯನ್ನು ಅಪಹರಣ ಮಾಡಿದ್ದಾರೆ ಎಂದು ಭಾಗ್ಯಮ್ಮ ಪುತ್ರ ದೂರಿನಲ್ಲಿ ತಿಳಿಸಿದ್ದಾರೆ.
ಭಾಗ್ಯಮ್ಮ ಅವರಿಗೆ ಆರೋಗ್ಯ ಸಮಸ್ಯೆ ಇದೆ. ಅವರನ್ನು ತಕ್ಷಣ ಹುಡುಕಿಕೊಡಿ ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ. ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ನಡೆಸಿದ್ದಾರೆ.
2020ರ ಡಿಸೆಂಬರ್ 30ರಂದು ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟಗೊಂಡಿತ್ತು. ಈಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಆಯಾ ಜಿಲ್ಲೆಗಳಲ್ಲಿ ಪ್ರಕಟವಾಗುತ್ತಿದ್ದು, ಅಧಿಕಾರ ಪಡೆಯಲು ಭಾರಿ ಪೈಪೋಟಿ ಇದೆ.












Click it and Unblock the Notifications